ADVERTISEMENT

ಶಿರಪುರ ಮಾದರಿ ಚೆಕ್‌ ಡ್ಯಾಂಗಳು ಭರ್ತಿ

72 ಕಿ.ಮೀ. ಉದ್ದದ ಹಳ್ಳದಲ್ಲಿ ತುಂಬಿ ನಿಂತ ನೀರು

ಸಂಜಯ್ ಪಾಟೀಲ
Published 21 ಜೂನ್ 2025, 6:00 IST
Last Updated 21 ಜೂನ್ 2025, 6:00 IST
ಆಳಂದ ತಾಲ್ಲೂಕಿನ ಚಿಂಚೋಳಿ ಗ್ರಾಮದಲ್ಲಿ ನಿರ್ಮಿಸಲಾದ ಶಿರಪುರ ಮಾದರಿ ಚೆಕ್‌ ಡ್ಯಾಂ ಗಳಲ್ಲಿ ನೀರು ಸಂಗ್ರಹಗೊಂಡಿರುವದನ್ನು ಶಾಸಕ ಬಿ.ಆರ್.ಪಾಟೀಲ ವೀಕ್ಷಿಸಿದರು 
ಆಳಂದ ತಾಲ್ಲೂಕಿನ ಚಿಂಚೋಳಿ ಗ್ರಾಮದಲ್ಲಿ ನಿರ್ಮಿಸಲಾದ ಶಿರಪುರ ಮಾದರಿ ಚೆಕ್‌ ಡ್ಯಾಂ ಗಳಲ್ಲಿ ನೀರು ಸಂಗ್ರಹಗೊಂಡಿರುವದನ್ನು ಶಾಸಕ ಬಿ.ಆರ್.ಪಾಟೀಲ ವೀಕ್ಷಿಸಿದರು    

ಆಳಂದ: ತಾಲ್ಲೂಕಿನ ವಿವಿಧೆಡೆ ಸುರಿದ ಮುಂಗಾರು ಮಳೆಗೆ ಶಿರಪುರ ಮಾದರಿಯಲ್ಲಿ ನಿರ್ಮಿಸಲಾದ ಚೆಕ್‌ ಡ್ಯಾಂಗಳಲ್ಲಿ ಈಗ ನೀರು ಭರ್ತಿಯಾಗಿದೆ. ಇದರಿಂದ ಈ ಭಾಗದ ಅಂತರ್ಜಲ ಮಟ್ಟ ಹೆಚ್ಚಲು ಕಾರಣವಾಗಿದೆ.

ಪ್ರಸಕ್ತ ವರ್ಷದ ಆರಂಭದಲ್ಲಿ ಶಾಸಕ ಬಿ.ಆರ್.ಪಾಟೀಲ ಅವರು ನನೆಗುದಿಗೆ ಬಿದ್ದ ಶಿರಪುರ ಮಾದರಿ ಜಲ ಸಂಗ್ರಹ ಕಾರ್ಯಕ್ಕೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಚಾಲನೆ ನೀಡಿದರು. ಸರ್ಕಾರದಿಂದ ಒಟ್ಟು ₹21 ಕೋಟಿ ವೆಚ್ಚದಲ್ಲಿ ಹೊಸದಾಗಿ ಅಂಬೇವಾಡ-ಕಿಣಿಅಬ್ಬಾಸ ಮಧ್ಯದ 2 ಕಿಮೀ ಹಳ್ಳ, ಸಕ್ಕರಗಾ-ಸರಸಂಬಾ ಮಧ್ಯದ 3 ಕಿಮೀ ಹಳ್ಳ, ನಾಗಲೇಗಾಂವದ ಮಹಾದೇವಗುಡ್ಡದ ಹಳ್ಳದಿಂದ ನಾಗಲೇಗಾಂವ ಗ್ರಾಮಕ್ಕೆ 3 ಕಿಮೀ ಹಳ್ಳ, ಚಿಂಚೋಳಿ ಬಿ- ಚಿಂಚೋಳಿ ಕೆ 2 ಕಿಮೀ ಹಳ್ಳ, ಎಲನಾವದಗಿ ಹಳ್ಳ ಹಾಗೂ ಕವಲಗಾ ಗ್ರಾಮದ ಹಳ್ಳಕ್ಕೆ ₹5 ಕೋಟಿ ವೆಚ್ಚದಲ್ಲಿ ಶಿರಪುರ ಮಾದರಿ ಜಲಸಂಗ್ರಹ ಕಾಮಗಾರಿ ಕಳೆದ ಬೇಸಿಗೆಯಲ್ಲಿ ಕೈಗೊಳ್ಳಲಾಗಿತ್ತು.

