ಕಲಬುರಗಿ: ‘ಮನೆಯಲ್ಲಿ ಸಿಲಿಂಡರ್‌ನಿಂದ ಗ್ಯಾಸ್ ಸೋರಿಕೆಯಾಗಿ ಅನಾಹುತ ಸಂಭವಿಸಿದರೆ ಎಂಬ ಕಲ್ಪನೆಯೂ ಭೀಕರವಾಗಿಯೇ ಇರುತ್ತದೆ, ಅಲ್ಲವೇ?’, ‘ನಿತ್ಯವೂ ಶೌಚಾಲಯದ ಫ್ಲಶ್‌ಗೆ ಬಳಸುವ ನೀರು ಎಲ್ಲಿಂದ ತರೋದು?’, ‘ನಗರಗಳಲ್ಲಿ ನಿತ್ಯವೂ ಹೆಚ್ಚುತ್ತಿರುವ ವಾಯು ಮಾಲಿನ್ಯ ನಿಯಂತ್ರಿಸೋದು ಹೇಗೆ?’, ‘ಹತ್ತಾರು ಎಕರೆ ಜಮೀನಿದೆ. ಬೆಳೆಗೆ ಔಷಧಿ ಸಿಂಪಡಿಸಬೇಕು. ಕೂಲಿಗಳು ಸಿಗುತ್ತಿಲ್ಲ, ಪರಿಹಾರವೇನು...?’
ಇಂಥ ಹತ್ತಾರು ಸಮಸ್ಯೆಗಳಿಗೆ ನಗರದ ಜಿಲ್ಲಾ ವಿಜ್ಞಾನ ಕೇಂದ್ರದಲ್ಲಿ ಗುರುವಾರ ನಡೆದ ಜಿಲ್ಲಾ ವಿಜ್ಞಾನ ಮೇಳದಲ್ಲಿ ಭವಿಷ್ಯದ ಪರಿಹಾರಗಳಾಗಿ ಗೋಚರಿಸಿದವು. ಮೈ ಭಾರತ(ನೆಹರೂ ಯುವ ಕೇಂದ್ರ) ಕಲಬುರಗಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ವಿಜ್ಞಾನ ಕೇಂದ್ರದ ಆಶ್ರಯದಲ್ಲಿ 2024–25ನೇ ಸಾಲಿನ ಜಿಲ್ಲಾ ಯುವಜನೋತ್ಸವದ ಅಂಗವಾಗಿ ಈ ಮೇಳ ನಡೆಯಿತು.
‘ಗ್ಯಾಸ್ ಸೋರಿಕೆಯಾದರೆ ಸಿಲಿಂಡರ್‌ನ ಸ್ವಿಚ್ ಆಫ್ ಆಗುತ್ತದೆ. ಮನೆಯ ಸಂಪೂರ್ಣ ವಿದ್ಯುತ್ ಪೂರೈಕೆ ವ್ಯವಸ್ಥೆ ಸ್ಥಗಿತಗೊಳ್ಳುತ್ತದೆ. ಬಳಿಕ ಅಲಾರಂ ಮೊಳಗುತ್ತದೆ. ತದನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್, ಕಾಲ್ ಕೂಡ ಬರುತ್ತದೆ. ಇದೆಲ್ಲವೂ ಸ್ವಯಂಚಾಲಿತವಾಗಿ ನಡೆಯುತ್ತದೆ’ ಎಂದು ಎಸ್‌ಆರ್‌ಎನ್ ಮೆಹತಾ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ತನುಶ್ರೀ ತಾನು ಸಿದ್ಧಪಡಿಸಿದ್ದ ಮಾದರಿ ಪ‍್ರಾತ್ಯಕ್ಷಿಕೆ ನೀಡಿದರು.
‘ಶೌಚಗೃಹದ ಫ್ಲಶ್‌ಗೆ ನಿತ್ಯವೂ ಸಾಕಷ್ಟು ನೀರು ಬೇಕಾಗುತ್ತದೆ. ಸಿಂಕ್‌ಗೆ ಬಳಸುವ ನೀರನ್ನೇ ಅದಕ್ಕೆ ಪುನರ್ ಬಳಕೆ ಮಾಡಿದರೆ, ಸಾಕಷ್ಟು ನೀರು ಉಳಿಸಬಹುದು’ ಎಂದು ಮೆಹತಾ ಶಾಲೆಯ ಸಹನಾ, ವೈಷ್ಣವಿ ತಮ್ಮ ಮಾದರಿ ತೋರಿಸಿ ಗಮನ ಸೆಳೆದರು.
