ADVERTISEMENT

ಸೇಡಂ | ಹವ್ಯಾಸಿ ಕಲಾವಿದನಿಗೆ ಒಲಿದ ನಾಟಕ ಅಕಾಡೆಮಿ ಗರಿ

ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿಗೆ ಶಿವಯ್ಯಸ್ವಾಮಿ ಬಿಬ್ಬಳ್ಳಿ ಆಯ್ಕೆ

ಅವಿನಾಶ ಬೋರಂಚಿ
Published 25 ಜುಲೈ 2025, 6:00 IST
Last Updated 25 ಜುಲೈ 2025, 6:00 IST
ಸೇಡಂನ ಸದ್ಭಾವನಾ ಮೂರ್ತಿ ಸಪ್ಪಣ್ಣಾರ್ಯ ಶಿವಯೋಗಿಗ ನಾಟಕದಲ್ಲಿ ಸಪ್ಪಣ್ಣಾರ್ಯ ಶಿವಯೋಗಿ ಪಾತ್ರದಲ್ಲಿ ಶಿವಯ್ಯಸ್ವಾಮಿ ಬಿಬ್ಬಳ್ಳಿ(ಮಧ್ಯದಲ್ಲಿರುವವರು)
ಸೇಡಂನ ಸದ್ಭಾವನಾ ಮೂರ್ತಿ ಸಪ್ಪಣ್ಣಾರ್ಯ ಶಿವಯೋಗಿಗ ನಾಟಕದಲ್ಲಿ ಸಪ್ಪಣ್ಣಾರ್ಯ ಶಿವಯೋಗಿ ಪಾತ್ರದಲ್ಲಿ ಶಿವಯ್ಯಸ್ವಾಮಿ ಬಿಬ್ಬಳ್ಳಿ(ಮಧ್ಯದಲ್ಲಿರುವವರು)   

ಸೇಡಂ: ಹವ್ಯಾಸಕ್ಕೆಂದು ನಾಟಕಗಳನ್ನು ನೋಡುತ್ತಾ ಅವುಗಳಲ್ಲಿ ಅಭಿನಯಿಸುತ್ತಾ ಬಂದಿರುವ ಸೇಡಂನ ರಂಗಾಸಕ್ತ ಶಿವಯ್ಯಸ್ವಾಮಿ ಬಿಬ್ಬಳ್ಳಿ ಅವರಿಗೆ ಈ ಬಾರಿ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಯ ಗರಿ ಒಲಿದಿದೆ.

ತಾಲ್ಲೂಕಿನ ಬಿಬ್ಬಳ್ಳಿ ಗ್ರಾಮದ ಶಿವಯ್ಯಸ್ವಾಮಿ ಅವರು ಜನಿಸಿದ್ದು 15ನೇ ಏಪ್ರಿಲ್ 1954ರಲ್ಲಿ. ತಂದೆ ಸಿದ್ದಯ್ಯಸ್ವಾಮಿ, ತಾಯಿ ರತ್ನಮ್ಮ. ಬಾಲ್ಯದಿಂದಲೇ ನಾಟಕಗಳ ಮೇಲೆ ಎಲ್ಲಿಲ್ಲದ ಆಸಕ್ತಿ ಹೊಂದಿರುವ ಶಿವಯ್ಯಸ್ವಾಮಿ ಅವರು, ಊರಿನಲ್ಲಿ ನಡೆಯುವ ದೊಡ್ಡಾಟಗಳನ್ನು ನೋಡುತ್ತಲೇ ರಂಗ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡವರು.

