ADVERTISEMENT

ತುಳಜಾಪುರ ಮಾದರಿ ದ್ವಾರಬಾಗಿಲು

ಶಿವಸೇನಾ ಸಮಿತಿ ಕಾರ್ಯಕ್ಕೆ ಸಾರ್ವಜನಿಕ ಮೆಚ್ಚುಗೆ

ಅವಿನಾಶ ಬೋರಂಚಿ
Published 27 ಸೆಪ್ಟೆಂಬರ್ 2025, 4:50 IST
Last Updated 27 ಸೆಪ್ಟೆಂಬರ್ 2025, 4:50 IST
ಸೇಡಂನಲ್ಲಿ ಪ್ರತಿಷ್ಠಾಪಿಸಲಾದ ತುಳಜಾಪುರ ಮಾದರಿಯ ಸ್ವಾಗತ ಕಮಾನು
ಸೇಡಂನಲ್ಲಿ ಪ್ರತಿಷ್ಠಾಪಿಸಲಾದ ತುಳಜಾಪುರ ಮಾದರಿಯ ಸ್ವಾಗತ ಕಮಾನು   

ಸೇಡಂ: ಪಟ್ಟಣದ ಚೌರಸ್ತಾ ಬಳಿ ಶಿವಸೇನಾ ದಸರಾ ಉತ್ಸವ ಸಮಿತಿಯು ಮಹಾರಾಷ್ಟ್ರದ ತುಳಜಾಪುರದ ಅಂಬಾ ಭವಾನಿ ದೇವಸ್ಥಾನ ದ್ವಾರಬಾಗಿಲಿನ ಮಾದರಿಯಲ್ಲಿಯೇ ಪ್ರತಿಷ್ಠಾಪಿಸಿರುವ ದ್ವಾರಬಾಗಿಲು ಜನರ ಆಕರ್ಷಣೀಯ ಕೇಂದ್ರವಾಗಿದೆ.

ಶಿವಸೇನಾ ದಸರಾ ಉತ್ಸವ ಸಮಿತಿ 30 ವರ್ಷಗಳಿಂದ ದಸರಾ ಉತ್ಸವ ಆಚರಿಸುತ್ತಿದೆ. ಮೊದಲ ಬಾರಿ ಈ ರೀತಿಯ ವಿಭಿನ್ನವಾಗಿ ಸ್ವಾಗತ ಕಮಾನು ಅಳವಡಿಸಲಾಗಿದೆ. ಕಟ್ಟಿಗೆಗಳನ್ನು ನೆಲಕ್ಕೆ ಹೂಳಿದ್ದಾರೆ. ಜೊತೆಗೆ ಅದರ ಮೇಲೆ ಸುತ್ತಲೂ ತುಳಜಾಪುರ ದ್ವಾರಬಾಗಿಲಿನ ಮಾದರಿಯಲ್ಲಿಯೇ ಬಟ್ಟೆ ಮುದ್ರಣ ಮಾಡಿ, ಅದನ್ನು ಕಟ್ಟಿಗೆಗಳ ಸುತ್ತಲೂ ಕಟ್ಟಿದ್ದು, ಅದು ಸ್ವಾಗತ ಕಮಾನಿನ ಆಕೃತಿಯ ಸ್ವರೂಪದಲ್ಲಿ ಮಾಡಲಾಗಿದೆ. ಸುತ್ತಲೂ ವಿದ್ಯುತ್ ದೀಪಾಂಲಕಾರ ಹಾಕಲಾಗಿದ್ದು, ರಾತ್ರಿಯಿಡಿ ವಿದ್ಯುತ್ ದೀಪಗಳು ಝಗಮಘಿಸುತ್ತಿವೆ. ಕಮಾನಿನ ಮೇಲ್ಭಾಗದಲ್ಲಿ ಮೂರು ಕಳಶಗಳನ್ನು ಇಡಲಾಗಿದ್ದು, ಅವುಗಳಿಗೆ ವಿದ್ಯುತ್ ದೀಪ ಬೆಳಗಿಸಲಾಗಿದೆ.

‘ಸ್ವಾಗತ ಕಮಾನು ಅಳವಡಿಸಿಲು ಸುಮಾರು ನಾಲ್ಕೈದು ದಿನಗಳು ತೆಗೆದುಕೊಂಡಿದ್ದು, ಕಲ್ಕತ್ತಾದ ಕಾರ್ಮಿಕರು ಕೆಲಸ ಮಾಡಿದ್ದಾರೆ. ಬಸವರಾಜ ಗುರಮಠಕಲ್ ಎಂಬುವವರು ಈ ಸ್ವಾಗತ ಕಮಾನು ಅಳವಡಿಕೆಯ ವಿನೂತನ ಪ್ರಯೋಗ ಮಾಡಿದ್ದಾರೆ’ ಎಂದು ಪುರಸಭೆ ಸದಸ್ಯ ಸಂತೋಷಕುಮಾರ ತಳವಾರ ತಿಳಿಸಿದರು.

