ಸೇಡಂ: ತಾಲ್ಲೂಕಿನ ಮಲ್ಕಾಪಲ್ಲಿ ಗ್ರಾಮದಲ್ಲಿ ನೂತನ ಶಾಲಾ ಕಟ್ಟಡವಿದ್ದರೂ ಸಹ ವಿದ್ಯಾರ್ಥಿಗಳು ಶಿಥಿಲಾವಸ್ಥೆಯ ಹಳೆಯ ಶಾಲೆ ಕಟ್ಟಡದಲ್ಲಿ ಕುಳಿತು ಆತಂಕದಲ್ಲಿಯೇ ಕಲಿಯುವ ದುಸ್ಥಿತಿ ಎದುರಾಗಿದೆ.
ತಾಲ್ಲೂಕಿನ ಮಲ್ಕಾಪಲ್ಲಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 4 ಕೋಣೆಗಳಿವೆ. 1 ರಿಂದ 8ನೇ ತರಗತಿವರೆಗೆ ಕನ್ನಡ ಮಾಧ್ಯಮ ಹಾಗೂ ಎಲ್‌ಕೆಜಿ ಯಿಂದ ಎರಡನೇ ತರಗತಿ ವರೆಗೆ ಆಂಗ್ಲ ಮಾಧ್ಯಮದಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಶಾಲಾ ಕಟ್ಟಡ ಅತ್ಯಂತ ಹಳೆದಾಗಿದ್ದು, ಶಿಥಿಲಾವಸ್ಥೆಯಲ್ಲಿದೆ. ಅಲ್ಲದೆ ಮಳೆ ಬಂದರೆ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗುತ್ತಿದೆ.
‘ಶಾಲಾ ಕಟ್ಟಡ ಅತ್ಯಂತ ಹಳೆಯದಾಗಿದ್ದರಿಂದ ಭಯದ ವಾತಾವರಣದಲ್ಲಿ ವಿದ್ಯಾರ್ಥಿಗಳು ಪಾಠ ಆಲಿಸುವ ಸ್ಥಿತಿ ನಿರ್ಮಾಣವಾಗಿದೆ. ಕಿರು ಪರೀಕ್ಷೆ, ವಿಶೇಷ ಬೋಧನೆ ಹಾಗೂ ಇನ್ನಿತರ ಚಟುವಟಿಕೆ ಸಂದರ್ಭದಲ್ಲಿ ಶಾಲೆ ಹೊರಗೆ ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತದೆ. ರಸ್ತೆ ಪಕ್ಕದಲ್ಲಿಯೇ ಶಾಲೆ ಇರುವುದರಿಂದ ವಾಹಗಳ ಸಂಚಾರದಿಂದ ಅಧ್ಯಯನಕ್ಕೆ ತೊಂದರೆಯಾಗುತ್ತಿದೆ. ಪಾಠ ಮಾಡುವ ಸಂದರ್ಭದಲ್ಲಿಯೇ ಹಂದಿಗಳು ಓಡಾಡುತ್ತಿರುತ್ತದೆ’ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ನವಾದರೆಡ್ಡಿ.
256 ವಿದ್ಯಾರ್ಥಿಗಳಿಗೆ ಮೂರೇ ಕೋಣೆ:
ಮಲ್ಕಾಪಲ್ಲಿ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 4 ಕೋಣೆಗಳಿವೆ. ಅವುಗಳಲ್ಲಿ ಒಂದು ಕೋಣೆ ಮುಖ್ಯಶಿಕ್ಷಕರ ಹಾಗೂ ದಾಸ್ತಾನಿಗೆ ಬಳಸಲಾಗುತ್ತಿದೆ. ಉಳಿದ ಮೂರು ಕೋಣೆ ವಿದ್ಯಾರ್ಥಿಗಳ ಕಲಿಕೆಗೆ ಬಳಸಲಾಗುತ್ತಿದೆ. ಶಾಲೆಯಲ್ಲಿ ಒಟ್ಟು 256 ವಿದ್ಯಾರ್ಥಿಗಳಿದ್ದು, ಒಂದು ತರಗತಿ ನಡೆದರೆ, ಮತ್ತೊಂದು ತರಗತಿಗೆ ತೊಂದರೆಯಾಗುತ್ತದೆ ಎಂದು ಶಾಲೆಯ ಮುಖ್ಯಶಿಕ್ಷಕ ದೇವರಾಜ ಕೋರಿ ತಿಳಿಸಿದರು.
