ADVERTISEMENT

ಕಲಬುರಗಿ | ‘ಶರಣ ಸ್ಮಾರಕಗಳ ರಕ್ಷಣೆ ಅವಶ್ಯಕ’

ಪತ್ರಾಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ವೀರಶೆಟ್ಟಿ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 5:24 IST
Last Updated 8 ಸೆಪ್ಟೆಂಬರ್ 2025, 5:24 IST
ಕಲಬುರಗಿಯ ಬಸವ ಸಮಿತಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೀರಶೆಟ್ಟಿ ಗಾರಂಪಳ್ಳಿ ಅವರಿಗೆ ವೀರಣ್ಣ ದಂಡೆ, ಲಿಂಗಬಸವ ಪಾಟೀಲ ಪುಸ್ತಕ ನೀಡಿ ಗೌರವಿಸಿದರು
ಕಲಬುರಗಿಯ ಬಸವ ಸಮಿತಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವೀರಶೆಟ್ಟಿ ಗಾರಂಪಳ್ಳಿ ಅವರಿಗೆ ವೀರಣ್ಣ ದಂಡೆ, ಲಿಂಗಬಸವ ಪಾಟೀಲ ಪುಸ್ತಕ ನೀಡಿ ಗೌರವಿಸಿದರು   

ಕಲಬುರಗಿ: ಕಲ್ಯಾಣ ಕರ್ನಾಟಕದ ಬಸವ ಕಲ್ಯಾಣ, ಕಲಬುರಗಿ ಸೇರಿದಂತೆ ವಿವಿಧೆಡೆ ಐತಿಹಾಸಿಕ ಮಹತ್ವದ ಶರಣ ಸ್ಮಾರಕಗಳಿದ್ದು, ಅವುಗಳನ್ನು ರಕ್ಷಿಸುವ ಅವಶ್ಯಕತೆ ಇದೆ ಎಂದು ಪತ್ರಾಗಾರ ಇಲಾಖೆಯ ಕಲಬುರಗಿ ವಿಭಾಗದ ಹಿರಿಯ ಸಹಾಯಕ ನಿರ್ದೇಶಕ ವೀರಶೆಟ್ಟಿ ಗಾರಂಪಳ್ಳಿ ಅಭಿಪ್ರಾಯಪಟ್ಟರು.

ನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಬಂಡಮ್ಮ ಶರಣಪ್ಪ ದಂಡೆಯವರ ಸ್ಮರಣಾರ್ಥ ಭಾನುವಾರ ಜರುಗಿದ ಅರಿವಿನ ಮನೆ 867ನೇ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಶರಣ ಸ್ಮಾರಕಗಳು ಶರಣ ಚಳವಳಿಯ ಐತಿಹಾಸಿಕ ಸಾಕ್ಷಿಯಾಗಿ ನಿಲ್ಲುತ್ತವೆ. ಮೌಖಿಕ ಪರಂಪರೆಯಲ್ಲಿ ಜನಪದರು ಶರಣರ ಮತ್ತು ಶರಣ ಸ್ಮಾರಕಗಳ ಕುರಿತಾಗಿ ಮಾಹಿತಿ ಒದಗಿಸುತ್ತಾರೆ. ಶರಣ ಸ್ಮಾರಕಗಳು ಅನ್ಯ ಆಚರಣೆಗಳ ಪ್ರಭಾವಕ್ಕೆ ಒಳಗಾಗುತ್ತಿವೆ. ಇದು ದುರ್ದೈವದ ಸಂಗತಿ. ಪತ್ರಾಗಾರ ಇಲಾಖೆಯಲ್ಲಿ ಹಲವಾರು ಶರಣ ಸ್ಮಾರಕಗಳ ಕುರಿತಾದ ಐತಿಹಾಸಿಕ ದಾಖಲೆಗಳು ದೊರೆಯುತ್ತವೆ’ ಎಂದರು.

‘ವೀರಣ್ಣ ದಂಡೆ ಅವರು ಶರಣ ಸ್ಮಾರಕಗಳ ಕುರಿತಾಗಿ ಸಂಶೋಧನೆ ಮಾಡಿ ದಾಖಲಿಸಿದಾಗ ಮಾತ್ರ ಶರಣ ಸ್ಮಾರಕಗಳು ಶಿಷ್ಟ ಸಾಹಿತ್ಯದಲ್ಲಿ ದಾಖಲೆಗೊಂಡಿವೆ. ಅದಕ್ಕಿಂತ ಮುಂಚೆ ಶರಣ ಸ್ಮಾರಕಗಳು ಕೇವಲ ಮೌಖಿಕ ಪರಂಪರೆಯಾಗಿ ಉಳಿದುಕೊಂಡಿದ್ದವು’ ಎಂದು ಹೇಳಿದರು.

ADVERTISEMENT

‘ಬಸವಕಲ್ಯಾಣ ಪರಿಸರದ ಶರಣ ಸ್ಮಾರಕಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಪರಿಚಯಿಸಲು ಮಾರ್ಗಸೂಚಿ ಫಲಕಗಳನ್ನು ಅಳವಡಿಸುವ ಅವಶ್ಯಕತೆ ಇದೆ’ ಎಂದರು.

ಬಸವ ಸಮಿತಿ ಅಧ್ಯಕ್ಷೆ ವಿಲಾಸವತಿ ಖೂಬಾ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕ ಪ್ರೊ. ವೀರಣ್ಣ ದಂಡೆ ಸ್ವಾಗತಿಸಿದರು. ಉಪನ್ಯಾಸಕ ಆನಂದ ಸಿದ್ಧಾಮಣಿ ವಂದಿಸಿದರು. ಲಿಂಗಬಸವ ಪಾಟೀಲ, ಕಲ್ಲಪ್ಪ ವಾಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.