‘ಇದು ಅಗ್ರಿಬಾಟ್ ರೊಬೊ. ಇದರಿಂದ ಹತ್ತಾರು ಎಕರೆಗೆ ಬರೀ ಮೊಬೈಲ್ ಬಳಸಿ ಔಷಧಿ ಸಿಂಪಡಿಸಬಹುದು. ಶಾಲೆ ಕಲಿಯದವರೂ ಇದನ್ನು ಸುಲಭವಾಗಿ ಮೊಬೈಲ್ ಆ್ಯಪ್ ಮೂಲಕ ಬಳಸಬಹುದು. 1 ಒತ್ತಿದರೆ ಮುಂದಕ್ಕೆ, 2 ಒತ್ತಿದರೆ ಹಿಂದಕ್ಕೆ, 3 ಒತ್ತಿದರೆ ಎಡದಿಂದ 360 ಡಿಗ್ರಿ ತಿರುಗುತ್ತೆ, 4 ಒತ್ತಿದರೆ ಬಲದಿಂದ 360 ಡಿಗ್ರಿ ತಿರುಗುತ್ತೆ, 5 ಒತ್ತಿದರೆ ನಿಲ್ಲುತ್ತೆ. ಸದ್ಯ 60 ಮೀಟರ್ ದೂರದಿಂದಲೇ ಇದನ್ನು ನಿಯಂತ್ರಿಸಬಹುದು’ ಎಂದು ಅಮಿತ್ ಪಾಟೀಲ ಸೆಂಟ್ರಲ್ ಸ್ಕೂಲ್‌ನ ವಿದ್ಯಾರ್ಥಿಗಳಾದ ನಂದೀಶ, ವೈಭವ, ವೀರೇಶ ಪ್ರಾತ್ಯಕ್ಷಿಕೆ ತೋರಿಸುತ್ತಲೇ ವಿವರಿಸಿದರು.
‘ನಗರಗಳಲ್ಲಿ ನಿತ್ಯ ವಾಹನಗಳು, ಕೈಗಾರಿಕಾ ಘಟಕಗಳು ಹೆಚ್ಚುತ್ತಿವೆ. ಅದರೊಟ್ಟಿಗೆ ಮಾಲಿನ್ಯವೂ ವೃದ್ಧಿಸುತ್ತಿದೆ. ಅದಕ್ಕೆ ಸಿಗ್ನಲ್‌ಗಳಲ್ಲಿ ವಾಹನಗಳ ಹೊಗೆಯಲ್ಲಿನ ಇಂಗಾಲ ಹೀರಿ, ಅದನ್ನು ಸಂಗ್ರಹಿಸುವ, ಬರೀ ಶುದ್ಧ ಗಾಳಿ ವಾತಾವರಣಕ್ಕೆ ಹೊರಬಿಡುವ ವ್ಯವಸ್ಥೆ ಇದಾಗಿದೆ’ ಎಂದು ವಿದ್ಯಾಮಂದಿರ ಸಿಬಿಎಸ್‌ಇ ಶಾಲೆ ವಿದ್ಯಾರ್ಥಿನಿ ತಮ್ಮ ಮಾದರಿಯ ಪ್ರಾತ್ಯಕ್ಷಿಕೆ ನೀಡಿದರು.