ಗ್ರಾಮದ ಹೊರವಲಯದಲ್ಲಿ ಸುಸಜ್ಜಿತ ಶಾಲಾ ಕಟ್ಟಡ ನಿರ್ಮಾಣಗೊಂಡಿದೆ. ಕೆಲ ಸಣ್ಣಪುಟ್ಟ ಸಮಸ್ಯೆಗಳನ್ನು ಇತ್ಯರ್ಥಪಡಿಸಿ ಅಧಿಕಾರಿಗಳು ಶಾಲೆ ಸ್ಥಳಾಂತರಿಸಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲ ಮಾಡಬೇಕುನವಾದರೆಡ್ಡಿ ಗ್ರಾಮ ಪಂಚಾಯಿತಿ ಸದಸ್ಯ
ನೂತನ ಶಾಲೆಯ ಸ್ಥಳಾಂತರಕ್ಕೆ ರಸ್ತೆಯ ಅವಶ್ಯಕತೆಯಿದ್ದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ಜೊತೆಗೆ ಚರ್ಚಿಸಿದ್ದೇನೆ. ರಸ್ತೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.ಮಾರುತಿ ಹುಜರಾತಿ ಕ್ಷೇತ್ರಶಿಕ್ಷಣಾಧಿಕಾರಿ ಸೇಡಂ
ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವ ಕಾರಣ ಮೂರು ಕೋಣೆಗಳಲ್ಲಿ ಬೋಧನೆ ಮಾಡುವುದು ಕಷ್ಟ. ನೂತನ ಕಟ್ಟಡದಲ್ಲಿ ಶಾಲೆಗೆ ಸ್ಥಳಾಂತರಿಸಿದರೆ ಅನುಕೂಲವಾಗಲಿದೆ.ದೇವರಾಜ ಕೋರಿ ಮುಖ್ಯಶಿಕ್ಷಕ
ಗ್ರಾಮದಿಂದ ಶಾಲೆಗೆ ಸುಮಾರು 250 ಮೀಟರ್ ರಸ್ತೆ ನಿರ್ಮಿಸಿದ್ರೆ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರಲು ಅನುಕೂಲವಾಗುತ್ತದೆ. ಸಂಪರ್ಕ ರಸ್ತೆಯ ನಿರ್ಮಾಣಕ್ಕೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪವಿತ್ತು. ಅದನ್ನು ಈಚೆಗೆ ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಆಗ ಇಒ ಚನ್ನಪ್ಪ ರಾಯಣ್ಣನವರ್ ಪಿಐ ದೌಲತ್ ಕುರಿ ಲೋಕೋಪಯೋಗಿ ಇಲಾಖೆ ಎಇಇ ಶಿವಶರಣಪ್ಪ ಜೇವರ್ಗಿ ಸಮ್ಮುಖದಲ್ಲಿಯೇ ಸಮಸ್ಯೆ ಇತ್ಯರ್ಥ ಮಾಡಲಾಗಿತ್ತು. ಶಾಲೆಗೆ ಸಂಪರ್ಕ ಕಲ್ಪಿಸಲು ಸಿಸಿ ರಸ್ತೆ ನಿರ್ಮಾಣಕ್ಕೆ ಮಾರ್ಗ ಗುರುತಿಸಲಾಗಿತ್ತು. ಸಿಸಿ ರಸ್ತೆ ಮಾಡುವುದು ಮಾತ್ರ ಬಾಕಿಯಿತ್ತು. ಆದರೆ ಇಲ್ಲಿಯವರೆಗೆ ಸಂಪರ್ಕ ರಸ್ತೆ ನಿರ್ಮಾಣವಾಗಿಲ್ಲ ಎಂಬುವುದು ಸಾರ್ವಜನಿಕರ ಅಭಿಮತ.
ಗ್ರಾಮದ ಹೊರವಲಯದಲ್ಲಿ ಅಂದಾಜು ₹3 ಕೋಟಿಗೂ ಅಧಿಕ ವೆಚ್ಚದಲ್ಲಿ ನೂತನ ಶಾಲಾ ಕಟ್ಟಡ ನಿರ್ಮಾಣಗೊಂಡಿದೆ. ಶಾಲೆಯ ಕಟ್ಟಡ ಪೂರ್ಣಗೊಂಡು ನಾಲ್ಕು ತಿಂಗಳಾಗಿವೆ. ಸುಮಾರು 12 ಕೋಣೆಗಳ ಸುಸಜ್ಜಿತ ಕಟ್ಟಡ ಇದಾಗಿದೆ. 2025-26ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಶಾಲೆ ಸ್ಥಳಾಂತರವಾಗಬೇಕಿತ್ತು. ಶಾಲೆಯ ಮುಖ್ಯಶಿಕ್ಷಕರು ಸ್ಥಳಾಂತರದ ಕುರಿತು ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಆದರೆ ಇಲ್ಲಿಯವರೆಗೂ ಶಾಲೆ ಸ್ಥಳಾಂತರಗೊಂಡಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.