ADVERTISEMENT

Sharanabasappa Appa: ‘ಜ್ಞಾನ ದಾಸೋಹಿ’ ವಿಭೂತಿಯಲ್ಲಿ ಲೀನ

ಬಸೀರ ಅಹ್ಮದ್ ನಗಾರಿ
Published 15 ಆಗಸ್ಟ್ 2025, 23:30 IST
Last Updated 15 ಆಗಸ್ಟ್ 2025, 23:30 IST
ಕಲಬುರಗಿಯಲ್ಲಿ ಶುಕ್ರವಾರ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆಗೂ ಮುನ್ನ ಶರಣಬಸವೇಶ್ವರ ದೇವಸ್ಥಾನದ ಸುತ್ತ ಪಲ್ಲಕ್ಕಿಯಲ್ಲಿ ಕೂರಿಸಿ ಪ್ರದಕ್ಷಿಣೆ ಹಾಕಲಾಯಿತು  ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಕಲಬುರಗಿಯಲ್ಲಿ ಶುಕ್ರವಾರ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರ ಪಾರ್ಥಿವ ಶರೀರವನ್ನು ಅಂತ್ಯಕ್ರಿಯೆಗೂ ಮುನ್ನ ಶರಣಬಸವೇಶ್ವರ ದೇವಸ್ಥಾನದ ಸುತ್ತ ಪಲ್ಲಕ್ಕಿಯಲ್ಲಿ ಕೂರಿಸಿ ಪ್ರದಕ್ಷಿಣೆ ಹಾಕಲಾಯಿತು  ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌   

ಕಲಬುರಗಿ: ಕಲ್ಯಾಣ ‌ಕರ್ನಾಟಕ ಭಾಗದ‌ ಆರಾಧ್ಯದೈವ ಶರಣ ಬಸವೇಶ್ವರರ ಮಹಾ ದಾಸೋಹ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ (90) ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ‌ಗೌರವ ಹಾಗೂ ಧಾರ್ಮಿಕ ವಿಧಿ–ವಿಧಾನಗಳೊಂದಿಗೆ ಶುಕ್ರವಾರ ನಡೆಯಿತು. 

ಇಲ್ಲಿನ ಶರಣಬಸವೇಶ್ವರ ದೇವಸ್ಥಾನದ ಎದುರು ನಿರ್ಮಿಸಿದ್ದ ಸಮಾಧಿ ಬಳಿ ಗೋದೂಳಿ‌ ಹೊತ್ತಿಗೆ ಶರಣಬಸವಪ್ಪ ಅಪ್ಪ ಅವರ ಅಂತ್ಯಕ್ರಿಯೆ ಕಾರ್ಯ ಆರಂಭಗೊಂಡವು. ಸಂಜೆ 4.30ಕ್ಕೆ ಪಾರ್ಥಿವ ಶರೀರವನ್ನು ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಲಾಯಿತು. ‘ಶರಣಬಸವೇಶ್ವರ ಮಹಾರಾಜ್ ಕೀ ಜೈ’, ‘ಓಂ ನಮಃ ಶಿವಾಯ’ ಘೋಷಣೆಗಳು, ವಿವಿಧ ವಾದ್ಯಗಳ ವಾದನದ ನಡುವೆ ಶರಣಬಸವೇಶ್ವರ ದೇವಸ್ಥಾನಕ್ಕೆ ಐದು ಸುತ್ತು ಹಾಕಲಾಯಿತು. ಸೂರ್ಯಾಸ್ತದ ವೇಳೆಗೆ ಭಕ್ತರ ಶೋಕದ ನಡುವೆ ಕ್ರಿಯಾವಿಧಿ ಕಾರ್ಯ ಸಮಾಪ್ತವಾಯಿತು.

ಸಂಸ್ಥಾನದ ಏಳನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಸಮಾಧಿ ಪಕ್ಕವೇ ಕಲ್ಯಾಣ ಭಾಗದ ‘ಜ್ಞಾನ ದಾಸೋಹಿ’ ವಿಭೂತಿ, ಬಿಲ್ವಪತ್ರೆಯಲ್ಲಿ ಲೀನವಾದರು. ಕುಟುಂಬದವರು ಹಾಗೂ ಭಕ್ತರ ಅಶ್ರುತರ್ಪಣ ನಡುವೆಯೇ ‘ಅಪ್ಪ’ ಅವರು ಸಮಾಧಿಸ್ಥರಾದರು.

ADVERTISEMENT

ವೀರಶೈವ ಲಿಂಗಾಯತ ಸಂಪ್ರದಾಯದಂತೆ ನಾಡಿನ‌ ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ 15 ಜನರ ತಂಡವು ಅಂತ್ಯಕ್ರಿಯೆ ‌ವಿಧಿವಿಧಾನಗಳನ್ನು ನಡೆಸಿಕೊಟ್ಟಿತು. 50 ನಿಮಿಷ ನಡೆದ ಈ ಪ್ರಕ್ರಿಯೆಯಲ್ಲಿ ಕ್ರಿಯಾಸಮಾಧಿಗೆ 10 ಸಾವಿರಕ್ಕೂ ಅಧಿಕ ವಿಭೂತಿ ಗಟ್ಟಿ, 1 ಲಕ್ಷದಷ್ಟು ತ್ರಿದಳ ಬಿಲ್ವಪತ್ರೆ, ತರಹೇವಾರಿ ಪುಷ್ಪದಳಗಳನ್ನು ಬಳಸಲಾಯಿತು.

