ಪ್ರಾಣ ಪ್ರತಿಷ್ಠಾಪನೆಗಾಗಿ ಸಿದ್ಧಗೊಂಡಿದ್ದ ಶಿವಲಿಂಗದ ಮೇಲೆ ಪೀಠಾಧಿಪತಿ ಸಿದ್ಧವೀರ ಶಿವಾಚಾರ್ಯರು ಪಾದಗಳು ಇರಿಸಿ ಪೂಜೆ ಸಲ್ಲಿಸಿದ್ದಾರೆ ಎನ್ನಲಾದ ದೃಶ್ಯ
ಚಿತ್ತಾಪುರ: ಪ್ರಾಣ ಪ್ರತಿಷ್ಠಾಪನೆಗಾಗಿ ಸಿದ್ಧಗೊಂಡಿದ್ದ ಶಿವಲಿಂಗದ ಮೇಲೆ ತಾಲ್ಲೂಕಿನ ದಿಗ್ಗಾಂವ ಗ್ರಾಮದ ಪಂಚಗೃಹ ಹಿರೇಮಠದ ಪೀಠಾಧಿಪತಿ ಸಿದ್ಧವೀರ ಶಿವಾಚಾರ್ಯ ತಮ್ಮ ಪಾದಗಳನ್ನು ಇರಿಸಿ ಪಾದಪೂಜೆ ಮಾಡಿಸಿಕೊಂಡಿದ್ದಾರೆ ಎನ್ನಲಾದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಶಿವನ ಭಕ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ದೊಡ್ಡದಾದ ಪಾತ್ರೆಯಲ್ಲಿ ಕಪ್ಪು ಬಣ್ಣದ ಶಿವಲಿಂಗವನ್ನು ಇರಿಸಲಾಗಿದೆ. ಕುರ್ಚಿಯ ಮೇಲೆ ಕುಳಿತಿರುವ ಸ್ವಾಮೀಜಿ ತಮ್ಮ ಎರಡೂ ಪಾದಗಳನ್ನು ಲಿಂಗದ ಮೇಲೆ ಇರಿಸಿದ್ದಾರೆ. ಭಕ್ತರು ಹಾಲಿನಿಂದ ಪಾದಗಳನ್ನು ತೊಳೆದು, ಬಳಿಕ ಕಾಲಿಗೆ ಕುಂಕುಮ ಹಚ್ಚಿ, ಬಿಲ್ವ ಪತ್ರೆಗಳು ಹಾಗೂ ಹೂಗಳನ್ನು ಇರಿಸಿ ಪೂಜೆ ಮಾಡುತ್ತಿರುವ ದೃಶ್ಯಗಳು ವಿಡಿಯೊದಲ್ಲಿ ಸೆರೆಯಾಗಿವೆ.
ಶಿವಲಿಂಗವನ್ನು ಶಿವನ ಸ್ವರೂಪವೆಂದು ಭಾವಿಸಿ ಪೂಜೆ ಸಲ್ಲಿಸಲಾಗುತ್ತದೆ. ಸ್ವಾಮೀಜಿಗಳು ತಾವು ಶಿವನಿಗಿಂತ ದೊಡ್ಡವರೆಂದುಕೊಂಡಿದ್ದಾರೆ ಎಂದು ಶಿವನ ಭಕ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಠದ ವಕ್ತಾರ ಸ್ಪಷ್ಟನೆ: ದಿಗ್ಗಾಂವ ಪಂಚಗೃಹ ಹಿರೇಮಠದ ಶಾಖಾ ಮಠವೊಂದು ಸೇಡಂ ತಾಲ್ಲೂಕಿನ ಕಲಕಂಬದಲ್ಲಿದೆ. ಈಶ ಬಸವೇಶ್ವರ ಮಂದಿರದಲ್ಲಿ ಹಳೆಯದಾದ ಚಿಕ್ಕ ಶಿವಲಿಂಗ ಭಕ್ತರಿಗೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಸಿದ್ಧವೀರ ಶಿವಾಚಾರ್ಯರ ಸೂಚನೆಯಂತೆ ಭಕ್ತರು ಹೊಸ ಲಿಂಗ ಕೆತ್ತಿದ್ದರು ಎಂದು ಮಠದ ವಕ್ತಾರ ಹೇಳಿದ್ದಾರೆ.
ಸ್ವಾಮೀಜಿಗಳು ಪ್ರಾಣ ಪ್ರತಿಷ್ಠಾಪನೆಗಾಗಿ ಸಿದ್ಧಗೊಂಡಿದ್ದ ಲಿಂಗದ ಮೇಲೆ ಸಂಪ್ರದಾಯದ ಪ್ರಕಾರವೇ ಪಾದಗಳನ್ನು ಇರಿಸಿದ್ದಾರೆ. ಸಂಪ್ರದಾಯದಂತೆ ಪೂಜೆ ಸಲ್ಲಿಸಲಾಗಿದೆ. ಶಾಸ್ತ್ರ, ಗ್ರಂಥಗಳ ಆಧಾರ ಹುಡುಕಿ ಈ ಬಗ್ಗೆ ತಿಳಿಸುತ್ತೇವೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.