ADVERTISEMENT

ಆಹಾರ ಪರೀಕ್ಷೆಗೆ ಸೌಕರ್ಯ ಕೊರತೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2019, 9:01 IST
Last Updated 21 ಏಪ್ರಿಲ್ 2019, 9:01 IST

ಕಲ್ಬುರ್ಗಿ: ಕಲಬೆರಕೆ, ವಿಷಕಾರಿ ಆಹಾರ ಅಥವಾ ಪಾನೀಯ ಪದಾರ್ಥ ಪರೀಕ್ಷಿಸಲೆಂದೇ ಕಲಬುರ್ಗಿಯಲ್ಲಿ ವಿಭಾಗೀಯ ಮಟ್ಟದ ಮುಖ್ಯ ಆಹಾರ ವಿಶ್ಲೇಷಕರ ಕಚೇರಿ ಇದೆ. ಎಲ್ಲಾ ತರಹದ ಆಹಾರ ಪದಾರ್ಥ, ತಂಪು ಪಾನೀಯ, ನೀರು ಪರೀಕ್ಷಿಸಲು ಅಲ್ಲಿ ಪ್ರಯೋಗಾಲಯವೂ ಇದೆ. ಆದರೆ, ಸಿಬ್ಬಂದಿ ಮತ್ತು ಸೌಕರ್ಯಗಳ ಕೊರತೆಯಿಂದ ಕಚೇರಿಯು ಅಕ್ಷರಶಃ ಅನಾಥವಾಗಿದೆ.

ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರದಡಿ 1989ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕಚೇರಿಯಲ್ಲಿ 2010ರವರೆಗೆ ಮುಖ್ಯ ಆಹಾರ ವಿಶ್ಲೇಷಕರ ಹುದ್ದೆ ಖಾಲಿಯಿತ್ತು. ಬಡ್ತಿ ನೀಡಿ ಈ ಹುದ್ದೆಗೆ ಬೇರೆ ಬೇರೆ ಊರುಗಳಿಂದ ವರ್ಗಾವಣೆ ಮಾಡಿದರೂ ಅಧಿಕಾರಿಗಳು ಬಡ್ತಿಯನ್ನು ನಿರಾಕರಿಸಿ, ತಾವು ಕಾರ್ಯನಿರ್ವಹಿಸುವ ಊರಿನಲ್ಲೇ ಉಳಿದುಕೊಂಡರು.

ಸದ್ಯಕ್ಕೆ ಇಲ್ಲಿ ಗ್ರೂಪ್ ‘ಡಿ’ ನೌಕರರು, ಇಬ್ಬರು ಕ್ಲರ್ಕ್‌, ಒಬ್ಬರು ತಂತ್ರಜ್ಞ, ಒಬ್ಬರು ಜೂನಿಯರ್ ಮತ್ತು ಮುಖ್ಯ ಆಹಾರ ವಿಶ್ಲೇಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯ ಆಹಾರ ವಿಶ್ಲೇಷಕರ ಹುದ್ದೆ ಪ್ರಭಾರಿಯಾಗಿ ನೀಡಲಾಗಿದೆಯೇ ಹೊರತು, ಇನ್ನೂ ಬಡ್ತಿ ಕೊಟ್ಟಿಲ್ಲ. ಸೌಕರ್ಯ ಪೂರೈಕೆ ಮತ್ತು ಸಿಬ್ಬಂದಿ ನೇಮಕಾತಿಗೆ ಹಲವು ಬಾರಿ ಬೇಡಿಕೆ ಸಲ್ಲಿಸಿದರೂ ಸರ್ಕಾರದಿಂದ ಇನ್ನೂ ಸ್ಪಂದನೆ ಸಿಕ್ಕಿಲ್ಲ.