ಗ್ರಾಮದ ಹಾರ್ಮೋನಿಯಮ್ ಕಲಾವಿದ ಬುಗ್ಗಪ್ಪ ಎನ್ನುವವರಿಗೆ ವೇದಿಕೆ ಕಲ್ಪಿಸಿ, ಅವರನ್ನು ಹಾರ್ಮೋನಿಯಮ್ ಮಾಸ್ತರ್ ಮಾಡಬೇಕೆಂಬ ಸದಾಶಯದ ಛಲದಿಂದ ಬಣ್ಣ ಬಳಿದು ರಂಗ ಕ್ಷೇತ್ರಕ್ಕೆ ಧುಮುಕಿದವರು. ಗ್ರಾಮಸ್ಥರೇ ಕೂಡಿಕೊಂಡು 1970ರಲ್ಲಿ ‘ಮಲಮಗ’ ಎಂಬ ಸಾಮಾಜಿಕ ನಾಟಕದಲ್ಲಿ ಮೊದಲ ಬಾರಿಗೆ ನಟಿಸಿ, ಮೂರು ದಿನ ಉತ್ತಮ ನಟಿಸಿದವರು. ಅಂದಿನಿಂದ ಆರಂಭಗೊಂಡ ಇವರ ರಂಗಾಸಕ್ತಿಯ ಕ್ಷೇತ್ರ ಇವರ ಪ್ರತಿಭೆಗೆ ವೇದಿಕೆ ಕಲ್ಪಿಸಿದವು.

ADVERTISEMENT

14 ವರ್ಷದಿಂದ 70ರ ವಯಸ್ಸಿನಲ್ಲಿಯೂ ಸಹ ನಾಟಕವೆಂದರೇ ಯುವ ನಟನಂತೆ ಹುಮ್ಮಸ್ಸಿನಿಂದ ಪುಟಿದೇಳುತ್ತಾರೆ. ಬಾಣಾಸುರ, ಅಣ್ಣ-ತಂಗಿ, ದೀಪಾವಳಿ, ಗರತಿಗೆಲ್ಲಿದೆ ಗೌರವ, ಕುಂಕುಮ ಭಾಗ್ಯ, ಗೆಜ್ಜೆ ಪೂಜೆ, ಕೆಟ್ಟಮೇಲೆ ಬುದ್ಧಿ ಬಂತು, ಕುಂಕುಮ ಭಾಗ್ಯ, ಬಾಳೊಂದು ಭಾವಗೀತೆ, ರಾಜಕೀಯ ರಾಕ್ಷಸರು, ಶೀಲ ಸುಡಲಿಲ್ಲ ಸುಖ ಸಿಗಲಿಲ್ಲ, ಸೊಸೆ ತಂದ ಸೌಭಾಗ್ಯ, ನಮ್ಮೂರ ನ್ಯಾಯ ದೇವರು ನಟಿಸಿದ್ದಾರೆ. ಸದ್ಭಾವನಾ ಮೂರ್ತಿ ಸಪ್ಪಣ್ಣಾರ್ಯ ಶಿವಯೋಗಿ, ಶ್ರೀ ಗವಿಸಿದ್ಧಲಿಂಗೇಶ್ವರ ಮಹಾತ್ಮ, ಶ್ರೀ ಶಿವಶಂಕರೇಶ್ವರ ಮಹಾತ್ಮ, ಹೀಗೆ ಅನೇಕ ನಾಟಕಗಳಲ್ಲಿ ನಟಿಸಿ, ನಿರ್ದೇಶಿಸಿದ್ದಾರೆ.

ಸಾಮಾಜಿಕ ಸೇವಕ-ಸಂಘಟಕ: ಮಠ-ಮಂದಿರ ಸೇರಿದಂತೆ ಧಾರ್ಮಿಕ ಧಾರ್ಮಿಕ ಕ್ಷೇತ್ರದಲ್ಲಿ ಅಗಾಧ ಆಸಕ್ತಿ ಹೊಂದಿರುವ ಶಿವಯ್ಯಸ್ವಾಮಿ ಅವರು, ಸೇಡಂನಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣ ಹಾಗೂ ವೀರಶೈವ ಕಲ್ಯಾಣ ಮಂಟಪವನ್ನು ಸಂಘಟನೆಯಿಂದ ನಿರ್ಮಿಸಿದ್ದಾರೆ.

