ADVERTISEMENT

‘ಬೀಜಗರ್ಭ’ದ ಸಂಶೋಧಕಿ ಡಾ.ನಾಗವೇಣಿ

ಜಾಗತಿಕ ತಾಪಮಾನ ನಿಯಂತ್ರಣಕ್ಕೆ ತುಡಿದ ಮಹಿಳೆ ಮನಸ್ಸು, ಪೇಟೆಂಟ್‌ ಪಡೆದ ಸಾಧಕಿ

ಸಂತೋಷ ಈ.ಚಿನಗುಡಿ
Published 7 ಮಾರ್ಚ್ 2020, 19:45 IST
Last Updated 7 ಮಾರ್ಚ್ 2020, 19:45 IST
ಡಾ.ನಾಗವೇಣಿ ಆಸ್ಪಲ್ಲಿ
ಡಾ.ನಾಗವೇಣಿ ಆಸ್ಪಲ್ಲಿ   

ಕಲಬುರ್ಗಿ: ಅನ್ವೇಷಣಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಡಾ.ನಾಗವೇಣಿ ಆಸ್ಪಲ್ಲಿ ಅವರ ಕನಸಿನ ಕೂಸು ‘ಸೀಡ್‌ ವೂಂಬ್‌ (ಬೀಜಗರ್ಭ)’ ಈಗ ಉಸಿರಾಡುತ್ತಿದ್ದು, ಪರಿಸರ ಸಂರಕ್ಷಣೆಯಲ್ಲಿ ದೊಡ್ಡ ಕೊಡುಗೆ ನೀಡುತ್ತಿದೆ.

ನಾಗವೇಣಿ ಅವರು ಹುಟ್ಟಿ, ಬೆಳೆದಿದ್ದು ಬೀದರ್‌ಲ್ಲಿ. ದಂತ ವೈದ್ಯಕೀಯ ಪದವಿ ಶಿಕ್ಷಣವನ್ನು ಬೆಂಗಳೂರಿನ ಸರ್ಕಾರಿ ಡೆಂಟಲ್‌ ಕಾಲೇಜಿನಲ್ಲಿ ಪೂರೈಸಿದ್ದಾರೆ. ಮದುವೆಯಾದ ಬಳಿಕ ರಾಯಚೂರಿಗೆ ಬಂದರು. ರಾಯಚೂರಿನ ಎ.ಎಂ.ಇ ದಂತ ಮಹಾವಿದ್ಯಾಲಯದಲ್ಲಿ ಎಂ.ಡಿ.ಎಸ್. ಪದವಿ ಪಡೆದರು.

ಡಾ.ನಾಗವೇಣಿ ಅವರು ಸೀಡ್‌ ವೂಂಬ್‌ ಅನ್ವೇಷಣೆ ಮಾಡಲು ಮುಂದಾಗಿದ್ದು ತುಂಬ ಆಕಸ್ಮಿಕ. ಅವರ ಪುತ್ರ ರಾಯಚೂರಿನ ಬಿಸಿಲಿನಲ್ಲಿ ಆಟವಾಡಿ ಬೆವರಿ ಬಸವಳಿದ. ಅದನ್ನು ಕಂಡು ತಾಯಿ ಮಮ್ಮಲ ಮರುಗಿದರು. ಎಲ್ಲ ಮಕ್ಕಳೂ ಹೀಗೆ ಕಷ್ಟ‍ಪಡುತ್ತಿದ್ದಾರೆ, ಈಗಲೇ ಹೀಗಾದರೆ ಭವಿಷ್ಯದ ಕುಡಿಗಳ ಕಥೆ ಏನು? ಎಂದು ಚಿಂತಿಸಿದನಾಗವೇಣಿ; ಅಂದಿನಿಂದ ಪರಿಹಾರ ಹುಡುಕಲು ಆರಂಭಿಸಿದರು. ನೂರಾರು ಮಾರ್ಗಗಳನ್ನು ಕಲಕಿ ನೋಡಿದ ಮೇಲೆ ಅವರಿಗೆ ಹೊಳೆದಿದ್ದು ಈ ಬೀಜಗರ್ಭ!

