ADVERTISEMENT

ಸೇಡಂ| ಶಿಕ್ಷಣದಿಂದ ಸರ್ವಾಂಗೀಣ ಪ್ರಗತಿ; ಬಸವರಾಜ ಪಾಟೀಲ್ ಊಡಗಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 5:36 IST
Last Updated 14 ಜನವರಿ 2026, 5:36 IST
ಸೇಡಂ ತಾಲ್ಲೂಕು ಕೋಡ್ಲಾದಲ್ಲಿ ಸೋಮವಾರ ನಡೆದ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ 36ನೇ ವಾರ್ಷಿಕೋತ್ಸವದಲ್ಲಿ ಕೃಷಿಕ ಸಮಾಜ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ ಪಾಲ್ಗೊಂಡು, ಚಾಲನೆ ನೀಡಿದರು
ಸೇಡಂ ತಾಲ್ಲೂಕು ಕೋಡ್ಲಾದಲ್ಲಿ ಸೋಮವಾರ ನಡೆದ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆಯ 36ನೇ ವಾರ್ಷಿಕೋತ್ಸವದಲ್ಲಿ ಕೃಷಿಕ ಸಮಾಜ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ ಪಾಲ್ಗೊಂಡು, ಚಾಲನೆ ನೀಡಿದರು   

ಸೇಡಂ: ‘ವಿದ್ಯಾರ್ಥಿಗಳು ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡದೇ ಶಿಕ್ಷಣದತ್ತ ತೊಡಗಿಸಿಕೊಳ್ಳಬೇಕು. ಶಿಕ್ಷಣದಿಂದ ಸರ್ವಾಂಗೀಣ ಪ್ರಗತಿ ಸಾಧ್ಯ’ ಎಂದು ಕೃಷಿ ಸಮಾಜ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ ಊಡಗಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ತಾಲ್ಲೂಕಿನ ಕೋಡ್ಲಾ ಗ್ರಾಮದ ಶಂಭುಲಿಂಗೇಶ್ವರ ಶಿಕ್ಷಣ ಟ್ರಸ್ಟ್ ಸಂಚಾಲಿತ ಮಾತೋಶ್ರೀ ಶರಣಮ್ಮ ಮದ್ನಿ ಸ್ಮಾರಕ ಪೂರ್ವ ಪ್ರಾಥಮಿಕ ಶಾಲೆ, ಬಾಲವಿಕಾಸ ವಿದ್ಯಾಮಂದಿರ ಹಿರಿಯ ಪ್ರಾಥಮಿಕ ಶಾಲೆ, ಜ್ಞಾನ ವಾಹಿನಿ ಪ್ರೌಢಶಾಲೆ ಹಾಗೂ ಶಂಭುಲಿಂಗೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ 36ನೇ ವಾರ್ಷಿಕೋತ್ಸವದ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೇವಲ ಪಠ್ಯಕ್ಕೆ ಸೀಮಿತರಾಗದೇ ಪಠ್ಯೇತರ ಚಟುವಟಿಕೆಗಳಲ್ಲಿ ಸ್ಪರ್ಧಿಸಬೇಕು. ಆ ಮೂಲಕ ಕಲಿತ ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ತರಬೇಕು. ಗ್ರಾಮೀಣ ಭಾಗದಲ್ಲಿ ಶಂಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ’ ಎಂದರು.

ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಕಾಲೇಜು ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಸೋಮನಾಥರೆಡ್ಡಿ ಪಾಟೀಲ್ ಮಾತನಾಡಿ, ‘ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರ ಮುಖ್ಯ. ಹೀಗಾಗಿ ಶಿಕ್ಷಕರು ಮತ್ತು ಪಾಲಕರು ಮಕ್ಕಳಿಗೆ ಸಂಸ್ಕಾರ ಕೊಡಬೇಕು’ ಎಂದು ಸಲಹೆ ನೀಡಿದರು.

‘ಜ್ಞಾನ ಚೇತನ’ ಎಂಬ ಪರೀಕ್ಷಾ ಸಂಪನ್ಮೂಲ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಜ್ಞಾನರತ್ನ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಕ್ಷೇತ್ರ ಸಮನ್ವಯಧಿಕಾರಿ ಶಂಕರಲಿಂಗಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಉಮಾಪತಿರಾಜು, ವಿಶ್ವರಾಧ್ಯ ಮಾತನಾಡಿದರು. ಸಮೂಹ ಸಂಪನ್ಮೂಲ ವ್ಯಕ್ತಿ ರಾಧಾಕೃಷ್ಣ, ಮಳಖೇಡದ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯ, ಶಂಭುಲಿಂಗೇಶ್ವರ ಮಹಾಸ್ವಾಮೀಜಿ, ಶಂಭುಲಿಂಗೇಶ್ವರ ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷ ಶಂಭುರೆಡ್ಡಿ ಮದ್ನಿ, ಶರಣರೆಡ್ಡಿ ಆರಕೋಟಿ, ಅರವಿಂದ ಸಣ್ಣಿಂಗಿ ಇದ್ದರು. ಶಿವಲಿಂಗಯ್ಯ ಗಚ್ಚಿನಮಠ ಸ್ವಾಗತಿಸಿದರು. ಸಾಹೇಬರೆಡ್ಡಿ ವಾರ್ಷಿಕ ವರದಿ ವಾಚಿಸಿದರು. ಸುಭದ್ರಮ್ಮ ಪಾಟೀಲ ನಿರೂಪಿಸಿದರು. ಶ್ರೀಮಂತ ಅರಳಿ ವಂದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.