ಶಹಾಬಾದ್: ನಿತ್ಯ ಒಂದಲ್ಲ ಒಂದು ಅವಘಡಗಳು ಸಂಭವಿಸುತ್ತಿವೆ. ಲಾರಿ, ಟ್ರ್ಯಾಕ್ಟರ್‌ಗಳು ಉರುಳುತ್ತಿವೆ. ಬಸ್ ಆಟೊ ಕಾರುಗಳು ರಸ್ತೆಯಲ್ಲಿ ಸಿಕ್ಕಿಬಿಳುತ್ತಿವೆ. ಬೈಕ್ ಸವಾರರು ರಸ್ತೆ ಎಲ್ಲಿದೆ ಎಂದು ಹುಡುಕಿ ಹಾವಿನಂತೆ ತೆರಳುತ್ತಿದ್ದಾರೆ. ಪ್ರಯಾಣಿಕರು, ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದುಕೊಂಡು ಹರ ಸಾಹಸಪಡುತ್ತಾರೆ.
ಇದು ಶಹಾಬಾದ್‌ನಿಂದ ಜೇವರ್ಗಿ ರಸ್ತೆ ಮಾರ್ಗವಾಗಿ ಹೋಗುವಂತಹ ಪ್ರತಿಯೊಬ್ಬರ ಗೋಳು. ಶಹಾಬಾದ್ ಜನಪ್ರತಿನಿಧಿಗಳು , ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಮನದಲ್ಲಿ ಬೈದು ಸಾಗುತ್ತಿದ್ದಾರೆ.
ಶಹಾಬಾದ್‌ನಿಂದ ತೋನಸನಹಳ್ಳಿ ಮಾರ್ಗವಾಗಿ ಫಿರೋಜಾಬಾದ್ ಕ್ರಾಸ್‌ವರೆಗಿನ ರಸ್ತೆಯಲ್ಲಿ ಭಾರಿ ಪ್ರಮಾಣದ ಗುಂಡಿಗಳು ಬಿದ್ದಿವೆ. ಪ್ರಯಾಣಕ್ಕೆ ಯೋಗ್ಯ ಇಲ್ಲದ ರಸ್ತೆಯಾಗಿ ಮಾರ್ಪಟ್ಟಿದೆ. ಪ್ರತಿ ಬಾರಿ ವಿವಿಧ ಪಕ್ಷ ಸಂಘಟನೆಗಳು ಹೋರಾಟ ಮಾಡಿ ರಸ್ತೆ ತಡೆ ಮಾಡಿದಾಗ ಮಾತ್ರ ಮಣ್ಣು ತಂದು ಸುರಿಯುತ್ತಾರೆ. ‘ನಮ್ಮ ಹತ್ತಿರ ಹಣವಿಲ್ಲ ಮೇಲಧಿಕಾರಿಗಳಿಗೆ ಪತ್ರ ಬರೆದಿದ್ದೇವೆ ಕೆಕೆಆರ್‌ಡಿಬಿಯಿಂದ ಹಣ ಬಿಡುಗಡೆ ಆದಮೇಲೆ ರಸ್ತೆ ಮಾಡುತ್ತೇವೆ’ ಎಂದು ಆಶ್ವಾಸನೆ ನೀಡಿ ಮನವಿ ಪತ್ರ ಸ್ವೀಕರಿಸಿ ತೆರಳುವುದೇ ಆಗಿದೆ. ದಶಕಗಳಿಂದ ರಸ್ತೆ ನಿರ್ಮಾಣವಾಗಿಲ್ಲ.
ಕಲಬುರಗಿ ಗ್ರಾಮೀಣ ಹಾಗೂ ಅಫಜಲಪುರ ಕ್ಷೇತ್ರದಿಂದ ಹಾದು ಹೋಗುವ ರಾಜ್ಯ ಹೆದ್ದಾರಿ 125 ಶಹಾಬಾದ್ ಕನಕದಾಸ ವೃತ್ತದಿಂದ ತೋನಸನಹಳ್ಳಿ ಮಾರ್ಗವಾಗಿ ಎರಡು ಕಿಲೋಮೀಟರ್‌ವರೆಗೆ ಕಾಮಗಾರಿ ನಡೆಯುತ್ತಿದೆ. ಅದು ಕೂಡ ಆಮೆ ಗತಿಯಲ್ಲಿ ಸಾಗುತ್ತಿದೆ. 7 ಕಿ.ಮೀ. ಕಲಬುರಗಿ ಪಿಡಬ್ಲ್ಯೂಡಿಗೆ ಸಂಬಂಧಪಟ್ಟಿದೆ. 9 ಕಿ.ಮೀ. ಫಿರೋಜಾಬಾದ್‌ವರೆಗೆ ಅಫಜಲಪುರ ಕ್ಷೇತ್ರ ಸೇರುತ್ತದೆ. ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಹೋಗಿದ್ದಾರೆ. ಜಿಲ್ಲಾಧಿಕಾರಿ ಗಮನಕ್ಕೂ ತಂದಿದ್ದೇವೆ. ಹಣ ಬಿಡುಗಡೆ ಆದ ನಂತರ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದು ಹೇಳುವುದು ಸಾಮಾನ್ಯವಾಗಿದೆ.
ಜಿಲ್ಲಾಧಿಕಾರಿ ಕೂಡಲೇ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ರಸ್ತೆ ಕಾಮಗಾರಿ ಪ್ರಾರಂಭಿಸಬೇಕು, ಆಗುವ ಜೀವ ಹಾನಿ ಅನಾಹುತಗಳನ್ನು ತಪ್ಪಿಸಬೇಕು. ಇಲ್ಲವಾದರೆ ಜೆಸಿಬಿಯಿಂದ ರಸ್ತೆ ಅಗೆದು ಸಂಪೂರ್ಣವಾಗಿ ಸಂಚಾರ ನಿಲ್ಲಿಸುತ್ತೇವೆ ಎನ್ನುತ್ತಿದ್ದಾರೆ ಸ್ಥಳೀಯರು.
ಹೊಲಗಳಲ್ಲಿ ಕೆಲಸ ಮಾಡುವುದು ಬಿಟ್ಟು ಸಿಕ್ಕಿ ಬಿದ್ದಿರುವ ವಾಹನಗಳನ್ನು ತೆಗೆದು ಪ್ರಯಾಣಿಕರಿಗೆ ಸಹಾಯ ಮಾಡುವುದೇ ನಿತ್ಯದ ಕೆಲಸವಾಗಿದೆ-ಲಕ್ಷ್ಮಿಕಾಂತಗೌಡ, ಶಹಾಪುರೆ ರೈತ
ಅಧಿಕಾರಿ ಜನಪ್ರತಿನಿಧಿಗಳಿಗೆ ಮಾನವೀಯತೆ ಇಲ್ಲ ನಿತ್ಯ ಇದೇ ಗೋಳು. 10 ನಿಮಿಷದಲ್ಲಿ ಕ್ರಮಿಸುವ ರಸ್ತೆಯನ್ನು ಒಂದು ಗಂಟೆಯಾದರೂ ಕ್ರಮಿಸಲು ಆಗಲ್ಲ- ಸುಕನ್ಯಾ, ಆರೋಗ್ಯ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.