ADVERTISEMENT

ಕೊಲೆ ಪ್ರಕರಣದಿಂದ ದೊಡ್ಡಪ್ಪಗೌಡ ಹೆಸರು ಕೈಬಿಡಲು ಒತ್ತಾಯ

ಜೇವರ್ಗಿ, ಯಡ್ರಾಮಿಯ 10ಕ್ಕೂ ಅಧಿಕ ಮಠಾಧೀಶರಿಂದ ಜಂಟಿ ಪತ್ರಿಕಾಗೋಷ್ಠಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 13:40 IST
Last Updated 13 ಜೂನ್ 2021, 13:40 IST
ಸಿದ್ಧಲಿಂಗ ಸ್ವಾಮೀಜಿ
ಸಿದ್ಧಲಿಂಗ ಸ್ವಾಮೀಜಿ   

ಕಲಬುರ್ಗಿ: ಇತ್ತೀಚೆಗೆ ಕಲ್ಲೂರ (ಕೆ) ಗ್ರಾಮದ ಬಳಿ ನಡೆದ ಹಣಮಂತ ಕೂಡಲಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ನಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಹಾಗೂ ಸಹೋದರ ಬಸವರಾಜ ಪಾಟೀಲ ಹೆಸರನ್ನು ಅನವಶ್ಯಕವಾಗಿ ದಾಖಲಿಸಲಾಗಿದೆ. ಅವರ ಹೆಸರನ್ನು ಕೈಬಿಡಬೇಕು ಎಂದು ನೆಲೋಗಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಒತ್ತಾಯಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಣಮಂತ ಕೊಲೆ ನಡೆಯಬಾರದಿತ್ತು. ಅವರ ಕುಟುಂಬದ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ. ಶಿವಲಿಂಗಪ್ಪಗೌಡ ಪಾಟೀಲ ಹಾಗೂ ಅವರ ಮಕ್ಕಳಾದ ದೊಡ್ಡಪ್ಪಗೌಡ, ಬಸವರಾಜ ಅವರು ಯಾವತ್ತೂ ಇಂತಹ ಕೃತ್ಯದಲ್ಲಿ ಭಾಗಿಯಾಗಿಲ್ಲ. ರಾಜಕೀಯ ಕಾರಣಗಳಿಗಾಗಿ ಅವರ ಹೆಸರು ಸೇರಿಸಿರುವ ಸಾಧ್ಯತೆ ಇದೆ. ತನಿಖೆಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ಅವರು ಅಮಾಯಕರಾಗಿದ್ದರಿಂದ ದೂರುದಾರ ಕೂಡಲಗಿ ಕುಟುಂಬದವರು ಎಫ್‌ಐಆರ್‌ನಿಂದ ಅವರ ಹೆಸರನ್ನು ತೆಗೆಸಬೇಕು’ ಎಂದು ಸಲಹೆ ನೀಡಿದರು.

‘ಎರಡು ಕುಟುಂಬಗಳ ಮಧ್ಯದ ವೈಯಕ್ತಿಕ ದ್ವೇಷದಿಂದ ಕೊಲೆಗಳು ನಡೆದಿವೆ. ಈ ಪ್ರಕರಣಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಯತ್ನ ನಡೆಯುತ್ತಿದೆ. ಇಂತಹ ಯತ್ನ ಕೈಬಿಟ್ಟು ಪ್ರಕರಣದ ನ್ಯಾಯಾಂಗ ತನಿಖೆ ನಡೆಸಬೇಕು’ ಎಂದರು.

ADVERTISEMENT

‘ಕೂಡಲಗಿ ಕುಟುಂಬದವರನ್ನೂ ಭೇಟಿ ಮಾಡಿ ಸಾಂತ್ವನ ಹೇಳಿದ್ದೇವೆ. ತಾಲ್ಲೂಕಿನಲ್ಲಿ ಇಂತಹ ಘಟನೆಗಳು ಮತ್ತೊಮ್ಮೆ ಮರುಕಳಿಸಬಾರದು. ರಾಜಕೀಯವಾಗಿ, ಧಾರ್ಮಿಕವಾಗಿ ಸಮನ್ವಯದಿಂದ ಬದುಕಿ ಬಾಳಿದ ಜೇವರ್ಗಿ ಭಾಗದಲ್ಲಿ ಇಂಥವು ನಡೆಯಬಾರದು ಎಂಬ ಉದ್ದೇಶದಿಂದ ಪತ್ರಿಕಾಗೋಷ್ಠಿ ನಡೆಸುತ್ತಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಯೋಗ್ಯತೆ ಇದ್ದರೆ ಬಿಎಸ್‌ವೈ ಇರುತ್ತಾರೆ: ‘ಬಿ.ಎಸ್‌. ಯಡಿಯೂರಪ್ಪ ಅವರು ಯೋಗ್ಯತೆ ಇದ್ದರೆ ಅಧಿಕಾರದಲ್ಲಿ ಇರುತ್ತಾರೆ. ಇಲ್ಲದಿದ್ದರೆ ಅಧಿಕಾರ ಕಳೆದುಕೊಳ್ಳುತ್ತಾರೆ. ಈ ಬಗ್ಗೆ ಮಠಾಧೀಶರು ಅವರ ಪರವಾಗಿ ನಿಲ್ಲುವ ಅವಶ್ಯಕತೆ ಇಲ್ಲ’ ಎಂದು ನೆಲೋಗಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

‍ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ಮಠಗಳಿಗೆ ತಲಾ ₹ 50 ಲಕ್ಷ ಪಡೆದವರು ಯಡಿಯೂರಪ್ಪ ಪರವಾಗಿ ನಿಲ್ಲಬಹುದು. ಅವರು ಅಧಿಕಾರದಲ್ಲಿ ಇರುವುದು, ಬಿಡುವುದನ್ನು ಅವರ ಪಕ್ಷ ನೋಡಿಕೊಳ್ಳುತ್ತದೆ. ನಾವೇನೂ ಮಾಡಲಾಗುವುದಿಲ್ಲ’ ಎಂದರು.

ಸೊನ್ನ ವಿರಕ್ತಮಠದ ಡಾ. ಶಿವಾನಂದ ಸ್ವಾಮೀಜಿ, ಕಡಕೋಳ ಮಡಿವಾಳೇಶ್ವರ ಮಠದ ಡಾ. ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಯಡ್ರಾಮಿಯ ಸಿದ್ದಲಿಂಗ ಸ್ವಾಮೀಜಿ, ಅಂಕಲಗಾದ ಅಭಿನವ ಗುರುಬಸವ ಶಿವಾಚಾರ್ಯರು ಹಿರೇಮಠ, ಗಂವ್ಹಾರ ತ್ರಿವಿಕ್ರಮಾನಂದಮಠದ ಸೋಪಾನನಾಥ ಸ್ವಾಮೀಜಿ, ಚಿಗರಹಳ್ಳಿಯ ಸಿದ್ದಬಸವ ಕಬೀರ ಸ್ವಾಮೀಜಿ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.