ಇದಲ್ಲದೇ ನಡಿಗೆಯ ಭಾರದಿಂದ ವಿದ್ಯುತ್ ತಯಾರಿಸುವ ಮಾದರಿ, ಅಂಧರ ನಡಿಗೆಗೆ ನೆರವಾಗುವ ಕನ್ನಡಕ, ಶೂಗಳು, ಮಳೆ ಬಂದಾಕ್ಷಣ ಒಣಹಾಕಿದ ಬಟ್ಟೆ ಸ್ವಯಂಚಾಲಿತವಾಗಿ ಮನೆ ಸೇರುವ ‘ಬಿ ಕಾಂ’ (Be calm) ಮಾದರಿ, ಸ್ಮಾರ್ಟ್ ಎಲೆಕ್ಟ್ರಿಸಿಟಿ ತಯಾರಿ, ಸ್ಮಾರ್ಟ್ ವ್ಯಾಕ್ಯುಮ್ ಕ್ಲೀನರ್, ಹಲವು ಬಗೆಯ ನೀರು ಶುದ್ಧೀಕರಣ ಮಾದರಿಗಳು, ಚಂದ್ರಯಾನ –3 ಮಾದರಿ, ಘನ ತ್ಯಾಜ್ಯ ನಿರ್ವಹಣೆ ಮಾದರಿಗಳು, ಸ್ಮಾರ್ಟ್ ಅಗ್ರಿಕಲ್ಚರ್ ಮಾದರಿಗಳು, ಕೆರೆಯಲ್ಲಿ ತೇಲುವ ಕಸ ಶುಚಿಗೊಳಿಸುವ ಮಾದರಿ, ಎಸ್.ಬಿ.ವಿಜ್ಞಾನ ಕಾಲೇಜು ವಿದ್ಯಾರ್ಥಿಗಳ ‘ಎನರ್ಜಿ ಎಫಿಸಿಯಂಟ್ ಸ್ಮಾರ್ಟ್ ಸಿಟಿ’ ಮಾದರಿ, ಎಸ್‌ಬಿ ಎಂಜಿನಿಯರಿಂಗ್ ಕಾಲೇಜಿನ ಆಬ್ಜೆಕ್ಟ್ ಡಿಟೆಕ್ಟರ್ ಮಾದರಿಗಳು ವಿಜ್ಞಾನ ಮೇಳದಲ್ಲಿದ್ದವು.
‘ವಿದ್ಯುತ್ ವಿತರಣೆ ವ್ಯವಸ್ಥೆ ತಿಳಿದಿದೆಯೇ?’
ನಮ್ಮೆಲ್ಲರಿಗೂ ವಿದ್ಯುತ್ ಬಗೆಗೆ ತಿಳಿದಿದೆ. ಆದರೆ ಆ ವಿದ್ಯುತ್ ವಿತರಣಾ ವ್ಯವಸ್ಥೆ ಬಗ್ಗೆ ಎಷ್ಟು ಜನರಿಗೆ ಗೊತ್ತು? ಇದನ್ನೇ ವಿಷಯವಾಗಿಟ್ಟುಕೊಂಡು ಕಲಬುರಗಿ ಸರ್ಕಾರಿ ಐಟಿಐ(ಮಹಿಳಾ) ಎಲೆಕ್ಟ್ರಿಷಿಯನ್ ವಿಭಾಗದ ವಿದ್ಯಾರ್ಥಿಗಳು ಸಿದ್ಧಪಡಿಸಿದ ಮಾದರಿ ಗಮನ ಸೆಳೆಯಿತು.
‘ರಾಯಚೂರು ವಿದ್ಯುತ್ ಉತ್ಪಾದನೆ ಕೇಂದ್ರದಲ್ಲಿ ಉತ್ಪಾದನೆಯಾಗುವ ವಿದ್ಯುತ್ 420 ಕೆವಿ ಇರುತ್ತದೆ. ಅದನ್ನು ಗೃಹ ಬಳಕೆಗಾಗಿ 220 ವೋಲ್ಟ್‌ಗೆ ತಗ್ಗಿಸಲಾಗುತ್ತದೆ. ಅದಕ್ಕೂ ಮುನ್ನ 330 ಕೆವಿ 220 ಕೆವಿ 110 ಕೆವಿ 33 ಕೆವಿ 11 ಕೆವಿಗೆ ತಗ್ಗಿಸಲಾಗುತ್ತದೆ. ಅಲ್ಲಿಂದ ಟಿಸಿ ಮೂಲಕ ಹಾಯಿಸಿ ಗೃಹ ಬಳಕೆಗೆ ಬೇಕಾಗುವ 220 ವೋಲ್ಟ್ ಮಾತ್ರವೇ ಸರಬರಾಜು ಮಾಡಲಾಗುತ್ತದೆ’ ಎಂದು ವಿದ್ಯಾರ್ಥಿಗಳಾದ ಸಂಜಯ ನಿಂಗಪ್ಪ ಸಾಕ್ಷಿ ಮಲ್ಲಿಕಾರ್ಜುನ ಶರಣಬಸಪ್ಪ ಹಾಗೂ ಬಸವರಾಜ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.