ADVERTISEMENT

ಸೂಕ್ಷ್ಮ ಜೀವಶಾಸ್ತ್ರಜ್ಞ (ಮೈಕ್ರೊ ಬಯಾಲಜಿಸ್ಟ್) ಹುದ್ದೆಯೂ ಇದುವರೆಗೆ ಭರ್ತಿಯಾಗಿಲ್ಲ. ಈ ಹುದ್ದೆ ಭರ್ತಿಯಾಗದ ಕಾರಣ ಆಹಾರ ಅಥವಾ ಪಾನೀಯ ಸಂಪೂರ್ಣವಾಗಿ ಪರೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಪದಾರ್ಥವನ್ನು ರಾಸಾಯನಿಕವಾಗಿ ಪರೀಕ್ಷಿಸಬಹುದೇ ಹೊರತು, ಜೀವಶಾಸ್ತ್ರ ದೃಷ್ಟಿಕೋನದಿಂದ ಪರೀಕ್ಷಿಸಲು ಸಾಧ್ಯವಾಗುವುದಿಲ್ಲ. ಈ ಕಾರಣದಿಂದ ಪದಾರ್ಥವನ್ನು ಜೀವಶಾಸ್ತ್ರ ಆಧರಿಸಿದ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಬೇಕಾಗುತ್ತದೆ. ಅಲ್ಲಿಂದ ವರದಿ ಬರುವುದು ತಡವಾಗುತ್ತದೆ.

‘ಸೂಕ್ಷ್ಮ ಜೀವಶಾಸ್ತ್ರ ಹುದ್ದೆ ಸೇರಿದಂತೆ ಒಟ್ಟು ಆರು ಹುದ್ದೆಗಳನ್ನು ನೇಮಕಾತಿ ಮಾಡಿದ್ದಲ್ಲಿ, ಪ್ರಯೋಗಾಲಯವು ಸಮರ್ಥವಾಗಿ ಕಾರ್ಯನಿರ್ವಹಿಸಲು ಸಾಧ್ಯವುಗುವುದೂ ಅಲ್ಲದೇ, ಪದಾರ್ಥ ಪರೀಕ್ಷಿಸಿದ ವರದಿ ನೀಡಲು ಸಹ ವಿಳಂಬವಾಗುವುದಿಲ್ಲ. ಬೇಡಿಕೆಗೆ ಸಂಬಂಧಿಸಿದಂತೆ ಸರ್ಕಾರವು ಶೀಘ್ರವೇ ಸ್ಪಂದಿಸುವ ನಿರೀಕ್ಷೆಯಿದೆ’ ಎಂದು ಪ್ರಯೋಗಾಲಯದ ಸಿಬ್ಬಂದಿ ತಿಳಿಸಿದರು.

ಪ್ರಯೋಗಾಲಯದ ಕಾರ್ಯ ಹೇಗೆ? : ವಿಷಕಾರಿ, ಮಲಿನ ಅಥವಾ ಆರೋಗ್ಯಕ್ಕೆ ಸೂಕ್ತವಲ್ಲದ ಆಹಾರ ಪದಾರ್ಥವನ್ನು ಪರೀಕ್ಷಿಸುವಂತೆ ಅದರ ಮಾದರಿಯನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಪ್ರಯೋಗಾಲಯಕ್ಕೆ ನೀಡುತ್ತಾರೆ. ಪದಾರ್ಥದ ಗುಣ ಮತ್ತು ಅಂಶ ಆಧರಿಸಿ ಒಂದೆಡು ದಿನ ಅಥವಾ ವಾರದ ಅವಧಿಯಲ್ಲಿ ಪರೀಕ್ಷಿಸಿ ಪ್ರಯೋಗಾಲಯದವರು ಆಹಾರ ಸುರಕ್ಷತಾ ಅಧಿಕಾರಿಗೆ ವರದಿ ನೀಡುತ್ತಾರೆ. ಅವರು ಹೆಚ್ಚುವರಿ ಜಿಲ್ಲಾಧಿಕಾರಿ ಅಥವಾ ಜಿಲ್ಲಾಧಿಕಾರಿ ಮೂಲಕ ಆಹಾರ ಸುರಕ್ಷತೆ ಆಯುಕ್ತರಿಗೆ ತಲುಪಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.