ADVERTISEMENT

ಶಹಾಬಾದ್ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 6:27 IST
Last Updated 11 ಅಕ್ಟೋಬರ್ 2020, 6:27 IST

ಶಹಾಬಾದ್: ಕಳೆದ ಎರಡು ವರ್ಷಗಳ ಬಳಿಕ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ –ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಗೊಂಡಿದ್ದು, ಇಲ್ಲಿನ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಆಕಾಂಕ್ಷಿಗಳ ಪೈಪೋಟಿ ಶುರುವಾಗಿದೆ.

ಅಧ್ಯಕ್ಷ ಸ್ಥಾನವು ಎಸ್.ಸಿ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮನ್ಯ ವರ್ಗಕ್ಕೆ ಮೀಸಲಾಗಿದೆ. ನಗರಸಭೆಯ ಒಟ್ಟು 27 ಸದಸ್ಯ ಸ್ಥಾನಗಳಲ್ಲಿ 18 ಜನ ಕಾಂಗ್ರೆಸ್‌, 3 ಜನ ಪಕ್ಷೇತರರು ಮತ್ತು ಜೆಡಿಎಸ್‌ನ 1 ಸದಸ್ಯ ಇದ್ದಾರೆ. ಬಿಜೆಪಿಯ ಐವರು ಸದಸ್ಯರಲ್ಲಿ ಒಬ್ಬರು ಮರಣ ಹೊಂದಿರುವುದರಿಂದ ಸದಸ್ಯ ಬಲ 4ಕ್ಕೆ ಇಳಿದಿದೆ.

ಪೂರ್ಣ ಬಹುಮತ ಹೊಂದಿರುವ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುವುದು ಶತಸಿದ್ಧ. ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ 5 ಮಹಿಳಾ ಸದಸ್ಯರಿದ್ದಾರೆ. ಅವರಲ್ಲಿ ನಾಲ್ವರ ಹೆಸರು ಕೇಳಿ ಬರುತ್ತಿದೆ.

ADVERTISEMENT

ವಾರ್ಡ್‌ ನಂ.6ರ ಚಂಪಾಬಾಯಿ ರಾಜು ಮೇಸ್ತ್ರಿ, ವಾರ್ಡ್‌ ನಂ.7ರ ಲಕ್ಷ್ಮಿಬಾಯಿ ವೆಂಕಟೇಶ ಕುಸಾಳೆ, ವಾರ್ಡ್‌ ನಂ.10ರ ಪೀರಮ್ಮ ಬಸಲಿಂಗಪ್ಪ ಪಗಲಾಪೂರ, ವಾರ್ಡ್‌ ನಂ.25ರ ಅಂಜಲಿ ಗಿರೀಶ ಕಂಬಾನೂರ ಅವರು ಪೈಪೋಟಿಯಲ್ಲಿದ್ದಾರೆ.

ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ ಹಾಗೂ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್ ಯಾರ ಪರ ನಿರ್ಧಾರ ಕೈಗೊಳ್ಳಲಿದ್ದಾರೋ ಅವರೇ ನಗರಸಭೆಯ ಅಧ್ಯಕ್ಷ –ಉಪಾಧ್ಯಕ್ಷರಾಗುವುದು ಖಚಿತ.

ಉಪಾಧ್ಯಕ್ಷ ಸ್ಥಾನಕ್ಕೆ ಸೂರ್ಯಕಾಂತ ಕೋಬಾಳ, ಡಾ.ಅಹ್ಮದ್ ಪಟೇಲ್, ಇನಾಯತಖಾನ ಜಮಾದಾರ ಹಾಗೂ ಮಲ್ಲಿಕಾರ್ಜುನ ವಾಲಿ ಅವರ ಹೆಸರು ಕೇಳಿ ಬರುತ್ತಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ನಾಲ್ವರು ಆಕಾಂಕ್ಷಿಗಳಲ್ಲಿ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದ್ದಾರೆ ಎಂದು ಕಾದು ನೋಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.