ಮೇ ತಿಂಗಳ ಕೊನೆ ವಾರದಲ್ಲಿ ಆರಂಭವಾದ ಸತತ ಮಳೆಯಿಂದ ಹೊಲಗದ್ದೆ, ನಾಲೆಗಳಿಂದ ಮಳೆ ನೀರು ಹರಿಯಿತು. ಜೂನ್‌ ಮೊದಲ ವಾರದ ಅಲ್ಪ ಮಳೆಗೂ ಶಿರಪುರ ಮಾದರಿ ಚೆಕ್‌ ಡ್ಯಾಂ ನೀರು ತುಂಬಿಕೊಂಡು ನಳನಳಸುತ್ತಿವೆ. ಹೊಸದಾಗಿ ನಿರ್ಮಿಸಲಾದ ಶಿರಪುರ ಮಾದರಿ ಜಲಸಂಗ್ರಹ ಕಂಡು ಸುತ್ತಲಿನ ರೈತರಲ್ಲಿ ಸಂತಸ ಮೂಡಿಸಿದೆ. ಮುಂಬರುವ ದಿನಗಳಲ್ಲಿ ತಮ್ಮ ಹೊಲಗದ್ದೆಗಳಲ್ಲಿನ ಬಾವಿ, ಕೊಳವೆಬಾವಿಗಳಿಗೂ ಅಂತರ್ಜಲ ಮಟ್ಟ ಜಾಸ್ತಿಯಾಗಲಿದೆ ಎನ್ನುವ ಭರವಸೆ ರೈತರಲ್ಲಿ ಮೂಡಿದೆ.

ADVERTISEMENT

ಶಿರಪುರ ಮಾದರಿ ಏನಿದು?: ನೆರೆಯ ಮಹಾರಾಷ್ಟ್ರದ ಧೂಳೆ ಜಿಲ್ಲೆಯ ಶಿರಪುರ ಗ್ರಾಮದ ಸುತ್ತಲೂ ಹಳ್ಳಗಳಲ್ಲಿ ಅಲ್ಲಿಯ ಸ್ಥಳಿಯ ಸಂಸ್ಥೆ, ರೈತರು ಹಾಗೂ ಸರ್ಕಾರದ ನೆರವಿನೊಂದಿಗೆ ಮಳೆನೀರು ಹಿಡಿದಿಡಲು ಹಳ್ಳಗಳಿಗೆ ಚೆಕ್‌ ಡ್ಯಾಂ ನಿರ್ಮಿಸಿದ್ದಾರೆ. ಅದರ ಜತೆಗೆ ಹಳ್ಳಗಳಿಗೆ ಕೇವಲ ಚೆಕ್‌ ಡ್ಯಾಂ ನಿರ್ಮಿಸದೇ ಹಳ್ಳದ ಹರವು ವಿಸ್ತರಿಸಿ ಹಳ್ಳದ ಅಂಗಳದಲ್ಲಿ ನೀರು ನಿಲ್ಲುವಂತೆ ಮಾಡುವುದಾಗಿದೆ. ಶಾಸಕ ಬಿ.ಆರ್.ಪಾಟೀಲ ಅವರು ಈ ಶಿರಪುರ ಮಾದರಿ ಜಲಸಂಗ್ರಹದ ಸಮೀಕ್ಷೆ ನಡೆಸಿ, ಅಧಿಕಾರಿಗಳು, ಜಲತಜ್ಞರ ತಂಡದೊಂದಿಗೆ ಚರ್ಚೆ ನಡೆಸಿ 2017ರಲ್ಲಿ ಅಂದು ರಾಜ್ಯ ಸರ್ಕಾರಕ್ಕೆ ಶಿರಪುರ ಮಾದರಿ ಜಲಸಂಗ್ರಹದ ಪ್ರಸ್ತಾವನೆ ಸಲ್ಲಿಸಿದ್ದರು.

