ADVERTISEMENT

ಸೇಡಂ: ಅತಿವೃಷ್ಟಿ ಆತಂಕದಲ್ಲಿ ಅನ್ನದಾತರು

ಮೈದುಂಬಿದ ಕಾಗಿಣಾ ನದಿ, ಕೃಷಿ ಚಟುವಟಿಕೆಗಳ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 4:39 IST
Last Updated 27 ಜುಲೈ 2025, 4:39 IST
ಸೇಡಂ ತಾಲ್ಲೂಕು ಊಡಗಿ ಗ್ರಾಮದ ಹೊಲದಲ್ಲಿ ನಿಂತ ಮಳೆ ನೀರನ್ನು ಬಸಿಗಾಲುವೆ ಮೂಲಕ ಹೊರಹಾಕುವಂತೆ ಉಪಕೃಷಿ ನಿರ್ದೇಶಕಿ ಅನಸೂಯಾ ಹೂಗಾರ, ಸಹಾಯಕ ಕೃಷಿ ನಿರ್ದೇಶಕ ವಿಶಾಲಕುಮಾರ ರೈತರಿಗೆ ಸಲಹೆ ನೀಡಿದರು
ಸೇಡಂ ತಾಲ್ಲೂಕು ಊಡಗಿ ಗ್ರಾಮದ ಹೊಲದಲ್ಲಿ ನಿಂತ ಮಳೆ ನೀರನ್ನು ಬಸಿಗಾಲುವೆ ಮೂಲಕ ಹೊರಹಾಕುವಂತೆ ಉಪಕೃಷಿ ನಿರ್ದೇಶಕಿ ಅನಸೂಯಾ ಹೂಗಾರ, ಸಹಾಯಕ ಕೃಷಿ ನಿರ್ದೇಶಕ ವಿಶಾಲಕುಮಾರ ರೈತರಿಗೆ ಸಲಹೆ ನೀಡಿದರು   

ಸೇಡಂ: ತಾಲ್ಲೂಕಿನಾದ್ಯಂತ ವರುಣನ ಆರ್ಭಟ ಮುಂದುವರೆದಿದ್ದು, ಹೊಲಗದ್ದೆಗಳಲ್ಲಿ ಮಳೆ ನೀರು ನಿಂತು ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿರುವುದು ರೈತರಲ್ಲಿ ಆತಂಕ ತಂದಿದೆ.

ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸೋಮವಾರದಿಂದ ಆರಂಭಗೊಂಡ ಮಳೆ ಮುಂದುವರೆದಿದ್ದು, ಕಳೆದೆರಡು ದಿನಗಳಿಂದ ಮಳೆ ಹಗಲು-ರಾತ್ರಿ ಜಿಟಿ ಜಿಟಿ ಸುರಿಯುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿವೆ. ಜಮೀನುಗಳಲ್ಲಿ ನೀರು ನಿಂತು ಹುಲುಸಾಗಿ ಬೆಳೆದ ಹೆಸರು, ಉದ್ದು ಮತ್ತು ತೊಗರಿ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಸತತ ಮಳೆಯಿಂದ ಬೆಳೆಗಳು ಅತಿವೃಷ್ಟಿಯ ನಷ್ಟಕ್ಕೆ ಸಿಲುಕುವ ಭಯ ಅನ್ನದಾತರಲ್ಲಿ ಮನೆ ಮಾಡಿದೆ.

ತಾಲ್ಲೂಕಿನ ಕಾಗಿಣಾ ನದಿ ಮೈದುಂಬಿ ಹರಿಯುತ್ತಿದ್ದು, ಅತಿವೃಷ್ಟಿ ಹೆಚ್ಚಿದೆ. ಜೊತೆಗೆ ನದಿ ನಾಲಾಗಳು ತುಂಬಿ ಹರಿದಿದ್ದು, ಕೆಲವು ರೈತರು ಹೊಲಗಳಲ್ಲಿನ ನೀರನ್ನು ಬಸಿಗಾಲುವೆ ಮಾಡಿ ಹೊರಹಾಕುತ್ತಿದ್ದಾರೆ. ನಿರಂತರ ಮಳೆಯಿಂದಾಗಿ ತಾಲ್ಲೂಕಿನ ಬೆನಕನಹಳ್ಳಿ ಮತ್ತು ಮದನಾ ಗ್ರಾಮದಲ್ಲಿ ತಲಾ ಒಂದೊಂದು ಮನೆಗಳು ನೆಲಕ್ಕುರುಳಿದ್ದು, ಯಾವುದೇ ಹಾನಿ ವರದಿಯಾಗಿಲ್ಲ ಎಂದು ತಹಶೀಲ್ದಾರ್ ಕಚೇರಿ ಮೂಲಗಳು ತಿಳಿಸಿವೆ.

