ADVERTISEMENT

ಕಲಬುರಗಿ: ಖಾಸಗಿ ಕನ್ನಡ ಶಾಲೆಗಳಿಗೆ ಬೇಕಿದೆ ಅನುದಾನ

ಕಲ್ಯಾಣ ಕರ್ನಾಟಕ ಭಾಗದಲ್ಲಿವೆ 4500 ಅನುದಾನ ರಹಿತ: ಅದರಲ್ಲಿ 1500 ಕನ್ನಡ ಶಾಲೆಗಳು

ಸಂತೋಷ ಈ.ಚಿನಗುಡಿ
Published 23 ಫೆಬ್ರುವರಿ 2022, 2:14 IST
Last Updated 23 ಫೆಬ್ರುವರಿ 2022, 2:14 IST
ಕಲ್ಯಾಣ ಕರ್ನಾಟಕ ಭಾಗದ ವಿವಿಧ ಶಿಕ್ಷಣ ಸಂಸ್ಥೆಗಳ ಮುಖಂಡರು ಹಾಗೂ ಶಿಕ್ಷಕರು ಅನುದಾನಕ್ಕಾಗಿ ಬೆಂಗಳೂರಿನಲ್ಲಿ ಧರಣಿ ಆರಂಭಿಸಿದ್ದಾರೆ
ಕಲ್ಯಾಣ ಕರ್ನಾಟಕ ಭಾಗದ ವಿವಿಧ ಶಿಕ್ಷಣ ಸಂಸ್ಥೆಗಳ ಮುಖಂಡರು ಹಾಗೂ ಶಿಕ್ಷಕರು ಅನುದಾನಕ್ಕಾಗಿ ಬೆಂಗಳೂರಿನಲ್ಲಿ ಧರಣಿ ಆರಂಭಿಸಿದ್ದಾರೆ   

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕನ್ನಡ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸಬೇಕು ಎಂಬ ಬೇಡಿಕೆ ದಶಕದಿಂದಲೂ ಜೀವಂತವಾಗಿದೆ. ಇದಕ್ಕಾಗಿ ಉಪವಾಸ ಸತ್ಯಾಗ್ರಹ, ಬೆಂಗಳೂರು ಚಲೊ, ಭಿಕ್ಷಾಟನೆ, ಬೊಬ್ಬೆ ಹೊಡೆಯುವುದು, ಹಲಗೆ ಸದ್ದು, ಶಾಲೆ ಬಂದ್‌... ಹೀಗೆ ನಿರಂತರ ನಡೆದಿವೆ. ಈ ಬಾರಿಯಾದರೂ ಬಜೆಟ್‌ನಲ್ಲಿ ತಮಗೆ ಅನುದಾನ ಮಂಜೂರಾಗಬಹುದು ಎಂಬ ನಿರೀಕ್ಷೆಯಿಂದ ಶಿಕ್ಷಣ ಸಂಸ್ಥೆಗಳ ಮುಖಂಡರು, ಶಿಕ್ಷಕರು ಬೀದಿಗಿಳಿದಿದ್ದಾರೆ.

ಫೆ. 19ರಿಂದಲೇ ಬೆಂಗಳೂರಿನ ವಿಧಾನಸೌಧದ ಮುಂದೆ ಈ ಭಾಗದ ಹಲವು ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಪದಾಧಿಕಾರಿಗಳು ಧರಣಿ ಆರಂಭಿಸಿದ್ದಾರೆ. ಪ್ರಸಕ್ತ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡದೇ ಇದ್ದರೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಬೇಡಿಕೆ ಏನು?: 1995ರಿಂದ 2015ರ ಅವಧಿಯಲ್ಲಿ ಆರಂಭಗೊಂಡಿರುವ ಎಲ್ಲ ಕನ್ನಡ ಶಾಲೆಗಳನ್ನು ವೇತನಾನುದಾನಕ್ಕೆ ಒಳಪಡಿಸಬೇಕು. 371 (ಜೆ) ಜಾರಿ ಆದಾಗಿನಿಂದ ಬಳಕೆಯಾಗದೆ ಉಳಿದಿರುವ ಕೆಕೆಆರ್‌ಡಿಬಿ ನಿಧಿಯನ್ನು ಕಲ್ಯಾಣ ಕರ್ನಾಟಕ ವಿದ್ಯಾರ್ಥಿಗಳ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಏಳಿಗೆಗಾಗಿ ‘ಶೈಕ್ಷಣಿಕ ಕಲ್ಯಾಣ ನಿಧಿ’ ಎಂದು ಘೋಷಿಸಬೇಕು’ ಎಂಬುದು ಇವರ ಮುಖ್ಯ ಬೇಡಿಕೆ.