ಬಿ.ಆರ್.ಪಾಟೀಲರ ಸತತ ಪ್ರಯತ್ನದ ಫಲವಾಗಿ 2018ರಲ್ಲಿ ಶಿರಪುರ ಮಾದರಿ ಕಾಮಗಾರಿಗೆ ಸರ್ಕಾರದಿಂದ ಒಪ್ಪಿಗೆ ದೊರೆಯಿತು. ಅಂದು ಪ್ರಯೋಗಾರ್ಥವಾಗಿ ಆಳಂದ ತಾಲ್ಲೂಕಿನ ಸರಸಂಬಾ, ಸಾವಳೇಶ್ವರ, ರುದ್ರವಾಡಿ, ಧುತ್ತರಗಾಂವ, ನಾಗಲೇಗಾಂವ, ಕಿಣಿಸುಲ್ತಾನ, ಏಲೆ ನಾವದಗಿ, ಮಾದನ ಹಿಪ್ಪರಗಿ, ಮದಗುಣಕಿ, ಚಲಗೇರಾ ಗ್ರಾಮದಲ್ಲಿ ಯಶಸ್ವಿಯಾಗಿ ಶಿರಪುರ ಮಾದರಿ ಜಲಸಂಗ್ರಹ ಕಾಮಗಾರಿ ಕೈಗೊಳ್ಳಲಾಯಿತು. ಒಟ್ಟು 52 ಕಿ.ಮೀ. ಉದ್ದ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಅಂದಾಜು ₹20.50 ಕೋಟಿ ವೆಚ್ಚದಲ್ಲಿ ಹಳ್ಳದ ಹರವು ವಿಸ್ತರಿಸಿ, ಮಧ್ಯದಲ್ಲಿನ ಹೂಳು ಎತ್ತಲಾಯಿತು.

ಶಾಸಕ ಬಿ.ಆರ್.ಪಾಟೀಲ ಅವರ ದೂರದೃಷ್ಟಿಯಿಂದ ರಾಜ್ಯದಲ್ಲಿಯೇ ಮೊದಲ ಬಾರಿಗೆ ಆರಂಭವಾದ ಶಿರಪುರ ಮಾದರಿ ಜಲಸಂಗ್ರಹ ಕಾಮಗಾರಿಯಡಿ ಕೈಗೊಂಡ ಚೆಕ್‌ ಡ್ಯಾಂಗಳಲ್ಲಿ ಸಂಪೂರ್ಣ ನೀರು ಭರ್ತಿಯಾಗಿದ್ದು, ಇದು ರೈತರಿಗೆ ಅನುಕೂಲವಾಯಿತು. ಸುತ್ತಲಿನ ರೈತರೂ ತರಕಾರಿ, ಹೈನುಗಾರಿಕೆ ಕೈಗೊಳ್ಳಲು ಉತ್ತೇಜನ ದೊರೆಯಿತು. ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ನನೆಗುದಿಗೆ ಬಿದ್ದ ಶಿರಪುರ ಮಾದರಿ ಜಲಸಂಗ್ರಹ ಕಾರ್ಯಕ್ಕೆ ವಿಸ್ತರಿಸಲಾಗಿದೆ.

