ADVERTISEMENT

ಕಲಬುರ್ಗಿ: ಸಿಯುಕೆ ಪ್ರಾಧ್ಯಾಪಕರ ಅಮಾನತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 15:38 IST
Last Updated 24 ಜುಲೈ 2021, 15:38 IST
ಈಚೆಗೆ ನಿಧನರಾದ ಸಾಮಾಜಿಕ ಕಾರ್ಯಕರ್ತ ಫಾದರ್ ಸ್ಟ್ಯಾನಿ ಸ್ವಾಮಿ ಅವರನ್ನು ಅಪರಾಧಿ ಎಂಬಂತೆ ಬಿಂಬಿಸಿರುವ ಸಹಾಯಕ ಪ್ರಾಧ್ಯಾಪಕನನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಆರ್‌.ಕೆ. ಹುಡಗಿ ಅವರು ಕರ್ನಾಟಕ ಕೇಂದ್ರೀಯ ವಿವಿ ಹಂಗಾಮಿ ಕುಲಪತಿ ಪ್ರೊ.ಅಳಗವಾಡಿ ಅವರಿಗೆ ಮನವಿ ಸಲ್ಲಿಸಿದರು. ಪ್ರೊ.ಮೀನಾಕ್ಷಿ ಬಾಳಿ, ಕೆ.ನೀಲಾ ಇದ್ದರು
ಈಚೆಗೆ ನಿಧನರಾದ ಸಾಮಾಜಿಕ ಕಾರ್ಯಕರ್ತ ಫಾದರ್ ಸ್ಟ್ಯಾನಿ ಸ್ವಾಮಿ ಅವರನ್ನು ಅಪರಾಧಿ ಎಂಬಂತೆ ಬಿಂಬಿಸಿರುವ ಸಹಾಯಕ ಪ್ರಾಧ್ಯಾಪಕನನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಆರ್‌.ಕೆ. ಹುಡಗಿ ಅವರು ಕರ್ನಾಟಕ ಕೇಂದ್ರೀಯ ವಿವಿ ಹಂಗಾಮಿ ಕುಲಪತಿ ಪ್ರೊ.ಅಳಗವಾಡಿ ಅವರಿಗೆ ಮನವಿ ಸಲ್ಲಿಸಿದರು. ಪ್ರೊ.ಮೀನಾಕ್ಷಿ ಬಾಳಿ, ಕೆ.ನೀಲಾ ಇದ್ದರು   

ಕಲಬುರ್ಗಿ: ‘ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರೋಹಿಣಾಕ್ಷ ಶಿರ್ಲಾಲು ತಮ್ಮ ಅಂಕಣದಲ್ಲಿ, ಈಚೆಗೆ ನಿಧನರಾದ ಸಾಮಾಜಿಕ ಕಾರ್ಯಕರ್ತ ಫಾದರ್ ಸ್ಟ್ಯಾನಿ ಸ್ವಾಮಿ ಅವರನ್ನು ಅಪರಾಧಿ ಎಂಬಂತೆ ಬಿಂಬಿಸಿದ್ದಾರೆ. ಕೂಡಲೇ ಅವರನ್ನು ಅಮಾನತು ಮಾಡಬೇಕು’ ಎಂದು ಹೋರಾಟಗಾರ್ತಿ ಕೆ.ನೀಲಾ ಒತ್ತಾಯಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಲ್ಗಾರ್ ಪರಿಷತ್‌ ಪ್ರಕರಣದಲ್ಲಿ ಫಾದರ್ ಸ್ಟ್ಯಾನ್ ಸ್ವಾಮಿ ಆರೋಪಿಯಾಗಿದ್ದರು. ಅವರ ಮೇಲಿನ ಆರೋಪ ಸಾಬೀತಾಗಿಲ್ಲ’ ಎಂದರು.

‘ಫಾದರ್ ಸ್ಟ್ಯಾನಿ ಸ್ವಾಮಿ ಅವರು ಉತ್ತಮ ವ್ಯಕ್ತಿ. ಅವರು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ನಾಯಾಲಯ ಗೌರವಿಸುತ್ತದೆ ಎಂದು ಮುಂಬೈ ಹೈಕೋರ್ಟ್ ಹೇಳಿದೆ. ಆದರೆ, ರೋಹಿಣಾಕ್ಷ ಅವರು ಹೋರಾಟಗಾರರನ್ನು ರಾಷ್ಟ್ರ ವಿರೋಧಿಗಳು ಎಂಬಂತೆ ಬಿಂಬಿಸಿರುವುದು ಖಂಡನೀಯ’ ಎಂದರು.

ADVERTISEMENT

‘ರೋಹಿಣಾಕ್ಷ ಅವರು ವಿ.ವಿ ಬೋಧಕ ಸಿಬ್ಬಂದಿಯಾಗಿ ಪ್ರಜಾಪ್ರಭುತ್ವದ ಆಶಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ಮತೀಯ ಭಾವನೆ ಬಿತ್ತುವ ರೀತಿಯಲ್ಲಿ ಅಂಕಣ ಬರೆಯಬಾರದು. ಅವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ವಿ.ವಿಯ ಕುಲಪತಿಗೆ ದೂರು ನೀಡಲಾಗಿದೆ’ ಎಂದು ಹೇಳಿದರು.

ಕೇಂದ್ರೀಯ ವಿಶ್ವವಿದ್ಯಾಲಯ ಶುದ್ಧೀಕರಣ ಹೋರಾಟ ಸಮಿತಿ ಸಂಚಾಲಕ ಆರ್.ಕೆ.ಹುಡಗಿ ಮಾತನಾಡಿ, ‘ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಈಚೆಗೆ ನಡೆದ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಪ್ರತಿಭಾವಂತರು ಇದ್ದರೂ ಅವರನ್ನು ಪರಿಗಣಿಸಿಲ್ಲ. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಅರ್ಜುನ ಭದ್ರೆ, ಸುಧಾಮ ಧನ್ನಿ, ಅಲ್ತಾಫ್ ಇನಾಮದಾರ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಮನವಿ ಸಲ್ಲಿಕೆ: ಕೆ.ನೀಲಾ ಮತ್ತು ಆರ್‌.ಕೆ. ಹುಡಗಿ ನೇತೃತ್ವದ ನಿಯೋಗ ಕೇಂದ್ರೀಯ ವಿ.ವಿ. ಹಂಗಾಮಿ ಕುಲಪತಿ ಪ್ರೊ. ಎಂ.ವಿ. ಅಳಗವಾಡಿ ಅವರನ್ನು ಭೇಟಿಯಾಗಿ ಈ ವಿಷಯವಾಗಿ ಮನವಿ ಸಲ್ಲಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.