ADVERTISEMENT

ಸೇಡಂ: ಏಕಕಾಲಕ್ಕೆ ಮೂರು ಸರ್ಕಾರಿ ಹುದ್ದೆ ಪಡೆದ ಯುವತಿ

ಹೂಡಾ(ಬಿ) ಗ್ರಾಮದಲ್ಲಿರಳಿದ ಪ್ರತಿಭೆ ಬಸಲಿಂಗಮ್ಮ ವಿಕಾರಬಾ

ಅವಿನಾಶ ಬೋರಂಚಿ
Published 14 ಸೆಪ್ಟೆಂಬರ್ 2025, 7:34 IST
Last Updated 14 ಸೆಪ್ಟೆಂಬರ್ 2025, 7:34 IST
ತಾಯಿ ಸಾಬಮ್ಮಳೊಂದಿಗೆ ಯುವತಿ ಬಸಲಿಂಗಮ್ಮ ವಿಕಾರಾಬಾದ್
ತಾಯಿ ಸಾಬಮ್ಮಳೊಂದಿಗೆ ಯುವತಿ ಬಸಲಿಂಗಮ್ಮ ವಿಕಾರಾಬಾದ್   

ಸೇಡಂ: ಪ್ರಸ್ತುತ ದಿನಗಳಲ್ಲಿ ಯಾವುದಾದರೂ ಒಂದು ಸರ್ಕಾರಿ ನೌಕರಿ ಸಿಕ್ಕರೆ ಸಾಕು, ಜೀವನ ನಡೆಸಬಹುದು ಎಂಬ ಆಲೋಚನೆ ಯುವ ಸಮುದಾಯಕ್ಕಿದೆ. ಆದರೆ ಇಲ್ಲೋರ್ವ ಯುವತಿ ಏಕಕಾಲಕ್ಕೆ ಮೂರು ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾಳೆ.

ತಾಲ್ಲೂಕಿನ ಹೂಡಾ(ಬಿ) ಗ್ರಾಮದ ನಿವಾಸಿ ಬಸಲಿಂಗಮ್ಮ ದೊಡ್ಡ ಸುಬ್ಬಣ್ಣ ವಿಕಾರಾಬಾದ್ ಮೂರು ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾದ  ಯುವತಿ. ಅಪ್ಪಟ ಗ್ರಾಮೀಣ ಪ್ರತಿಭೆ. ಗ್ರಾಮದಲ್ಲಿ ಸುಮಾರು 5-6 ಸಾವಿರ ಜನಸಂಖ್ಯೆಯಿದ್ದರೂ ಈ ಗ್ರಾಮದಲ್ಲಿ ಸರ್ಕಾರಿ ನೌಕರಸ್ಥರ ಸಂಖ್ಯೆ ಬೆರಳೇಣಿಕೆಯಷ್ಟು ಮಾತ್ರ. ಈ ಪೈಕಿ ಬಸವಲಿಂಗಮ್ಮ ಅತ್ಯಂತ ಕಿರಿಯವರು ಮತ್ತು ಸರ್ಕಾರಿ ನೌಕರಿ ಪಡೆದ ಎರಡನೇ ಯುವತಿ ಎಂಬ ಖ್ಯಾತಿ ಹೊಂದಿದ್ದಾರೆ.

ಕರ್ನಾಟಕ ರಾಜ್ಯ ಲೆಕ್ಕಪರಿಶೋಧನಾ ಮತ್ತು ಲೆಕ್ಕ ಪತ್ರ ಇಲಾಖೆಯಲ್ಲಿ ಲೆಕ್ಕ ಸಹಾಯಕ ಹುದ್ದೆ, ಸಹಕಾರ ಇಲಾಖೆಯಲ್ಲಿ ಸಹಕಾರ ಸಂಘಗಳ ನಿರೀಕ್ಷಕ ಹುದ್ದೆ ಮತ್ತು ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ ಪರಿವೀಕ್ಷಕ ಹುದ್ದೆಗೆ ನೇಮಕವಾಗಿದ್ದಾರೆ. 2023ರಲ್ಲಿ ಅರ್ಜಿ ಕರೆಯಲಾಗಿತ್ತು. ಪರೀಕ್ಷೆ ಬರೆದಿದ್ದ ಬಸಲಿಂಗಮ್ಮ ಅವರು ಏಕಕಾಲದಲ್ಲಿ ಮೂರು ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

