ADVERTISEMENT

ಕಾಲೇಜು ಕಟ್ಟಡಗಳ ದುರಸ್ತಿ: ವಿಧಾನ ಪರಿಷತ್‌ ಸದಸ್ಯ ಶಶೀಲ್‌ ನಮೋಶಿ ಭರವಸೆ

ನಗರದ ಪದವಿಪೂರ್ವ ಕಾಲೇಜುಗಳಿಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2021, 7:17 IST
Last Updated 22 ಅಕ್ಟೋಬರ್ 2021, 7:17 IST
ಕಲಬುರಗಿಯ ಸರ್ಕಾರಿ ಕನ್ಯಾ ಪದವಿಪೂರ್ವ ಕಾಲೇಜಿಗೆ ಗುರುವಾರ ಭೇಟಿ ನೀಡಿದ ವಿಧಾನ ಪರಿಷತ್‌ ಸದಸ್ಯ ಶಶೀಲ್‌ ನಮೋಶಿ ಅವರು, ಸಿಬ್ಬಂದಿಯಿಂದ ಮಾಹಿತಿ ಪಡೆದರು
ಕಲಬುರಗಿಯ ಸರ್ಕಾರಿ ಕನ್ಯಾ ಪದವಿಪೂರ್ವ ಕಾಲೇಜಿಗೆ ಗುರುವಾರ ಭೇಟಿ ನೀಡಿದ ವಿಧಾನ ಪರಿಷತ್‌ ಸದಸ್ಯ ಶಶೀಲ್‌ ನಮೋಶಿ ಅವರು, ಸಿಬ್ಬಂದಿಯಿಂದ ಮಾಹಿತಿ ಪಡೆದರು   

ಕಲಬುರಗಿ: ‘ನಗರದ ಕೆಲ ಸರ್ಕಾರಿ ಪ್ರೌಢಶಾಲೆ ಹಾಗೂ ‍ಪದವಿಪೂರ್ವ ಕಾಲೇಜು ಕಟ್ಟಡಗಳು ಹಳೆಯದಾಗಿದ್ದು, ಕುಸಿಯುವ ಸ್ಥಿತಿ ತಲುಪಿವೆ. ಅವುಗಳ ದುರಸ್ತಿ ಅಥವಾ ಹೊಸ ಕಟ್ಟಡ ಮಂಜೂರಾತಿಗೆ ಕೆಕೆಆರ್‌ಡಿಬಿಯಿಂದ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ವಿಧಾನ ಪರಿಷತ್‌ ಸದಸ್ಯ ಶಶೀಲ್‌ ನಮೋಶಿ ಹೇಳಿದರು.

ನಗರದ ವಿವಿಧ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಗುರುವಾರ ಭೇಟಿ ನೀಡಿದ ಅವರು, ಅಲ್ಲಿನ ಶಿಕ್ಷಕರು– ಉಪನ್ಯಾಸಕರೊಂದಿಗೆ ಚರ್ಚೆ ನಡೆಸಿದರು.

‘ಸರ್ಕಾರಿ ಕನ್ಯಾ ಪದವಿಪೂರ್ವ ಕಾಲೇಜು ಕಟ್ಟಡ 1950ರಲ್ಲಿ ನಿರ್ಮಿಸಿದ್ದು, ಶಿಥಿಲವಾಗಿದೆ. ವರ್ಷದಿಂದ ವರ್ಷಕ್ಕೆ ಇಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ, ಇದೇ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಿಸುವುದು ಅಗತ್ಯ. ಈ ಬಗ್ಗೆ ಕೆಕೆಆರ್‌ಡಿಬಿ ಅಧ್ಯಕ್ಷರೊಂದಿಗೆ ಮಾತನಾಡುತ್ತೇನೆ’‌ ಎಂದರು.

ADVERTISEMENT

‘ಸರ್ಕಾರಿ ಮಹಿಳಾ ಕಾಲೇಜಿಗೆ ಸುಸಜ್ಜಿತ ಆವರಣವಿಲ್ಲ. ವಿದ್ಯಾರ್ಥಿನಿಯರಿಗೆ ಮಧ್ಯಾಹ್ನ ಊಟ ಮಾಡಲು ಸುರಕ್ಷಿತ ಸ್ಥಳವಿಲ್ಲ. ರಾತ್ರಿ ಕೆಲ ಕಿಡಿಗೇಡಿಗಳು ಕಾಂಪೌಂಡ್‌ ಜಿಗಿದು ಕಾಲೇಜಿನ ಸಾಮಗ್ರಿಗಳನ್ನು ಕದ್ದ ಪ್ರಕರಣಗಳೂ ನಡೆದಿವೆ’ ಎಂದು ಅಲ್ಲಿನ ಸಿಬ್ಬಂದಿ ಗಮನಕ್ಕೆ ತಂದರು.

‘ಹಳೆ ಜೇವರ್ಗಿ ರಸ್ತೆಯಲ್ಲಿರುವ ಕನ್ನಡ– ಉರ್ದು ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿಗೆ ಅವರು ಭೇಟಿ ನೀಡಿದರು. ಇಲ್ಲಿ ಒಂದೇ ಕ್ಯಾಂಪಸ್‌ನಲ್ಲಿ 5 ಶಾಲೆ– ಕಾಲೇಜುಗಳು ನಡೆಯುತ್ತಿವೆ. ಇಲ್ಲಿ ಮಳೆ ಬಂದರೆ ಮೈದಾನವು ಕೆರೆಯಂತಾಗುತ್ತದೆ. ವಾರಗಟ್ಟಲೇ ಶಿಕ್ಷಕರು– ಮಕ್ಕಳು ನಡೆದಾಡುವುದುಕ್ಕೂ ಆಗುವುದಿಲ್ಲ’ ಎಂದು ಪ್ರಾಂಶುಪಾಲರು ನಮೋಶಿ ಅವರ ಗಮನಕ್ಕೆ
ತಂದರು.

‘ಮೈದಾನದ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಕ್ಕೆ ನೀರು ಪೂರೈಕೆ ಹಾಗೂ ಹೆಚ್ಚುವರಿ ಕೊಠಡಿಗಳ ಅವಶ್ಯಕತೆ ಕುರಿತೂ ಅವರು ಮನವಿ ಮಾಡಿದರು. ಎಲ್ಲ ಸಮಸ್ಯೆಗಳನ್ನು ಆದ್ಯತೆ ಮೇಲೆ ಬಗೆಹರಿಸಲಾಗುವುದು’ ಎಂದು ನಮೋಶಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿದ್ದ ಹಲವು ಉಪನ್ಯಾಸಕರು, ಶಿಕ್ಷಕರು, ಮುಖ್ಯಶಿಕ್ಷಕರು, ವಿವಿಧ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಸಮಸ್ಯೆ ಹೇಳಿಕೊಂಡರು. ಸಿಬ್ಬಂದಿ ಕೊರತೆ, ಕುಡಿಯುವ ನೀರು, ಶೌಚಾಲಯ, ಗ್ರಂಥಾಲಯ, ಸಮಸ್ಯೆ, ಸಂಬಳ ವಿಳಂಬ, ತಡೆ ಹಿಡಿದ ಬಡ್ತಿಗಳ ಬಗ್ಗೆಯೂ ಚರ್ಚೆ ನಡೆಸಿದರು.

ಮುಖಂಡರಾದ ಅಣವೀರ ಪಾಟೀಲ, ಮಹಾಂತೇಶ ಪಾಟೀಲ ವಗ್ದರಿಗಿ, ಶಿಕ್ಷಕ ಮಹೇಶ ಹೂಗಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.