ADVERTISEMENT

ಮುನ್ನೆಚ್ಚರಿಕೆ ಕ್ರಮದೊಂದಿಗೆ ಶಾಲೆಗಳು ಆರಂಭ: ಜಿಲ್ಲಾ ಪಂಚಾಯಿತಿ ಕಲಬುರ್ಗಿ ಸಿಇಒ

ಎಲ್ಲ ಶಿಕ್ಷಕರಿಗೆ ಕಡ್ಡಾಯ ಕೋವಿಡ್ ಟೆಸ್ಟ್: ಜಿಲ್ಲಾ ಪಂಚಾಯಿತಿ ಸಿಇಓ ಡಾ. ರಾಜಾ ಪಿ.

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 7:56 IST
Last Updated 28 ಡಿಸೆಂಬರ್ 2020, 7:56 IST
ಡಾ. ರಾಜಾ ಪಿ.
ಡಾ. ರಾಜಾ ಪಿ.   

ಕಲಬುರ್ಗಿ: ‘ಜನವರಿ 1ರಿಂದ ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳು ಆರಂಭಗೊಳ್ಳಲಿದ್ದು, ಇದಕ್ಕಾಗಿ ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ರಾಜಾ ಪಿ. ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಿ ತರಗತಿಯಲ್ಲಿ ಗರಿಷ್ಠ 20 ವಿದ್ಯಾರ್ಥಿಗಳು ಕುಳಿತುಕೊಳ್ಳಬಹುದು. ಪಾಠ ಹೇಳುವ ಶಿಕ್ಷಕರು ಜನವರಿ 1ಕ್ಕೂ ಮುನ್ನ ಆರ್‌ಟಿ–ಪಿಸಿಆರ್‌ ಪರೀಕ್ಷೆಗೆ ಒಳಗಾಗಿ ಕೋವಿಡ್‌ ನೆಗೆಟಿವ್ ಪ್ರಮಾಣಪತ್ರವನ್ನು ಪಡೆದಿರಬೇಕು. ಅದಕ್ಕಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ಗಂಟಲು ದ್ರವದ ಮಾದರಿ ಸಂಗ್ರಹಿಸಲಾಗುತ್ತಿದೆ. ಸುಮಾರು ಎಂಟು ಸಾವಿರ ಶಿಕ್ಷಕರಿದ್ದು, ಅವರು ಕೋವಿಡ್‌ ತಪಾಸಣೆಗೆ ಒಳಗಾಗಲೇಬೇಕು. ರಾಜ್ಯಮಟ್ಟದ ತಾಂತ್ರಿಕ ಸಮಿತಿ ಈ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಅದರಂತೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದೆ’ ಎಂದರು.

‘ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮಾತ್ರ ತರಗತಿಗಳನ್ನು ನಡೆಸಲಾಗುವುದು. ಹೀಗಾಗಿ ಮಧ್ಯಾಹ್ನದ ಬಿಸಿಯೂಟವನ್ನು ಕೊಡುತ್ತಿಲ್ಲ. ಬದಲಾಗಿ ವಿದ್ಯಾರ್ಥಿಗಳಿಗೆ ಪಡಿತರ ವಿತರಿಸಲಾಗುತ್ತಿದೆ. ಮನೆಯಿಂದಲೇ ಕುಡಿಯುವ ನೀರು ತರಬೇಕು. ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ತಿಳಿಸಲಾಗಿದೆ. ಬಿಸಿ ನೀರನ್ನು ವಿತರಿಸಲಾಗುವುದು. ಶಿಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ವಿದ್ಯಾರ್ಥಿಗಳಿಗೂ ಮಾಸ್ಕ್ ಧರಿಸುವಂತೆ ಪ್ರೋತ್ಸಾಹಿಸಲಾಗುತ್ತಿದೆ. ಸುಮಾರು 40 ಸಾವಿರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿದ್ದು, ಅಷ್ಟೂ ಜನ ಶಾಲೆಗಳಿಗೆ ಬರಲೇಬೇಕು ಎಂದೇನಿಲ್ಲ. ಮನೆಯಲ್ಲಿ ಕುಳಿತೇ ಆನ್‌ಲೈನ್ ಕ್ಲಾಸ್‌ಗಳನ್ನು ಆಲಿಸಬಹುದು. ಜೊತೆಗೆ, ಮಧ್ಯಾಹ್ನದ ಬಳಿಕ ಚಂದನ ವಾಹಿನಿಯಲ್ಲಿ ಪಾಠಗಳು ಪ್ರಸಾರಗೊಳ್ಳಲಿದ್ದು, ಅವುಗಳನ್ನೂ ಕೇಳಬಹುದು. ಆದಾಗ್ಯೂ, ಶಾಲೆಗಳಿಗೆ ವಿದ್ಯಾರ್ಥಿಗಳಿಗೆ ಬರಬೇಕು ಎಂಬುದು ನಮ್ಮ ನಿರೀಕ್ಷೆ. ಕೋವಿಡ್‌ ಕೇಂದ್ರಗಳಾಗಿದ್ದ ಶಾಲೆಗಳನ್ನು ಸ್ಯಾನಿಟೈಜ್ ಮಾಡಿಸಲಾಗುತ್ತದೆ. ಸಣ್ಣಪುಟ್ಟ ದುರಸ್ತಿಗಳನ್ನು ಮಾಡಿಸುವಂತೆಯೂ ತಿಳಿಸಲಾಗಿದೆ’ ಎಂದರು.

