ADVERTISEMENT

ಕಲಬುರ್ಗಿ: 10 ಸಾವಿರ ಮಕ್ಕಳಿಗೆ ಬೆಳಗಿನ ಉಪಾಹಾರ ಯೋಜನೆಗೆ ಚಾಲನೆ

ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್‌ ಯೋಜನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 19:30 IST
Last Updated 27 ಸೆಪ್ಟೆಂಬರ್ 2019, 19:30 IST
   

ಕಲಬುರ್ಗಿ: ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ ಜಿಲ್ಲೆಯ 10 ಸಾವಿರ ಸರ್ಕಾರಿ ಶಾಲಾ ಮಕ್ಕಳಿಗೆ ನಿತ್ಯ ಬೆಳಗಿನ ಉಪಾಹಾರ ನೀಡಲು ಮುಂದಾಗಿದ್ದು, ನವನಿಹಾಳ ಗ್ರಾಮದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಇದೇ 28ರಂದು ಬೆಳಿಗ್ಗೆ 9ಕ್ಕೆ ಚಾಲನೆ ನೀಡಲಿದ್ದಾರೆ.

ಬಡ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶ ಹೊಂದಿರುವ ಬೆಳಗಿನ ಉಪಾಹಾರ ನೀಡುವ ಗುರಿಯನ್ನು ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆ ಮುದ್ದೇನಹಳ್ಳಿಯ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್‌ ಅದಮ್ಯ ಚೇತನ ಸಂಸ್ಥೆಯ ಸಹಯೋಗದಲ್ಲಿ ಬೆಳಗಿನ ಉಪಾಹಾರ ಯೋಜನೆಯನ್ನು ಅನುಷ್ಠಾನಕ್ಕೆ ತರಲಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಟ್ರಸ್ಟಿ ಆನಂದ,ಕಲಬುರ್ಗಿ ಜಿಲ್ಲೆಯಲ್ಲಿ ಅಪೌಷ್ಟಿಕತೆಯ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಈ ಜಿಲ್ಲೆಯ ಮಕ್ಕಳಿಗೆ ಅದಮ್ಯ ಚೇತನ ಸಂಸ್ಥೆಯ ಜೊತೆಗೂಡಿ ಉಪಾಹಾರ ನೀಡಬೇಕು ಎನ್ನುವುದು ನಮ್ಮ ಬಹಳ ದಿನಗಳ ಕನಸಾಗಿತ್ತು. ಅದಮ್ಯ ಚೇತನ ಸಂಸ್ಥೆಯ ಜೊತೆಗೂಡಿ ಇಲ್ಲಿನ 75 ಶಾಲೆಯ 10 ಸಾವಿರ ಮಕ್ಕಳಿಗೆ ಮೊದಲ ಹಂತದಲ್ಲಿ ಬೆಳಗಿನ ಉಪಾಹಾರ ನೀಡುವ ಯೋಜನೆ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.

ADVERTISEMENT

‘ಬಹಳಷ್ಟು ಮಕ್ಕಳು ಶಾಲೆಗೆ ಹೋಗುವ ಮೊದಲು ಸರಿಯಾದ ಉಪಹಾರ ಸೇವಿಸುವುದಿಲ್ಲಾ. ಖಾಲಿ ಹೊಟ್ಟೆಯಲ್ಲಿ ಅವರು ಹೇಗೆ ಸರಿಯಾಗಿ ಕಲಿಯಲು ಸಾಧ್ಯ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಇವರಿಗೆ ಸರಿಯಾದ ಪೋಷಣೆ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಬೆಳಗಿನ ಉಪಾಹಾರ ನಿರಾಕರಿಸಲಾಗುವ ಅಥವಾ ಉಪಹಾರ ಸಿಗದೇ ಇರುವ ಮಕ್ಕಳು ಖಾಲಿ ಹೊಟ್ಟೆಯಲ್ಲಿ ಶಾಲೆಗೆ ಹೋಗುವುದು ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ. ಇದನ್ನು ಮನಗಂಡು ದೇಶದ 15 ರಾಜ್ಯಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಬೆಳಗಿನ ಉಪಾಹಾರ ಒದಗಿಸುವ ಅನ್ನಪೂರ್ಣ ಉಪಹಾರ ಕಾರ್ಯಕ್ರವನ್ನು ಆಯೋಜಿಸಿದ್ದೇವೆ’ ಎಂದಿದ್ದಾರೆ.

ಕಲಬುರ್ಗಿ ಜಿಲ್ಲೆಯ ಸರ್ಕಾರಿ ಶಾಲೆಯ ಮಕ್ಕಳಿಗೆ ಪ್ರಾರಂಭಿಸುತ್ತಿರುವ ಈ ಯೋಜನೆಯನ್ನು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಯ ಮಕ್ಕಳಿಗೂ ವಿಸ್ತರಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದ್ದಾರೆ.

ಸಂಸದ ಡಾ.ಉಮೇಶ್‌ ಜಿ.ಜಾಧವ್‌, ಅದಮ್ಯ ಚೇತನ ಸಂಸ್ಥೆ ಅಧ್ಯಕ್ಷೆ ಡಾ.ತೇಜಸ್ವಿನಿ ಅನಂತಕುಮಾರ್‌, ಜಿಲ್ಲೆಯ ಶಾಸಕರು, ಜನಪ್ರತಿನಿಧಿಗಳು,ಶ್ರೀ ಸತ್ಯ ಸಾಯಿ ಹೆಲ್ತ್‌ ಅಂಡ್‌ ಎಜುಕೇಷನ್‌ ಟ್ರಸ್ಟ್‌ ಅಧ್ಯಕ್ಷ ಸಿ.ಶ್ರೀನಿವಾಸ್‌,ಶ್ರೀ ಸತ್ಯ ಸಾಯಿ ಯೂನಿವರ್ಸಿಟಿ ಫಾರ್‌ ಹ್ಯೂಮನ್‌ ಎಕ್ಸ್‌ಲೆನ್ಸ್‌ ಕುಲಪತಿ ಬಿ.ಎನ್‌.ನರಸಿಂಹ ಮೂರ್ತಿ ಪಾಲ್ಗೊಳ್ಳುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.