‘ಲೆಕ್ಕ ಸಹಾಯಕ ಹುದ್ದೆಯನ್ನು ತಿರಸ್ಕರಿಸಿ, ಜುಲೈ 07 ರಂದು ಸಹಕಾರ ಇಲಾಖೆಯ ಸಹಕಾರ ಸಂಘಗಳ ನಿರೀಕ್ಷಕ ಹುದ್ದೆಗೆ ಸೇರಿದ್ದೇನೆ. ಸೇರಿದ ಕೆಲವೇ ದಿನಗಳಲ್ಲಿ ವಾಣಿಜ್ಯ ತೆರಿಗೆ ಪರಿವೀಕ್ಷಕ ಹುದ್ದೆಗೂ ನೇಮಕವಾದ ಮಾಹಿತಿ ಇಲಾಖೆಯ ಪ್ರಕಟಿಸಿದೆ. ಕಾನೂನುನ್ವಯ ಸಿಂಧುತ್ವ ಪರಿಶೀಲನೆ ನಡೆದಿದ್ದು, ಮುಂದಿನ ದಿನಗಳಲ್ಲಿ ವಾಣಿಜ್ಯ ತೆರಿಗೆ ಪರಿವೀಕ್ಷಕ ಹುದ್ದೆಗೆ ಸೇರುತ್ತೇನೆ. ಜೊತೆಗೆ ನಾನು ಕೆಎಎಸ್ ಅಧಿಕಾರಿಯಾಗಬೇಕು ಎಂಬ ಅಭಿಲಾಷೆಯಿದ್ದು, ನಿರಂತರ ತಯಾರಿಯಲ್ಲಿದ್ದೇನೆ ಎನ್ನುತ್ತಾರೆ ಯುವತಿ ಬಸಲಿಂಗಮ್ಮ ವಿಕಾರಾಬಾದ್.

ದೊಡ್ಡ ಸುಬ್ಬಣ್ಣ-ಸಾಬಮ್ಮ ದಂಪತಿಗಳಿಗೆ ಐದು ಜನ ಹೆಣ್ಮಕ್ಕಳು ಹಾಗೂ ಒಬ್ಬ ಮಗ. ಸುಬ್ಬಣ್ಣ ಮೆಟ್ರಿಕ್ ಓದಿದ್ರೆ, ಸಾಬಮ್ಮ ಶಾಲೆ ಕಲಿತವಳಲ್ಲ. 5 ಜನ ಪದವಿ ಪಡೆದ ಮಹಿಳೆಯರಲ್ಲಿ ನಿರ್ಮಲಾ (ಪೊಲೀಸ್ ಇಲಾಖೆ), ಬಸಲಿಂಗಮ್ಮ (ಸಹಕಾರ ಇಲಾಖೆ) ಸರ್ಕಾರಿ ನೌಕರಸ್ಥರು. ಭೀಮಬಾಯಿ ಅತಿಥಿ ಶಿಕ್ಷಕಿ, ಕವಿತಾ & ಮಂಜುಳಾ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ. ಕೃಷ್ಣ ಪದವಿ ಅಧ್ಯಯನ ಮಾಡುತ್ತಿದ್ದಾರೆ. 2019ರಲ್ಲಿ ಪದವಿ ಪಡೆದ ಬಸಲಿಂಗಮ್ಮ ಧಾರವಾಡ, ಬೆಂಗಳೂರು ಕಡೆಗಳಲ್ಲಿ ತರಬೇತಿ ಪಡೆದಿದ್ದು, ಬಿಟ್ಟರೆ ಮನೆಯಲ್ಲಿಯೇ ಕುಳಿತು ಓದಿದಾಕೆ. ಕಿರಿಯ ಲೆಕ್ಕ ಸಹಾಯಕ ಹುದ್ದೆಗೆ 1:3 ನೇಮಕ, ಮಹಿಳಾ ಪೊಲೀಸ್ ಕಾನಸ್ಟೇಬಲ್ ಹುದ್ದೆ ಪಾಸ್ ಮಾಡಿ, ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣಳಾದವಳು.

ಗ್ರಾಮೀಣ ಭಾಗದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ನಮ್ಮ ಕಾಲೇಜಿನಲ್ಲಿ ಓದಿದ ಬಸಲಿಂಗಮ್ಮ ಏಕಕಾಲಕ್ಕೆ ಮೂರು ಸರ್ಕಾರಿ ಹುದ್ದೆ ಪಡೆದಿರುವುದು ಇದಕ್ಕೆ ನಿದರ್ಶನ
ಪಂಡಿತ ಬಿ.ಕೆ ಪ್ರಾಚಾರ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇಡಂ
ನಮ್ಮ ಮಕ್ಕಳೇ ನಮ್ಮ ಮುಂದಿನ ಭವಿಷತ್ತಾಗಿದ್ದು ಶಾಲೆ ಕಲಿತು ಸರ್ಕಾರಿ ಸೇವೆಗೆ ಸೇರುತ್ತಿರುವುದು ಅತ್ಯಂತ ಸಂತಸ.
ದೊಡ್ಡಸುಬ್ಬಣ್ಣ ವಿಕಾರಾಬಾದ್ ಯುವತಿ ತಂದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.