ADVERTISEMENT

ಅಲ್ಲದೆ ಚೌರಸ್ತಾದಿಂದ, ದೇವಿ ಪ್ರತಿಷ್ಠಾಪನೆ ಸ್ಥಳದವರೆಗೆ 250 ಮೀಟರ ದೂರದವರೆಗೆ ಕೇಸರಿ, ಹಳದಿ ಮತ್ತು ಬಿಳಿ ಬಟ್ಟೆ ಕಟ್ಟಿ ಪ್ರವೇಶ ಆಕರ್ಷಣೀಯವಾಗಿ ಮಾಡಲಾಗಿದೆ. ತುಳಜಾಪುರದ ದ್ವಾರಬಾಗಿಲಿಗೆ ಪಟ್ಟಣ ಸೇರಿದಂತೆ ತಾಲ್ಲೂಕಿನ ಜನರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಜನರ ಆಕರ್ಷಣೀಯ ಕೇಂದ್ರವಾದ ಚೌರಸ್ಥಾ ಸ್ವಾಗತ ಕಮಾನಿನ ಬಳಿ ಸೆಲ್ಫಿಯತ್ತ ಜನರ ಚಿತ್ತ ರಾತ್ರಿಯಿಡಿ ಕಂಗೋಳಿಸುವ ವಿದ್ಯುತ್ ದೀಪಾಲಂಕಾರ

ಶಿವಸೇನಾ: 31ನೇ ದಸರಾ ಉತ್ಸವ ಇಂದಿನಿಂದ ಸೇಡಂ ಪಟ್ಟಣದ ಚೌರಸ್ತಾ ಶಿವಸೇನಾ ಸಮಿತಿ ವತಿಯಿಂದ ಬಳಿ 31ನೇ ದಸರಾ ಉತ್ಸವ ಸೆ.27 ರಿಂದ ಅ.02 ರವರೆಗೆ ನಡೆಯಲಿದೆ ಎಂದು ಶಿವಕುಮಾರ ಜೀವಣಗಿ ತಿಳಿಸಿದ್ದಾರೆ. ಪಟ್ಟಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸೆ.27 ರಂದು ಸಾಯಂಕಾಲ 7.30ಕ್ಕೆ ದೇವಿಯ ಘಟಸ್ಥಾಪನೆ ಜಗದೇವಿ ತಾಯಿ ಸಾನ್ನಿಧ್ಯದೊಂದಿಗೆ ನೆರವೇರಲಿದೆ. ನಿತ್ಯ ಸಂಜೆ ಕಾರ್ಯಕ್ರಮಗಳು ಜರುಗಲಿದ್ದು ಸೆ.28 ರಂದು ನಗರದ ಮಹಿಳೆಯರಿಂದ ಗರ್ಭಾ ನೃತ್ಯ ಪ್ರದರ್ಶನಗೊಳ್ಳಲಿದೆ. ಸೆ.29 ರಂದು ನಗೆ ಹಬ್ಬ ಮತ್ತು ಮ್ಯಾಜಿಕ್ ಗೊಂಬೆ ಸಾಂಸ್ಕೃತಿಕ ಕಾರ್ಯಕ್ರಮ ಸೆ.30 ರಂದು ವಿವಿಧ ಕಲಾ ತಂಡಗಳಿಂದ ಸಾಮೂಹಿಕ ಮತ್ತು ಏಕ ವ್ಯಕ್ತಿಗಳಿಂದ ಡ್ಯಾನ್ಸ್ ಸ್ಪರ್ಧೆಗಳು ನಡೆಯಲಿದೆ. ಸಾಮೂಹಿಕ ನೃತ್ಯಕ್ಕೆ ಪ್ರಥಮ ರೂ.11 ಸಾವಿರ ದ್ವಿತೀಯ 7 ಸಾವಿರ ಮತ್ತು ತೃತೀಯ ರೂ.5 ಸಾವಿರ ಹಾಗೂ ಏಕವ್ಯಕ್ತಿ ನೃತ್ಯಕ್ಕೆ ಪ್ರಥಮ ರೂ.5 ಸಾವಿರ ದ್ವಿತೀಯ 2500 ನಗದು ಬಹುಮಾನ ನೀಡಲಾಗುತ್ತದೆ.  ಅ.01 ರಂದು ಮಧ್ಯಾಹ್ನ ಚಿತ್ರಕಲೆ ರಂಗೋಲಿ ಸ್ಪರ್ಧೆಗಳು ಸಂಜೆ  ಸಚಿವ ಡಾ.ಶರಣಪ್ರಕಾಶ ಪಾಟೀಲರಿಂದ ಬಹುಮಾನ ವಿತರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧಕರಿಗೆ ಸತ್ಕಾರ ನಡೆಯಲಿದೆ. ಅ.02 ರಂದು ಪಟ್ಟಣದಲ್ಲಿ ಕೋಲಾಟದೊಂದಿಗೆ ದೇವಿಯ ಮೆರವಣಿಗೆ ನಡೆಯಲಿದ್ದು ಸಮಾರೋಪಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಶಿವಸೇನಾ ದಸರಾ ಉತ್ಸವ ಸಮಿತಿ ಗೌರವ ಅಧ್ಯಕ್ಷ ಮಲ್ಲಿಕಾರ್ಜುನ ಭೋವಿ ರಾಜು ಬಾಗೋಡಿ ಸಂತೋಷಕುಮಾರ ತಳವಾರ ಲಕ್ಷ್ಮಣ ಭೋವಿ ರಾಜಕುಮಾರ ಚನ್ನೀರ ಭೀಮಾಶಂಕರ ಕೊಳ್ಳಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.