ADVERTISEMENT

1995ರವರೆಗಿನ ಎಲ್ಲ ಶಾಲೆಗಳನ್ನೂ ಸರ್ಕಾರ ಅನುದಾನಕ್ಕೆ ಒಳಪಡಿಸಿದೆ. ಅದನ್ನು 2015ರವರೆಗಿನ ಶಾಲೆಗಳಿಗೂ ಮುಂದುವರಿಸಲು ಖಾಸಗಿ ಶಿಕ್ಷಣ ಸಂಸ್ಥೆಗಳು ಆಗ್ರಹಿಸುತ್ತಿವೆ.ರೂಪ್ಸಾ ಕರ್ನಾಟಕ, ಕರ್ನಾಟಕ ಮಾಧ್ಯಮಿಕ ಶಾಲಾ ಶಿಕ್ಷಕರ ಒಕ್ಕೂಟ, ಕರ್ನಾಟಕ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ, ಅನುದಾನ ರಹಿತ ಖಾಸಗಿ ಶಾಲಾ– ಕಾಲೇಜು ಶಿಕ್ಷಕರ ಸಂಘಟನೆ, ಕರ್ನಾಟಕ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ, ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಒಕ್ಕೂಟ, ಪರಿಶಿಷ್ಟ ಜಾತಿ, ಪಂಗಡಗಳ ಶಿಕ್ಷಣ ಸಂಸ್ಥೆಗಳ ಸಂಘಟನೆ, ಕಲ್ಯಾಣ ಕರ್ನಾಟಕ ಗಡಿನಾಡು ಕನ್ನಡಿಗರ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳೂ ಇದಕ್ಕೆ ಧ್ವನಿಗೂಡಿಸಿವೆ.

ಎಷ್ಟು ಶಾಲೆಗಳಿವೆ?: ಕಲಬುರಗಿ, ಯಾದಗಿರಿ, ಬೀದರ್‌, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳು ಸೇರಿ ಒಟ್ಟು 4500 ಅನುದಾನ ರಹಿತ ಶಾಲೆಗಳಿವೆ. ಇವುಗಳಲ್ಲಿ ಕನ್ನಡ ಮಾಧ್ಯಮದ 1500 ಶಾಲೆಗಳಿವೆ. ಕೆಲವು ಶಿಕ್ಷಣ ಸಂಸ್ಥೆಗಳು ಆರ್ಥಿಕ ಬಲ ಹೊಂದಿದ್ದು, ಸುಸ್ಥಿತಿಯಲ್ಲಿ ನಡೆದಿವೆ. ಆದರೆ, ಗ್ರಾಮೀಣ ಪ್ರದೇಶದ ಕನ್ನಡ ಶಾಲೆಗಳಲ್ಲಿ ಶಿಕ್ಷಕರಿಗೆ ಸಂಬಳ ನೀಡಲೂ ಆಗದೇ, ಹಲವು ಮುಚ್ಚಿಹೋಗಿವೆ.

ಸೇಡಂನವಿಶ್ವಗಂಗಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಂಕರ ಬಿರಾದಾರ (49) ಅವರು ಸಾಲ ಬಾಧೆ ತಾಳದೇ ಕಲಬುರಗಿಯಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಾವಿಗೆ ಸರ್ಕಾರದ ಧೋರಣೆಯೇ ಕಾರಣ ಎಂದೂ ಹೋರಾಟಗಾರರು ದೂರಿದ್ದರು. ಇದನ್ನು ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಹೋರಾಟದ ವೇಳೆಜೇವರ್ಗಿ ತಾಲ್ಲೂಕು ಸುಂಬಡ ಗ್ರಾಮದ ಸಿದ್ಧಗಂಗಾ ಶಿಕ್ಷಣಸಂಸ್ಥೆಯ ಅಧ್ಯಕ್ಷ ಪ್ರಕಾಶ ಸುಂಬಡ ಅವರೂ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಶತಾಯ– ಗತಾಯ ಈ ಬಜೆಟ್‌ನಲ್ಲಿ ಅನುದಾನ ಮಂಜೂರು ಮಾಡಲೇಬೇಕು ಎಂದು ಪದವೀಧರ ಹಾಗೂ ಶಿಕ್ಷಕರ ಮತಕ್ಷೇತ್ರದ ಎಲ್ಲ 14 ವಿಧಾನ ಪರಿಷತ್‌ ಸದಸ್ಯರ ಮುಂದೆಯೂ ಬೇಡಿಕೆ ಇಟ್ಟಿದ್ದಾರೆ. ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೂ ದುಂಬಾಲು ಬಿದ್ದಿದ್ದಾರೆ. ಅವರ ಬೇಡಿಕೆ ಈಡೇರುವುದೇ ಎಂದು ಕಾದುನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.