
ಕಲಬುರಗಿ: ‘ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠದಲ್ಲಿ 7 ಸಾವಿರದಷ್ಟು ಅರ್ಜಿಗಳು ಇತ್ಯರ್ಥಕ್ಕೆ ಬಾಕಿಯಿದ್ದು, ತ್ವರಿತ ಇತ್ಯರ್ಥಕ್ಕೆ ಪ್ರಾಮಾಣಿಕ ಯತ್ನ ಮಾಡಲಾಗುವುದು’ ಎಂದು ಪೀಠದ ನೂತನ ಆಯುಕ್ತ ಬಿ. ವೆಂಕಟಸಿಂಗ್ ಹೇಳಿದರು.
ನಗರದ ರೈಲು ನಿಲ್ದಾಣದ ಬಳಿಯ ಹಳೆಯ ಐವಾನ್–ಎ–ಶಾಹಿ ಅತಿಥಿ ಗೃಹ ಆವರಣದ ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಕಚೇರಿಯಲ್ಲಿ ರಾಯಚೂರು ಮೂಲದ ಬಿ.ವೆಂಕಟಸಿಂಗ್ ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತರಾಗಿ ಮಂಗಳವಾರ ಅಧಿಕಾರ ವಹಿಸಿಕೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಲಾದ ಮೇಲ್ಮನವಿ ಅರ್ಜಿಗಳ ಬಾಕಿ ದೇಶದಲ್ಲೇ ಅತಿ ಹೆಚ್ಚು ಅಂದರೆ 60 ಸಾವಿರದಷ್ಟು ಅರ್ಜಿಗಳು ಮಹಾರಾಷ್ಟ್ರದಲ್ಲಿವೆ. 51 ಸಾವಿರ ಅರ್ಜಿಗಳ ಇತ್ಯರ್ಥ ಬಾಕಿಯೊಂದಿಗೆ ತಮಿಳುನಾಡು 2ನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲೂ 51 ಸಾವಿರದಷ್ಟು ಅರ್ಜಿಗಳು ಬಾಕಿ ಉಳಿದಿದ್ದವು. ಆದರೆ, ಇದೇ ವರ್ಷದ ಫೆಬ್ರುವರಿಯಲ್ಲಿ ಆರು ಮಂದಿ ಹೊಸದಾಗಿ ಆಯುಕ್ತರು ನೇಮಕವಾದ ಬಳಿಕ ಬಾಕಿ ಅರ್ಜಿಗಳ ಸಂಖ್ಯೆ 39 ಸಾವಿರಕ್ಕೆ ತಗ್ಗಿದೆ’ ಎಂದು ವಿವರಿಸಿದರು.
‘ಮಾಹಿತಿ ಹಕ್ಕಿನಡಿ ಸಲ್ಲಿಸುವ ಅರ್ಜಿಗಳಿಗೆ ಮೊದಲ ಹಾಗೂ 2ನೇ ಹಂತದಲ್ಲಿ ಮಾಹಿತಿ ಸಿಗದೇ ಇದ್ದಾಗ ಅರ್ಜಿದಾರರು 2ನೇ ಮೇಲ್ಮನವಿಯಾಗಿ ಆಯೋಗದ ಕದ ತಟ್ಟುತ್ತಾರೆ. ನಮ್ಮ ಪೀಠದಲ್ಲಿ ಬಾಕಿ ಅರ್ಜಿಗಳ ಪ್ರಮಾಣದಲ್ಲಿ ನೋಡಿದರೆ, ಮಾಹಿತಿ ಕೋರಿದವರಿಗೆ ಮೊದಲೆರಡು ಹಂತದಲ್ಲಿ ಮಾಹಿತಿ ಸಿಕ್ಕಿಲ್ಲ ಎಂದೇ ಅರ್ಥ’ ಎಂದರು.
‘ಕೆಲವು ಅಧಿಕಾರಿಗಳಿಗೆ ಆಸಕ್ತಿ ಇಲ್ಲದಿರುವುದು, ಮತ್ತೆ ಕೆಲವು ಅಧಿಕಾರಿಗಳಿಗೆ ಕಾನೂನಿನ ಮಾಹಿತಿ ಕೊರತೆಯಿಂದ ನಮ್ಮ ಪೀಠಕ್ಕೆ ಬರುವ ಅರ್ಜಿಗಳ ಪ್ರಮಾಣ ಹೆಚ್ಚಿದೆ. ಕೆಲವರು ಅನಗತ್ಯವಾಗಿ ಮಾಹಿತಿ ಮುಚ್ಚಿಡುತ್ತಾರೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಪ್ರತಿ ಕಚೇರಿಯಲ್ಲಿರುವ ಸಾರ್ವಜನಿಕರ ಮಾಹಿತಿ ಅಧಿಕಾರಿಗಳ ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಪ್ರತಿ ಜಿಲ್ಲೆಯಲ್ಲಿ ಕಾರ್ಯಾಗಾರ ನಡೆಸಲಾಗುವುದು’ ಎಂದು ವಿವರಿಸಿದರು.