ಕಲಬುರಗಿಯಲ್ಲಿ ಶುಕ್ರವಾರ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರ ಕ್ರಿಯಾಸಮಾಧಿ ವೇಳೆ ಪತ್ನಿ ದಾಕ್ಷಾಯಣಿ ಅಪ್ಪ ಹಾಗೂ ಕುಟುಂಬದ ಸದಸ್ಯರು ಭಾವುಕರಾದ ಕ್ಷಣ  ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌

ಲಕ್ಷಾಂತರ ಭಕ್ತರು:

ಶರಣಬಸವಪ್ಪ ಅಪ್ಪ ಅವರ ‘ಪ್ರಸಾದಿ ಶರೀರ’ದ ಸಾರ್ವಜನಿಕ ದರ್ಶನಕ್ಕೆ ಸಂಸ್ಥಾನದ ಮಹಾಮನೆ ಎದುರಿನ ಶಿವಾನುಭವ ಮಂಟಪದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆ 8ರಿಂದ ಮಧ್ಯಾಹ್ನ 3.30ರ ತನಕ ಲಕ್ಷಾಂತರ ಭಕ್ತರು ದರ್ಶನ ಪಡೆದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಪ್ರಿಯಾಂಕ್ ಖರ್ಗೆ, ಡಾ.ಶರಣಪ್ರಕಾಶ ಪಾಟೀಲ, ಈಶ್ವರ ಖಂಡ್ರೆ, ‌ಶರಣಬಸಪ್ಪ ದರ್ಶನಾಪುರ, ರಾಜ್ಯ ಯೋಜನಾ ಆಯೋಗದ‌ ಉಪಾಧ್ಯಕ್ಷ ಬಿ.ಆರ್.‌ಪಾಟೀಲ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ನೂರಕ್ಕೂ ಅಧಿಕ ಗಣ್ಯರು ಅಂತಿಮ ದರ್ಶನ ಪಡೆದು, ನುಡಿನಮನ ಸಲ್ಲಿಸಿದರು. ಸಾರ್ವಜನಿಕ ದರ್ಶನ ಸ್ಥಳದಲ್ಲಿ ಭಜನೆ‌ ಅನುರಣಿಸಿದರೆ, ವಚನಗಳು, ಭಕ್ತಿ ‌ಗೀತೆಗಳ ಗಾಯನ‌ ಮಾರ್ದನಿಸಿತು.

ಬಿಸಿಲಿಗೆ ಹೆಸರಾದ ಕಲಬುರಗಿಯಲ್ಲಿ ದಿನವಿಡೀ ಸೂರ್ಯ‌ ಬಹುತೇಕ ಮೋಡಗಳ ಮಧ್ಯೆ ಅವಿತಿದ್ದ. ಆಗಸದಲ್ಲಿ ದಟ್ಟೈಸಿದ್ದ ‌ಮೋಡಗಳು ಕ್ರಿಯಾಸಮಾಧಿಗೆ ಅರ್ಧ ಗಂಟೆ ಮೊದಲು ಮಳೆ ಸಿಂಚನಗೈದವು. ಇದು ‘ಶರಣರಿಗೆ ಮರಣವೇ ಮಹಾನವಮಿ’ ಎಂದು ಸಾರಿದಂತೆ ಭಾಸವಾಯಿತು.

ಕಲಬುರಗಿಯಲ್ಲಿ ಶುಕ್ರವಾರ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರ ಕ್ರಿಯಾಸಮಾಧಿ ವೇಳೆ ಪತ್ನಿ ದಾಕ್ಷಾಯಣಿ ಅಪ್ಪ ಹಾಗೂ ಕುಟುಂಬದ ಸದಸ್ಯರು ಭಾವುಕರಾದ ಕ್ಷಣ  ಪ್ರಜಾವಾಣಿ ಚಿತ್ರ: ತಾಜುದ್ದೀನ್‌ ಆಜಾದ್‌
ಲಿಂಗ ಪೇಟಾ ಪುಷ್ಪಹಾರ...
ಶರಣಬಸವಪ್ಪ ಅಪ್ಪ ಅವರ ಪಾರ್ಥಿವ ಶರೀರವನ್ನು ವೇದ ಮಂತ್ರಗಳೊಂದಿಗೆ ಕ್ರಿಯಾಸಮಾಧಿಗೆ ಇಳಿಸಿದ ಬಳಿಕ ಪೂಜೆ ಸಲ್ಲಿಸಲಾಯಿತು. ನಂತರ ಅವರ ಕೊರಳಲ್ಲಿದ್ದ ಚಿನ್ನದ ಕರಡಿಕೆಯ ಲಿಂಗವನ್ನು ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಹಾಗೂ ಪುತ್ರ ದೊಡ್ಡಪ್ಪ ಅಪ್ಪ ಕೊರಳಿಗೆ ಹಾರಕೂಡದ ಚನ್ನವೀರ ಶಿವಾಚಾರ್ಯ ಹಾಕಿದರು. ಬಳಿಕ ಪೇಟಾ ತೋಡಿಸಿ ಪುಷ್ಪ ಹಾರ ಹಾಕಿದರು. ಈ ವೇಳೆ ಮತ್ತೆ ‘ಶರಣಬಸವೇಶ್ವರ ಮಹಾರಾಜ್ ಕೀ ಜೈ’ ಘೋಷಣೆ ಮೊಳಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.