ಸಂದ ಪ್ರಶಸ್ತಿಗಳು: ಇವರ ಕಲಾ ಪ್ರತಿಭೆಗೆ ರಾಜ್ಯಮಟ್ಟದ ಎಸ್.ಬಿ. ಜಂಗಮಶೆಟ್ಟಿ ರಂಗ ಪ್ರಶಸ್ತಿ, ಕಲಾಭೂಷಣ, ರಂಗ ಗೌರವ, ಹಾರಕೂಡ ಮಠದ ರಂಗ ಸೇವಾ, ಅಮ್ಮ ಗೌರವ ಪುರಸ್ಕಾರ, ಕವಿರಾಜಮಾರ್ಗ, ಗಡಿನಾಡ ರಂಗ, ವಿಶ್ವರಂಗ ಗೌರವ, ರಂಗಚೇತನ ಪ್ರಶಸ್ತಿ, ಕಲಾ ಸೇವಾ ಪ್ರಶಸ್ತಿ, ಹಾಲಪ್ಪಯ್ಯ ಶ್ರೀ ಕಲಾ ಪ್ರಶಸ್ತಿ, ಸೇರಿದಂತೆ ಹತ್ತಾರು ಪ್ರಶಸ್ತಿಗಳು ಸಂದಿವೆ.

ಶಿವಯ್ಯಸ್ವಾಮಿ ಬಿಬ್ಬಳ್ಳಿ
ನಾಟಕಗಳಲ್ಲಿ ಸಾಮಾಜಿಕ ಜಾಗೃತಿ ಸಂದೇಶದ ಸಾರಾಂಶವನ್ನು ಪ್ರೇಕ್ಷಕರಿಗೆ ಮನಮುಟ್ಟುವಂತೆ ಅಭಿನಯಸುವುದೇ ಕಲಾವಿದನ ಜವಾಬ್ದಾರಿ. ಅದನ್ನು ಪ್ರಾಮಾಣಿಕತೆಯಿಂದ ನಿಭಾಯಿಸಿರುವ ತೃಪ್ತಿಯಿದೆ
ಶಿವಯ್ಯಸ್ವಾಮಿ ಬಿಬ್ಬಳ್ಳಿ ಹವ್ಯಾಸಿ ರಂಗಕಲಾವಿದ

ಸೇಡಂಗೆ 2ನೇ ನಾಟಕ ಅಕಾಡೆಮಿ ವಾರ್ಷಿಕ ಪ್ರಶಸ್ತಿ!:

ಸೇಡಂನ ನಿವಾಸಿ ಹಾಗೂ ರಂಗಾಸಕ್ತ ಸೇಡಂ ಶಿವಯ್ಯಸ್ವಾಮಿ ಬಿಬ್ಬಳ್ಳಿ ಅವರಿಗೆ 2025ನೇ ಸಾಲಿನ ನಾಟಕ ಅಕಾಡೆಮಿ ಪ್ರಶಸ್ತಿಯ ವಾರ್ಷಿಕ ಪ್ರಶಸ್ತಿಯ ಗರಿ ಒಲಿದಿದೆ. ಗುರುವಾರ ಕರ್ನಾಟಕ ನಾಟಕ ಅಕಾಡೆಮಿ ನಾಟಕ ಅಕಾಡೆಮಿಯೂ ಪ್ರಶಸ್ತಿ ಪುರಸ್ಕೃತರ ಪಟ್ಟಿ ಘೋಷಿಸಿದ್ದು ಜಿಲ್ಲೆಯಿಂದ ಶಿವಯ್ಯಸ್ವಾಮಿ ಬಿಬ್ಬಳ್ಳಿ ಅವರ ಹೆಸರನ್ನು ಆಯ್ಕೆಮಾಡಿದೆ. ಈ ಹಿಂದೆ ಸೇಡಂನ ನಿವಾಸಿ ಆಗೂ ಕಲಬುರ್ಗಿ ರಂಗಾಯಣ ಮಾಜಿ ನಿರ್ದೇಶಕ ಪ್ರಭಾಕರ ಜೋಶಿಯವರಿಗೆ 2018ರಲ್ಲಿ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಲಭಿಸಿತ್ತು. 7 ವರ್ಷಗಳ ನಂತರ ಪುನಃ ಸೇಡಂಗೆ ಮತ್ತೊಂದು ನಾಟಕ ಪ್ರಶಸ್ತಿಯ ಅಕಾಡೆಮಿಯ ಗರಿ ಒಲಿದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.