ADVERTISEMENT

ಶರಣಬಸವಪ್ಪ ಅಪ್ಪ ಅವರ ವ್ಯಕ್ತಿತ್ವಕ್ಕೆ ಅವರೇ ಸಾಟಿ: ಮಹಾಂತ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 6:05 IST
Last Updated 21 ಆಗಸ್ಟ್ 2025, 6:05 IST
ಕಲಬುರಗಿಯ ಗೋದುತಾಯಿ ದೊಡ್ಡಪ್ಪ ಅಪ್ಪ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಶರಣಬಸವಪ್ಪ ಅಪ್ಪ ಅವರಿಗೆ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮುದಗಲ್‌ನ ಮಹಾಂತ ಸ್ವಾಮೀಜಿ ಮಾತನಾಡಿದರು
ಕಲಬುರಗಿಯ ಗೋದುತಾಯಿ ದೊಡ್ಡಪ್ಪ ಅಪ್ಪ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಶರಣಬಸವಪ್ಪ ಅಪ್ಪ ಅವರಿಗೆ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮುದಗಲ್‌ನ ಮಹಾಂತ ಸ್ವಾಮೀಜಿ ಮಾತನಾಡಿದರು   

ಕಲಬುರಗಿ: ‘ಕಲ್ಯಾಣ ಕರ್ನಾಟಕದ ಸರ್ವತೋಮುಖ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಲಿಂ.ಶರಣಬಸವಪ್ಪ ಅಪ್ಪ ಅವರ ವ್ಯಕ್ತಿತ್ವಕ್ಕೆ ಅವರೇ ಸಾಟಿ’ ಎಂದು ಮುದಗಲ್‌ನ ಕಲ್ಯಾಣ ಆಶ್ರಮದ ಮಹಾಂತ ಸ್ವಾಮೀಜಿ ಹೇಳಿದರು.

ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ಲಿಂ.ಶರಣಬಸವಪ್ಪ ಅಪ್ಪ ಅವರಿಗೆ ಹಮ್ಮಿಕೊಂಡಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಜಾತಿ, ಮತ, ಪಂಥ ಎನ್ನದೆ ಎಲ್ಲರನ್ನೂ ಸಮಾನವಾಗಿ ಕಂಡು ಗೌರವಿಸಿದರು. ಅನ್ನ ದಾಸೋಹ, ಅಕ್ಷರ ದಾಸೋಹಕ್ಕೆ ಮಹತ್ವವನ್ನು ನೀಡಿದ ಪೂಜ್ಯರು ಈ ಭಾಗದ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ದೀವಿಗೆಯಾಗಿ ಪ್ರಜ್ವಲಿಸಿದವರು. ಸರ್ಕಾರಗಳು ಅವರಿಗೆ ಯಾವುದೇ ಪ್ರಶಸ್ತಿ ನೀಡುವುದು ದೊಡ್ಡದಲ್ಲ. ಅವರೇ ಅನೇಕರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಯಾವ ಪ್ರಶಸ್ತಿಗೂ ಅವರು ಅಪೇಕ್ಷೆ ಪಟ್ಟವರಲ್ಲ. ಸರ್ಕಾರಗಳು ಉನ್ನತ ಪ್ರಶಸ್ತಿ ನೀಡಿ ಗೌರವಿಸಿ ತಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಬೇಕಿತ್ತು. ಭಾರತರತ್ನಕ್ಕಿಂತ ಭಾವರತ್ನ ದೊಡ್ಡದು’ ಎಂದರು.

ADVERTISEMENT

ಶರಣಬಸವೇಶ್ವರ ದೇವಸ್ಥಾನ ಆವರಣದ ಶಾಲಾ-ಕಾಲೇಜುಗಳ ನಿರ್ದೇಶಕಿ ನೀಲಾಂಬಿಕಾ ಶೇರಿಕಾರ ಮಾತನಾಡಿ, ‘ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಿದ ಶರಣಬಸವಪ್ಪ ಅಪ್ಪ ಅವರು, ಈ ಭಾಗ ಶೈಕ್ಷಣಿಕ ಅಭಿವೃದ್ಧಿ ಕಾಣಲು ಹಗಲು ರಾತ್ರಿ ದುಡಿದಿದ್ದಾರೆ’ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯೆ ಪುಟ್ಟಮಣಿ ದೇವಿದಾಸ ಮಾತನಾಡಿ, ‘ಅಪ್ಪ ಅವರು ಬುದ್ಧ, ಬಸವ, ಅಂಬೇಡ್ಕರ್‌ ತೋರಿದ ಮಾರ್ಗದಲ್ಲಿ ನಡೆದವರು. ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕ ದಾಸೋಹ ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.

ಪ್ರಾಚಾರ್ಯ ಎಂ.ಆರ್.ಹುಗ್ಗಿ, ಕಲ್ಪನಾ ಭೀಮಳ್ಳಿ, ಅನಿತಾ ಕನಶೆಟ್ಟಿ, ಖಂಡೇರಾವ, ಪ್ರಾಧ್ಯಾಪಕರಾದ ಸಿದ್ಧಲಿಂಗರೆಡ್ಡಿ, ಶಾಂತಲಿಂಗ ಘಂಟೆ, ಕಾಮೇಶ ದಾಮಾ, ಪ್ರಸಾದ ಅಷ್ಟಗೀಕರ್, ಬಾಬುರಾವ ಮಡಿವಾಳ, ಸಂತೋಷ ಪೂಜಾರಿ, ದಾಕ್ಷಾಯಣಿ ಕಾಡಾದಿ, ಪ್ರೀತಿ ಬಿರಾದಾರ ಮಾತನಾಡಿದರು.

ಕೃಪಾಸಾಗರ ಗೊಬ್ಬುರ್ ನಿರೂಪಿಸಿದರು. ವೀರಭದ್ರಯ್ಯ ಸ್ಥಾವರಮಠ ಮತ್ತು ವಿದ್ಯಾರ್ಥಿನಿಯರು ಪ್ರಾರ್ಥಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.