ADVERTISEMENT

5 ದಿನಗಳಲ್ಲಿ ಹೆಚ್ಚು ಮಳೆ: ತಾಲ್ಲೂಕಿನಾದ್ಯಂತ ಕಳೆದ ಐದು ದಿನಗಳಲ್ಲಿ ಹೆಚ್ಚು ಮಳೆಯಾಗಿದೆ. ಸೇಡಂ 179 ಮಿ.ಮೀ, ಆಡಕಿ 112 ಮಿ.ಮೀ, ಮುಧೋಳ 140 ಮಿ.ಮೀ, ಕೋಡ್ಲಾ 10 ಮಿ.ಮೀ ಮತ್ತು ಕೋಲ್ಕುಂದಾ 139 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.

ಸ್ಥಗಿತಗೊಂಡ ಕೃಷಿ ಚಟುವಟಿಕೆ: ನಿರಂತರ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ರೈತರು ಮನೆಯಲ್ಲಿಯೇ ಕಾಲ ಕಳೆಯುವಂತಾಗಿದೆ. ಹುಲಸಾಗಿ ಬೆಳೆದ ಬೆಳೆಗಳಿಗೆ ಜಿಟಿಜಿಟಿ ಮಳೆಯಿಂದ ರೋಗ ಬರುವ ಸಾಧ್ಯತೆಯಿದ್ದು, ರೈತರು ಔಷಧಿ ಸಿಂಪರಣೆಗೂ ಕಾಲವಿಲ್ಲದಂತಾಗಿದೆ. ಹೊಲದಲ್ಲಿ ಹುಲ್ಲು, ಕಳೆ ಹೆಚ್ಚಿದ್ದು, ಬೆಳೆಗಳ ಬೆಳವಣಿಗೆಗೆ ಕುಂಠಿತವಾಗಲಿದೆ ಎನ್ನುತ್ತಾರೆ ರೈತ ಬಸವರಾಜ.

ಬಸಿಗಾಲುವೆ ಮೂಲಕ ನೀರು ಹೊರಹಾಕಿ: ಮಳೆ ನೀರು ಹೊಲಗದ್ದೆಗಳಲ್ಲಿ ನಿಂತಿದ್ದಲ್ಲಿ ರೈತರು ತಪ್ಪದೆ ಬಸಿಗಾಲುವೆ ತೋಡಿ ನೀರನ್ನು ಹೊರಹೋಗುವಂತೆ ಮಾಡಬೇಕು. ಇದರಿಂದ ಅತಿವೃಷ್ಟಿಯಿಂದ ಉಂಟಾಗುವ ಬೆಳೆ ಹಾನಿ ತಡೆಗಟ್ಟಬಹುದಾಗಿದೆ. ಜೊತೆಗೆ ಬೆಳೆವಿಮೆ ಮಾಡಿಸದ ರೈತರು ಜುಲೈ 31ರೊಳಗೆ ಮಾಡಿಸಬೇಕು. ಬೆಳೆವಿಮೆ ಮಾಡಿಸಿರುವ ರೈತರು ದೂ.18001035490 ಬೆಳೆ ಹಾನಿಯಾದ ದೂರು ನೀಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕ ವಿಶಾಲಕುಮಾರ ತಿಳಿಸಿದ್ದಾರೆ.

ನಿರಂತರ ಮಳೆಯಿಂದಾಗಿ ನದಿ ನಾಲಾಗಳಿಗೆ ನೀರು ಬಂದಿದ್ದು ಯಾರು ನದಿ ನೀರಿಗಿಳಿಯಬಾರದು. ವಿಶೇಷವಾಗಿ ಯುವಕರು ನದಿ ನಾಲಾ ನೀರಿಗಿಳಿದು ಮೊಬೈಲ್‌ನಲ್ಲಿ ವಿಡಿಯೋ ಮಾಡುವ ದುಸ್ಸಾಹಸ ಮಾಡಬೇಡಿ
– ಶ್ರೀಯಾಂಕ ಧನಶ್ರೀ, ತಹಶೀಲ್ದಾರ್ ಸೇಡಂ
ತಾಲ್ಲೂಕಿನಾದ್ಯಂತ ಈಗಾಗಲೇ ಬೆಳೆ ವಿಮೆ ತುಂಬಿರುವ ರೈತರ ಹೊಲಗಳಲ್ಲಿ ಬೆಳೆ ಹಾನಿಯಾಗಿದ್ದರೆ ಹಾನಿಯಾದ 72 ಗಂಟೆಗಳ ಒಳಗಾಗಿ ದೂರು ನೀಡಬೇಕು
– ವಿಶಾಲಕುಮಾರ, ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.