
ಕಲಬುರಗಿ: ‘ಕೇಂದ್ರ ಸರ್ಕಾರವು ರಾಜ್ಯಕ್ಕೆ ನಿರಂತರವಾಗಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ಸೇಡಿನ ರಾಜಕಾರಣ ಮಾಡುತ್ತಿದೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಟೀಕಿಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕಲಬುರಗಿ ಸಂಸದ ನವೀಕೃತ ಕಚೇರಿಯ ಉದ್ಘಾಟನೆ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಈ ಹಿಂದೆಯೂ ವಿಮಾನ ಸಂಚಾರ ಸ್ಥಗಿತಗೊಂಡಾಗ ಮರು ಕಾರ್ಯಾಚರಣೆಗೆ ಆಗ್ರಹಿಸಿದಾಗ ವಿಮಾನಗಳ ಸೇವೆ ಶುರುವಾಗಿತ್ತು. ಇದೀಗ ಪುನಃ ದಿಢೀರ್ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದಲ್ಲದೆ ತೆರಿಗೆ ಹಂಚಿಕೆಯಲ್ಲಿಯೂ ರಾಜ್ಯಕ್ಕೆ ಅನ್ಯಾಯ ಮುಂದುವರಿದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಸದ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ, ‘ವಿಮಾನಗಳ ಸಂಚಾರ ಏಕಾಏಕಿ ಸ್ಥಗಿತದಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಿದೆ. ಈ ಕುರಿತು ಕೇಂದ್ರಕ್ಕೆ ಪತ್ರ ಬರೆದು ಗಮನ ಸೆಳೆಯಲಾಗಿದೆ. ಅ.30ರಂದು ಬೆಂಗಳೂರಿನಲ್ಲಿ ನಾಗರಿಕ ವಿಮಾನಯಾನ ಸಚಿವರು ಸಭೆ ಕರೆದಿದ್ದಾರೆ. ಅಲ್ಲಿಯೂ ಈ ಬಗೆಗೆ ಗಮನ ಸೆಳೆಯಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.