ADVERTISEMENT

6ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾಗಮ ತರಗತಿಗಳನ್ನು ನಡೆಸಲಾಗುವುದು. ಶಾಲೆಗಳಲ್ಲಿಯೇ ವಿದ್ಯಾಗಮ ನಡೆಸುತ್ತಿದ್ದರೆ, ಆ ಸಮಯಕ್ಕೆ ತೊಂದರೆಯಾಗದಂತೆ ಎಸ್ಸೆಸ್ಸೆಲ್ಸಿ, ಪಿಯು ತರಗತಿಗಳನ್ನು ನಡೆಸಲಾಗುವುದು. ಶಾಲೆಗಳಲ್ಲಿ ಸೋಪು ಮತ್ತು ಸ್ಯಾನಿಟೈಜರ್‌ ಇಡುವಂತೆ ಸೂಚಿಸಲಾಗಿದೆ ಎಂದು ವಿವರಿಸಿದರು.

ಪ್ರತಿ ಶಾಲೆಯಲ್ಲಿ ಒಂದೊಂದು ಐಸೋಲೇಶನ್‌ ಕೊಠಡಿಗಳನ್ನು ಗುರುತಿಸಲಾಗಿದ್ದು, ಜ್ವರದ ಲಕ್ಷಣಗಳು ಕಂಡು ಬಂದ ವಿದ್ಯಾರ್ಥಿಗಳನ್ನು ಅಲ್ಲಿ ಇರಿಸಲಾಗುವುದು. ಪ್ರತಿ 15 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರನ್ನು ಮೇಲ್ವಿಚಾರಕರನ್ನಾಗಿ ನಿಯೋಜಿಸಲಾಗುತ್ತಿದ್ದು, ಆ ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರುಪೇರಾದರೆ ತಕ್ಷಣ ಶಾಲಾ ಮುಖ್ಯಸ್ಥರು ಹಾಗೂ ಪೋಷಕರಿಗೆ ಮಾಹಿತಿ ನೀಡಬೇಕು ಎಂದರು.

ಡಿಡಿಪಿಐ ಎಸ್‌.ಪಿ.ಬಾಡಗಂಡಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜಶೇಖರ ಮಾಲಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಸಾಮೂಹಿಕ ಪ್ರಾರ್ಥನೆ, ಆಟೋಟಗಳಿಲ್ಲ

ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಜನವರಿ 1ರಿಂದ ಆರಂಭ ತರಗತಿಗಳು ಆರಂಭವಾಗುತ್ತಿದ್ದರೂ ಸಾಮೂಹಿಕ ಪ್ರಾರ್ಥನೆ ಹಾಗೂ ಆಟೋಟಗಳಿಗೆ ಅವಕಾಶವಿಲ್ಲ. ಪರಸ್ಪರ ಅಂತರ ಕಾಪಾಡುವ ಅಗತ್ಯವಿರುವುದರಿಂದ ರಾಜ್ಯಮಟ್ಟದ ತಜ್ಞರ ಸಮಿತಿ ಸೂಚನೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಡಾ.ರಾಜಾ ಪಿ. ತಿಳಿಸಿದರು.

ಜಿಲ್ಲೆಯಲ್ಲಿ ನಿತ್ಯ 15ರಿಂದ 20 ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಸಾವಿನ ಸಂಖ್ಯೆ ಕಡಿಮೆಯಾಗಿದೆ. ಜಿಮ್ಸ್ ಆಸ್ಪತ್ರೆ ಹಾಗೂ ಇಎಸ್‌ಐ ಆಸ್ಪತ್ರೆಗಳನ್ನು ನಾನ್‌ ಕೋವಿಡ್‌ ಆಸ್ಪತ್ರೆಗಳನ್ನು ಘೋಷಿಸಲಾಗಿದ್ದು, ಕೋವಿಡ್‌ಯೇತರ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.