ADVERTISEMENT

ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ: ವ್ಯಕ್ತಿಗೆ ಗಾಯ

ಸಿಲಿಂಡರ್‌ ಸ್ಫೋಟ; ಇಡೀ ಮನೆಗೆ ಆವರಿಸಿದ ಬೆಂಕಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2022, 5:38 IST
Last Updated 8 ನವೆಂಬರ್ 2022, 5:38 IST
ಕಮಲಾಪುರ ಸಮೀಪದ ಹರಸೂರ ಗ್ರಾಮದಲ್ಲಿ ಸೋಮವಾರ ಮನೆ ಹಾಗೂ ಅಂಗಡಿಗೆ ಹತ್ತಿಕೊಂಡಿದ್ದ ಬೆಂಕಿಯನ್ನು ಅಗ್ನಿಶಾಮಕ ದಳದವರು ನಂದಿಸಿದರು
ಕಮಲಾಪುರ ಸಮೀಪದ ಹರಸೂರ ಗ್ರಾಮದಲ್ಲಿ ಸೋಮವಾರ ಮನೆ ಹಾಗೂ ಅಂಗಡಿಗೆ ಹತ್ತಿಕೊಂಡಿದ್ದ ಬೆಂಕಿಯನ್ನು ಅಗ್ನಿಶಾಮಕ ದಳದವರು ನಂದಿಸಿದರು   

ಕಮಲಾಪುರ: ಕಲಬುರಗಿ ತಾಲ್ಲೂಕಿನ ಹರಸೂರ ಗ್ರಾಮದಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಹತ್ತಿಕೊಂಡ ಬೆಂಕಿಗೆ ಮನೆ, ಕಿರಾಣಿ ಅಂಗಡಿ ಹಾಗೂ ಪಂಚರ್‌ ಅಂಗಡಿ ಸುಟ್ಟು ಕರಕಲಾಗಿವೆ. ಸುಮಾರು ₹8 ಲಕ್ಷ ಮೌಲ್ಯದ ವಸ್ತುಗಳು ಹಾನಿಯಾಗಿದ್ದು, ಮಾಲೀಕ ಶಿವಪ್ಪ ಬಂಡಪ್ಪ ತಳವಾರ ಗಾಯಗೊಂಡಿದ್ದಾರೆ.

ಹರಸೂರ ಗ್ರಾಮದ ಶಿವಪ್ಪ ಬಂಡಪ್ಪ ತಳವಾರ ಅವರಿಗೆ ಒಂದೇ ಕೋಣೆಯ ಮನೆಯಿದ್ದು ಅದೇ ಮನೆಯಲ್ಲಿಯೇ ಕಿರಾಣಿ ಹಾಗೂ ಪಂಚರ್‌ ಅಂಗಡಿ ನಡೆಸುತ್ತಿದ್ದರು. ಸೋಮವಾರ ಮಧ್ಯಾಹ್ನ ಲಕ್ಷ್ಮಿ ಪೂಜೆ ನೆರವೇರಿಸಿದ್ದಾರೆ. ಅಷ್ಟರಲ್ಲಾಗಲೆ ಫ್ರಿಡ್ಜ್‌ ಬಳಿ ಶಾರ್ಟ್‌ ಸರ್ಕ್ಯೂಟ್‌ ಸಂಭವಿಸಿದೆ. ಫ್ರಿಡ್ಜ್‌ ಪಕ್ಕದಲ್ಲಿ ಹತ್ತಿಕೊಂಡ ಬೆಂಕಿ ಗ್ಯಾಸ್‌ ಸಿಲಿಂಡರ್‌ಗೆ ತಾಕಿ ಸಿಲಿಂಡರ್‌ ಸ್ಫೋಟಗೊಂಡು ಇಡೀ ಮನೆಗೆ ಆವರಿಸಿದೆ.

ಪಂಚರ್‌ ಅಂಗಡಿ ಇರುವುದರಿಂದ ಮನೆಯಲ್ಲೆಲ್ಲ ಟೈಯರ್‌ಗಳಿದ್ದವು, ಅವುಗಳಿಗೂ ಬೆಂಕಿ ಹತ್ತಿಕೊಂಡು ಧಗಧಗನೆ ಉರಿಯಲಾರಂಭಿಸಿದೆ. ಬೆಂಕಿ ನಂದಿಸಲು ಪ್ರಯತ್ನಿಸಿದ ಶಿವಪ್ಪ ಅವರಿಗೆ ಸುಟ್ಟಗಾಯಗಳಾಗಿವೆ. ನಂತರ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಶಿವಪ್ಪನನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ADVERTISEMENT

‘ಶಿವಪ್ಪನ ಬದುಕು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲ. ಕೂಡಲೇ ಶಾಸಕರು ಶಿವಪ್ಪನ ಕುಟುಂಬಕ್ಕೆ ಸಹಾಯ ಮಾಡಬೇಕು ಹಾಗೂ ಸರ್ಕಾರದಿಂದ ಪರಿಹಾರ ಒದಗಿಸಬೇಕು’ ಎಂದು ಗ್ರಾಮಸ್ಥರಾದ ಹಣಮಂತ ಹರಸೂರ, ಕೆ.ಸಿ.ಪಾಟೀಲ, ಆನಂದ ಕಣಸೂರ, ಸಾಯಿಬಣ್ಣ ಜಮಾದಾರ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.