ADVERTISEMENT

ಕಲ್ಯಾಣ ಕರ್ನಾಟಕಕ್ಕೆ ಸಚಿವಾಲಯ ರಚನೆ ವಿಳಂಬಕ್ಕೆ ಬೇಸರ

ಜನಪರ ಸಂಘರ್ಷ ಸಮಿತಿ ನಡೆ ಜನಪ್ರತಿನಿಧಿಗಳ ಮನೆ ಕಡೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2019, 12:30 IST
Last Updated 19 ನವೆಂಬರ್ 2019, 12:30 IST
ಲಕ್ಷ್ಮಣ ದಸ್ತಿ
ಲಕ್ಷ್ಮಣ ದಸ್ತಿ   

ಕಲಬುರ್ಗಿ: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸೆಪ್ಟೆಂಬರ್‌ 17ರಂದು ಕಲಬುರ್ಗಿಯಲ್ಲಿ ನಡೆದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ವೇಳೆ ಈ ಭಾಗದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ರಚಿಸುವುದಾಗಿ ಭರವಸೆ ನೀಡಿದ್ದರೂ ಇನ್ನೂ ಈಡೇರಿಲ್ಲ ಎಂದು ಹೈದರಾಬಾದ್‌ ಕರ್ನಾಟಕ ಜನಪರ ಸಂಘರ್ಷ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ಬೇಸರ ವ್ಯಕ್ತಪಡಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳ ಅಭಿವೃದ್ಧಿ, ಮೀಸಲಾತಿ ಸಮಸ್ಯೆಗಳು, ಬಡ್ತಿ, ಅನುದಾನ ಬಿಡುಗಡೆ ಸೇರಿದಂತೆ ವಿವಿಧ ಚಟುವಟಿಕೆಗಳ ಬಗ್ಗೆ ಮೇಲ್ವಿಚಾರಣೆ ನಡೆಸಲು ಸಚಿವಾಲಯ ರಚನೆ ಅತ್ಯಗತ್ಯವಾಗಿದೆ. ಪ್ರತ್ಯೇಕ ಸಚಿವಾಲಯ ರಚನೆಯ ಬಗ್ಗೆ ಕ್ರಮ ಜರುಗಿಸಲಾಗುತ್ತಿದೆ ಎಂಬ ಪತ್ರ ಬಂದಿದೆಯೇ ಹೊರತು ಯಾವುದೇ ನಿರ್ದಿಷ್ಟ ಕೆಲಸಗಳು ಆಗುತ್ತಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ನೇಮಕಾತಿಗಳಲ್ಲಿ ಮೀಸಲಾತಿ ನೀಡುವ ಬಗ್ಗೆ ನೀಡಿರುವ ತೀರ್ಪಿನ ಅನುಷ್ಠಾನಕ್ಕೆ ವಿಶೇಷ ಕ್ರಮ ಜರುಗಿಸಬೇಕು. ಕಲಬುರ್ಗಿ ರೈಲ್ವೆ ವಿಭಾಗೀಯ ಕಚೇರಿ ಸ್ಥಾಪನೆ ಸೇರಿದಂತೆ ನಮ್ಮ ಭಾಗದ ರಚನಾತ್ಮಕ ಪ್ರಗತಿಯ ವಿಷಯಗಳನ್ನು ಮುಂದೆ ಮಾಡಿಕೊಂಡು ಹೈದರಾಬಾದ್‌ ಕರ್ನಾಟಕ ಜನಪರ ಸಂಘರ್ಷ ಸಮಿತಿಯಿಂದ ವಿವಿಧ ಜನಪ್ರತಿನಿಧಿಗಳ ಮನೆ ಮುಂದೆ ಅಭಿಯಾನ ನಡೆಸಲಾಗುವುದು. ಆಡಳಿತಾರೂಢ ಬಿಜೆಪಿ ಸೇರಿದಂತೆ ಕಾಂಗ್ರೆಸ್‌, ಜೆಡಿಎಸ್‌ ಪಕ್ಷದ ಜನಪ್ರತಿನಿಧಿಗಳು ಈ ವಿಚಾರದಲ್ಲಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲು ಒತ್ತಾಯಿಸಲಾಗುವುದು ಎಂದರು.

ಕಲಬುರ್ಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿ ಆರಂಭಿಸಲು ರೈಲ್ವೆ ಸಚಿವಾಲಯ ಮತ್ತೊಂದು ಸಮಿತಿ ರಚಿಸುವ ಅಗತ್ಯವಿರಲಿಲ್ಲ. ಆದರೂ ನಾವು ಇದಕ್ಕೆ ವಿರೋಧ ವ್ಯಕ್ತಪಡಿಸುವುದಿಲ್ಲ. ಕಲಬುರ್ಗಿಯು ರೈಲ್ವೆ ವಿಭಾಗೀಯ ಕಚೇರಿ ಆಗಲು ಎಲ್ಲ ರೀತಿಯ ಅರ್ಹತೆ ಪಡೆದಿರುವ ಅಂಶಗಳನ್ನು ಉಪಸಮಿತಿ ಮುಂದೆ ಸಮರ್ಥವಾಗಿ ಮಂಡಿಸಲು ಸಂಸದ ಡಾ.ಉಮೇಶ್ ಜಾಧವ್ ಅವರು ಮುಂದಾಗಬೇಕು ಎಂದು ಒತ್ತಾಯಿಸಿದರು.

ADVERTISEMENT

ರೈಲ್ವೆ ವಿಭಾಗೀಯ ಕಚೇರಿ ಅಸ್ತಿತ್ವಕ್ಕೆ ಬರುವವರೆಗೆ ನಿರಂತರ ಹೋರಾಟ ಮುಂದುವರೆಸುತ್ತೇವೆ. ಇದಕ್ಕೆ ವ್ಯಾಪಕ ಸ್ವರೂಪ ನೀಡಲು ಎಲ್ಲ ಸಂಘ ಸಂಸ್ಥೆಗಳು ಜೊತೆ ಸೇರಿ ಕೋರ್‌ ಕಮಿಟಿ ಮತ್ತು ಕ್ರಿಯಾ ಸಮಿತಿಯನ್ನು ಆದಷ್ಟು ಶೀಘ್ರ ರಚಿಸಿ ರೈಲ್ವೆ ವಿಭಾಗೀಯ ಕಚೇರಿ ನಿರ್ಮಾಣಕ್ಕೆ ಸಂಘಟಿತ ಹೋರಾಟ ನಡೆಸಲಾಗುವುದು ಎಂದು ಹೇಳಿದರು.

ಸಮಿತಿ ಸದಸ್ಯರಾದ ಡಾ.ಮನಿಷ್‌ ಜಾಜು, ಡಾ.ಮಾಜಿದ್‌ ಡಾಗಿ, ಅಸ್ಲಂ ಚೌಂಗೆ, ಮಹ್ಮದ್‌ ಮಿರಾಜುದ್ದೀನ್‌, ಎಚ್‌.ಎಂ.ಹಾಜಿ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.