ಆಳಂದ ತಾಲ್ಲೂಕಿನಲ್ಲಿ ಈಗ ಅಂದಾಜು 72 ಕಿಮೀ ವ್ಯಾಪ್ತಿಯಲ್ಲಿ ಶಿರಪುರ ಮಾದರಿ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಆಗಸ್ಟ್‌ ತಿಂಗಳಲ್ಲಿ ಹಳ್ಳಗಳು ಭರ್ತಿಯಾದರೆ ಚಳಿಗಾಲದವರೆಗೂ ರೈತರ ಉದ್ದು, ಹೆಸರು, ತೊಗರಿ, ಕಬ್ಬು, ತೋಟಗಾರಿಕೆ ಹಾಗೂ ತರಕಾರಿ ಬೆಳೆಗೂ ಅನುಕೂಲವಾಗಲಿದೆ’ ಎಂದು ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಶರಣಬಸಪ್ಪ ವಾಗೆ ‘ಪ್ರಜಾವಾಣಿ’ಗೆ ತಿಳಿಸಿದರು.

ಆಳಂದ ತಾಲ್ಲೂಕಿನ ಚಿಂಚೋಳಿ ಗ್ರಾಮದಲ್ಲಿ ನಿರ್ಮಿಸಲಾದ ಶಿರಪುರ ಮಾದರಿ ಚೆಕ್‌ ಡ್ಯಾಂಗಳಲ್ಲಿ ನೀರು ಸಂಗ್ರಹಗೊಂಡಿರುವುದನ್ನು ಶಾಸಕ ಬಿ.ಆರ್.ಪಾಟೀಲ ವೀಕ್ಷಿಸಿದರು 
ಶಿರಪುರ ಮಾದರಿ ಜಲಸಂಗ್ರಹ ತಾಲ್ಲೂಕಿನಲ್ಲಿ ಯಶಸ್ವಿಯಾಗಿದೆ. ಮುಂಬರುವ ದಿನಗಳಲ್ಲಿ ಮಟಕಿ ಹೆಬಳಿ ತೀರ್ಥ ಗೋಳಾ ಹಳ್ಳಿ ಸಲಗರ ಬಸವಣ್ಣ ಸಂಗೋಳಗಿ ಮತ್ತಿತರ ಗ್ರಾಮದ ಹಳ್ಳಕ್ಕೂ ಕಾಮಗಾರಿ ವಿಸ್ತರಿಸಲಾಗುವುದು.
– ಬಿ.ಆರ್.ಪಾಟೀಲ, ಶಾಸಕ
ಚಿಂಚೋಳಿ ಗ್ರಾಮದ ಸುತ್ತಲಿನ ಹಳ್ಳವು ಸಂಪೂರ್ಣ ಭರ್ತಿಯಾಗಿದ್ದು ಇದರಂದ ಅಂತರ್ಜಲ ಹೆಚ್ಚಳವಾದರೆ ಈ ಭಾಗದಲ್ಲಿಯ ರೈತರೂ ಸಹ ತೋಟಗಾರಿಕೆ ತರಕಾರಿ ಬೆಳೆ ಬೆಳೆಯಲು ಅನುಕೂಲವಾಗಲಿದೆ.
– ಕಾಶಿನಾಥ ಫರತಾಪುರೆ, ರೈತ ಚಿಂಚೋಳಿ
ಶಿರಪುರ ಮಾದರಿ ಜಲಸಂಗ್ರಹದಿಂದ ನಾಗಲೇಗಾಂವ ಗ್ರಾಮದಲ್ಲಿ ರೈತರ ಹೈನುಗಾರಿಕೆ ಹೆಚ್ಚಿದೆ. ಮೊದಲು ನೀರಿನ ಕೊರತೆ ಕಾಡುತ್ತಿತು. ಈಗ ನಮ್ಮ ಬಾವಿ ಕೊಳವೆ ಬಾವಿಗೆ ನೀರು ಲಭ್ಯವಾಗಿದೆ. ನೀರಿನ ಸಮಸ್ಯೆ ಕಾಡುತ್ತಿಲ್ಲ.
– ಸಿದ್ದರಾಮ ಭಲ್ಕೆ, ರೈತ ನಾಗಲೇಗಾಂವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.