‘ನನ್ನ ಆಡಳಿತದ ಅವಧಿಯಲ್ಲಿ ಅಕ್ರಮ, ಲಾಬಿ, ಒತ್ತಡ, ಆಮಿಷಗಳಿಗೆ ಅವಕಾಶ ನೀಡಲ್ಲ. ಆಯೋಗದ ಆಶಯ ಈಡೇರಿಸುವ ಹಾಗೂ ಸಾರ್ವಜನಿಕರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವೆ’ ಎಂದು ಹಿಂದಿನ ಆಯುಕ್ತರ ಮೇಲಿನ ಲೋಕಾಯುಕ್ತ ದಾಳಿ ಕುರಿತ ಪ್ರಶ್ನೆಗೆ ವೆಂಕಟಸಿಂಗ್ ಸ್ಪಷ್ಟಪಡಿಸಿದರು.
‘ಸರ್ಕಾರದ ಶಿಫಾರಸಿನಂತೆ ರಾಜ್ಯಪಾಲರು ಅ.15ರಂದು ನನ್ನನ್ನು ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠಕ್ಕೆ ಮಾಡಿದ್ದಾರೆ. ಅ.16ರಂದು ಪ್ರಮಾಣ ವಚನ ಸ್ವೀಕರಿಸಿದ್ದು, 3 ವರ್ಷ ಅಧಿಕಾರಾವಧಿ ಇರಲಿದೆ’ ಎಂದು ವೆಂಕಟಸಿಂಗ್ ಹೇಳಿದರು.
‘ಸ್ವಂತ ಕಟ್ಟಡ ಹೊಂದಲು ಪ್ರಯತ್ನ’
ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಕಲಬುರಗಿ ಪೀಠಕ್ಕೆ ಸ್ವಂತ ಕಟ್ಟಡವಿಲ್ಲ. ಇದಕ್ಕಾಗಿ ಕಲಬುರಗಿಯ ಹೈಕೋರ್ಟ್ ಸಮೀಪದ ಪ್ರದೇಶದಲ್ಲಿ ಸಿ.ಎ ನಿವೇಶನ ವೊಂದನ್ನು ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಸರ್ಕಾರದಿಂದ ನಿವೇಶನ ಪಡೆದು ಪೀಠಕ್ಕೆ ಸ್ವಂತ ಕಟ್ಟಡ ನಿರ್ಮಿಸಲು ಪ್ರಯತ್ನಿಸಲಾಗುವುದು ಎಂದು ಕೆ.ವೆಂಕಟಸಿಂಗ್ ಹೇಳಿದರು.
6 ತಿಂಗಳಿಂದ ಖಾಲಿಯಿದ್ದ ಹುದ್ದೆ
ರಾಜ್ಯ ಮಾಹಿತಿ ಆಯೋಗ ಕಲಬುರಗಿ ಪೀಠದ ಆಯುಕ್ತ ಹುದ್ದೆ ಕಳೆದ ಏಪ್ರಿಲ್‌ನಿಂದ ಖಾಲಿ ಇತ್ತು. ವೆಂಕಟಸಿಂಗ್ ಅಧಿಕಾರ ವಹಿಸಿಕೊಳ್ಳುವುದರೊಂದಿಗೆ ಆ ಹುದ್ದೆ ಭರ್ತಿಯಾಗಿದೆ. ಹಿಂದೆ ಕಲಬುರಗಿ ಪೀಠಕ್ಕೆ ರವೀಂದ್ರ ಗುರುನಾಥ ಡಾಕಪ್ಪ ಆಯುಕ್ತ ರಾಗಿದ್ದರು. ಮಾಹಿತಿ ಹಕ್ಕು ಕಾಯ್ದೆ ಅಡಿ ಕಪ್ಪು ಪಟ್ಟಿಯಿಂದ ಅರ್ಜಿದಾರರೊಬ್ಬರ ಹೆಸರು ಕೈಬಿಡಲು ₹1 ಲಕ್ಷ ಲಂಚ ಪಡೆದ ಪ್ರಕರಣದಲ್ಲಿ ಡಾಕಪ್ಪ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದರು. ಅವರ ವಜಾಕ್ಕೆ ಸರ್ಕಾರ ಶಿಫಾರಸು ಮಾಡಿತ್ತು. ಆಗ ಡಾಕಪ್ಪ ಏ.16ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಡಾಕಪ್ಪ ಅವಧಿ ಏಪ್ರಿಲ್ 20ರಂದು ಮುಗಿಯಬೇಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.