ADVERTISEMENT

ಏನಿದು ಸೀಡ್‌ ವೂಂಬ್‌?:

ಫಲವತ್ತಾದ ಮಣ್ಣಿನಲ್ಲಿ ಪೋಷಣೆ ಮಾಡಿದ ಬೀಜಗಳನ್ನು ಸಂಗ್ರಹಿಸಿ ಇಡುವುದೇ ಸೀಡ್‌ವೂಂಬ್‌. ತಾಯಿ ಗರ್ಭದಲ್ಲಿ ಮಗು ಎಷ್ಟು ಕಾಳಜಿಯಿಂದ ಬೆಳೆಯುತ್ತದೆಯೋ ಅಷ್ಟೇ ಸುರಕ್ಷಿತವಾಗಿ ಈ ಬೀಜ ಮೊಳೆಕೆಯೊಡೆಯುತ್ತದೆ. ಅದಕ್ಕಾಗಿಯ ಇದರ ಹೆಸರನ್ನು ಇವರು ‘ಬೀಜಗರ್ಭ’ ಎಂದು ಇಟ್ಟಿದ್ದಾರೆ. ಈ ಸಾಧನದಲ್ಲೇ ಬೀಜಕ್ಕೆ ಅಗತ್ಯ ನೀರು, ತೇವಾಂಶ, ಪೋಷಕಾಂಶ, ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುವ ಗುಣವನ್ನು ಅದಕ್ಕೆ ಬೆರೆಸಲಾಗುತ್ತದೆ. ಹೀಗಾಗಿ, ವನ ನಿರ್ಮಾಣಕ್ಕೆ ಸದ್ಯಕ್ಕಿರುವ ಎಲ್ಲ ಮಾರ್ಗಗಳಿಗಿಂತಲೂ ಇದು ಹೆಚ್ಚು ಪರಿಣಾಮಕಾರಿ ಎಂಬುದು ನಾಗವೇಣಿ ಅವರ ಆತ್ಮವಿಶ್ವಾಸದ ನುಡಿ.

ಕೈಜೋಡಿಸಿದವರ ನೆನೆದು: ತಮ್ಮ ಸಾಧನೆಯ ಹಾದಿಯಲ್ಲಿ ನೆರವಾದ, ನೆರಳಾಗಿ ನಿಂತ ತೋಟಗಾರಿಕಾ ವಿಜ್ಞಾನಿ ಹೆಮಾಲತಾ ಮತ್ತು ಅಗ್ರಿಕಲ್ಚರ್‌ ಎಂಜಿನಿಯರ್‌ ಡಾ.ಉದಯಕುಮಾರ್‌ ನಿಡೋಣಿ ಅವರನ್ನು ನಾಗವೇಣಿ ನೆನೆಯುತ್ತಾರೆ. ಈ ಊಂಬ್‌ಗಳನ್ನು ವೈಜ್ಞಾನಿಕವಾಗಿ ದಷ್ಟಪುಷ್ಟವಾಗಿ ಬೆಳೆಯುವಂತೆ ಮಾಡಿದವರಲ್ಲಿ ಈ ಇಬ್ಬರ ಸಾಧನೆಯೂ ದೊಡ್ಡದಿದೆ. ಇದಕ್ಕೆ ಪತಿ ಡಾ.ಶಿವಾನಂದ ಅವರೂ ಆರ್ಥಿಕವಾಗಿ ನೆರವಾಗಿದ್ದಾರೆ. ಒಂದು ವರ್ಷ ನಿರಂತರ ಸಂಶೋಧನೆಯ ಬಳಿಕ ಈ ಹಂತ ತಲುಪಿದೆ ಈ ಮೂವರ ತಂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.