ADVERTISEMENT

371 (ಜೆ) ಸಮರ್ಪಕ ಅನುಷ್ಠಾನಕ್ಕೆಆಗ್ರಹಿಸಿ ಎಸ್‌ಎಫ್‌ಐ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 12:41 IST
Last Updated 3 ಜನವರಿ 2019, 12:41 IST
ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಎದುರು ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ಸದಸ್ಯರು ಗುರುವಾರ ಪ್ರತಿಭಟನೆ ಮಾಡಿದರು
ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಎದುರು ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ಸದಸ್ಯರು ಗುರುವಾರ ಪ್ರತಿಭಟನೆ ಮಾಡಿದರು   

ಕಲಬುರ್ಗಿ: 371 (ಜೆ) ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್‌ಎಫ್‌ಐ) ಸದಸ್ಯರು ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಕಚೇರಿ ಎದುರು ಗುರುವಾರ ಪ್ರತಿಭಟನೆ ಮಾಡಿದರು.

371 (ಜೆ) ಕಾಯ್ದೆ ಜಾರಿಗೆ ಬಂದು ಆರು ವರ್ಷ ಕಳೆದಿವೆ. ಆದರೂ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿಲ್ಲ. ನಿರೀಕ್ಷೆಯಂತೆ ಶಿಕ್ಷಣ, ಉದ್ಯೋಗ ಸಿಗುತ್ತಿಲ್ಲ. ಈ ಭಾಗದ ರಾಜಕಾರಣಿಗಳಿಗೆ ಇದು ರಾಜಕೀಯ ದಾಳವಾಗಿದೆಯೇ ಹೊರತು ಅದರಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಲು ಯಾರೂ ಮುಂದಾಗುತ್ತಿಲ್ಲ. ಇದರಿಂದಾಗಿ ಖಾಲಿ ಹುದ್ದೆಗಳು ಹಾಗೆಯೇ ಉಳಿದಿವೆ ಎಂದು ಆರೋಪಿಸಿದರು.

ಆಡಳಿತ ಇಲಾಖೆಗೆ ಒಳಪಡುವ 12 ಸರ್ಕಾರಿ ಇಲಾಖೆಗಳು ಮತ್ತು ಇವುಗಳ ಅಧೀನದಲ್ಲಿರುವ ನಿಗಮ, ಮಂಡಳಿ, ಪ್ರಾಧಿಕಾರಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಗುರುತಿಸಿ, ಸ್ಥಳೀಯ ವೃಂದ ರಚಿಸಿ ಅಧಿಸೂಚನೆ ಹೊರಡಿಸಿಲ್ಲ. ನೇರ ನೇಮಕಕ್ಕೆ ಸಂಬಂಧಿಸಿದಂತೆ 35 ಸಾವಿರ ಹುದ್ದೆಗಳು ಖಾಲಿ ಇವೆ. ಬಡ್ತಿ ಮೂಲಕ 37 ಸಾವಿರ ಹುದ್ದೆಗಳನ್ನು ಭರ್ತಿ ಮಾಡಬೇಕಿದೆ. ಆದಾಗ್ಯೂ, ಸರ್ಕಾರ ಇತ್ತ ಗಮನಹರಿಸುತ್ತಿಲ್ಲ ಎಂದು ದೂರಿದರು.

ADVERTISEMENT

ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ವಾರ್ಷಿಕ ₹1,500 ಕೋಟಿ ಅನುದಾನ ಬರುತ್ತಿದೆ. ಆದರೆ, ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಅದು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಸುಧಾರಣೆಯಾಗಿಲ್ಲ. ಗ್ರಾಮೀಣ ಪ್ರದೇಶದಲ್ಲಿ ರಸ್ತೆ ಮತ್ತು ಚರಂಡಿ ವ್ಯವಸ್ಥೆ ಸರಿ ಇಲ್ಲ. ಶಾಲಾ–ಕಾಲೇಜುಗಳು, ವಸತಿ ನಿಲಯಗಳು ಮೂಲಸೌಕರ್ಯಗಳಿಲ್ಲದೆ ಸೊರಗಿ ಹೋಗಿವೆ. ಆದ್ದರಿಂದ ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕು. ಈ ಭಾಗದ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ, ರಾಜ್ಯ ಸಮಿತಿ ಸದಸ್ಯರಾದ ಲಿಂಗಣ್ಣ ಮಕಾಶಿ, ವಿಜಯ ರಾಠೋಡ, ನಗರ ಸಂಚಾಲಕ ಸಿದ್ದು ಪಾಳಾ, ಮುಖಂಡ ಪ್ರಮೋದ ಪಾಟೀಲ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.