ADVERTISEMENT

ಉಕ್ಕಡ ಠಾಣೆ ಸಿಬ್ಬಂದಿ ಹೆಚ್ಚಳ: ಎಸ್ಪಿ ಇಶಾ ಪಂತ್

ಚಿಮ್ಮನಚೋಡ ಗ್ರಾಮದಲ್ಲಿ ಎಸ್ಪಿ ಇಶಾ ಪಂತ್ ಅವರಿಗೆ ಅದ್ಧೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2022, 11:37 IST
Last Updated 31 ಮಾರ್ಚ್ 2022, 11:37 IST
ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಗ್ರಾಮದಲ್ಲಿ ಎಸ್ಪಿ ಇಶಾ ಪಂತ್ ಅವರನ್ನು ಗ್ರಾಮದ ಮಹಿಳೆಯರು ಸ್ವಾಗತಿಸಿದರು
ಚಿಂಚೋಳಿ ತಾಲ್ಲೂಕಿನ ಚಿಮ್ಮನಚೋಡ ಗ್ರಾಮದಲ್ಲಿ ಎಸ್ಪಿ ಇಶಾ ಪಂತ್ ಅವರನ್ನು ಗ್ರಾಮದ ಮಹಿಳೆಯರು ಸ್ವಾಗತಿಸಿದರು   

ಚಿಂಚೋಳಿ: ತಾಲ್ಲೂಕಿನ‌ ಚಿಮ್ಮನಚೋಡ ಗ್ರಾಮದಲ್ಲಿ ಗುರುವಾರ ‘ನಿಮ್ಮ‌ ಮನೆ ಬಾಗಿಲಿಗೆ ಪೊಲೀಸ್’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗ್ರಾಮಕ್ಕೆ ಬಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರನ್ನು ಗ್ರಾಮಸ್ಥರು ವಾದ್ಯಮೇಳ ಹಾಗೂ ಸಾಂಪ್ರದಾಯಿಕ‌ ನೃತ್ಯದ ಮೂಲಕ ಸ್ವಾಗತಿಸಿ ಬರಮಾಡಿಕೊಂಡರು.

ಕಾರ್ಯಕ್ರಮ ಉದ್ಘಾಟಿಸಿದ ಎಸ್ಪಿ ಇಶಾ ಪಂತ್, ಚಿಮ್ಮನಚೋಡಕ್ಕೆ ಹೊಸ ಪೊಲೀಸ ಠಾಣೆ ಸ್ಥಾಪನೆಯ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಹೊಸ ಠಾಣೆ ಮಂಜೂರಾಗುವವರೆಗೆ ಉಕ್ಕಡ ಠಾಣೆಯ ಸಿಬ್ಬಂದಿ ಸಂಖ್ಯೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಗ್ರಾಮ ಹಾಗೂ ಸುತ್ತಲಿನ ತಾಂಡಾಗಳಲ್ಲಿ ಅಕ್ರಮ‌ ಮದ್ಯ ಮಾರಾಟ, ಮರಳು ಧಂಧೆಗೆ ಕಡಿವಾಣ ಹಾಕಲು ಆಧೀನ ಅಧಿಕಾರಿಗಳಿಗೆ ಸೂಚಿಸಿದರು.

‘ಜನಸ್ನೇಹಿ ಪೊಲೀಸ್ ನಮ್ಮ ಗುರಿಯಾಗಿದೆ. ಪೊಲೀಸ್ ಎಂದರೆ ಭಯ ಬೇಡ. ಪೊಲೀಸರು ಕಾಡು ಪ್ರಾಣಿಗಳಲ್ಲ. ಅವರು ನಿಮ್ಮಂತೆ ಸಾಮಾನ್ಯ ಜನ. ನಮ್ಮ‌ಕಣ್ಣು ಮತ್ತು ಕಿವಿ ಎಂದರೆ ಜನರು.‌ ನಿಮ್ಮ ಸಹಕಾರ ಸಹಭಾಗಿತ್ವ ಅಗತ್ಯ. ಆಗ ಮಾತ್ರ ನಮ್ಮ ಗುರಿ ಸಾಧ್ಯವಾಗಲಿದೆ’ ಎಂದರು.

ADVERTISEMENT

ನಂತರ ಪರಿಶಿಷ್ಟ ಜನರ ಬಡಾವಣೆಗೆ ತೆರಳಿ ಸಮಸ್ಯೆ ಆಲಿಸಿದರು. ಅಲ್ಲಿಂದ ಚೌಕಿ ತಾಂಡಾಕ್ಕೆ ಭೇಟಿ ನೀಡಿ ಜನರ ಕುಂದು ಕೊರತೆ ಆಲಿಸಿದರು. ‌

ಇದಕ್ಕೂ ಮೊದಲು ಚಿಮ್ಮನಚೋಡ ಗ್ರಾಮದಲ್ಲಿ ಹೊಸ ಪೊಲೀಸ್ ಠಾಣೆ ಮಂಜೂರು, ಅಕ್ರಮ ಮದ್ಯ ಮಾರಾಟ ಬಂದ್, ಅತಿ ಭಾರದ ವಾಹನಗಳಿಗೆ ನಿರ್ಬಂಧ ಮತ್ತು ಚಿಮ್ಮನಚೋಡ ಪಿಕೆಪಿಎಸ್ ಅವ್ಯವಹಾರ, ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕಬೇಕೆಂದು ಎಸ್ಪಿ ಅವರನ್ನು ಸ್ಥಳೀಯರು ಒತ್ತಾಯಿಸಿದರು.

ರಾಮರೆಡ್ಡಿ ಪಾಟೀಲ, ಲಕ್ಷ್ಮ ಅವುಂಟಿ, ಸಂಗಾರೆಡ್ಡಿ ನರಸನ್, ಪ್ರೇಮಸಿಂಗ ಜಾಧವ, ಶರಣರೆಡ್ಡಿ ಮೊಗಲಪ್ಪನೋರ, ದ್ರೌಪದಿ, ಶಂಭುಲಿಂಗ ನೂಲಕರ, ನಾಗೇಂದ್ರಪ್ಪ, ಮೋತಿರಾಮ ನಾಯಕ್, ಸಿರಾಜುದ್ದೀನ ದುಬಾಳಿ ಸಮಸ್ಯೆ ಹೇಳಿದರು.

ತಹಶೀಲ್ದಾರ್ ಅಂಜುಂ ತಬಸ್ಸುಮ್, ಇಒ ಅನಿಲಕುಮಾರ ರಾಠೋಡ, ಡಿವೈಎಸ್ಪಿ ಬಸವೇಶ್ವರ ಹೀರಾ, ಸರ್ಕಲ್ ಇನ್‌ಸ್ಪೆಕ್ಟರ್ ಮಹಾಂತೇಶ ಪಾಟೀಲ, ಪಿಎಸ್ಐ ಮಂಜುನಾಥರೆಡ್ಡಿ, ಪ್ರಭಾಕರರಾವ್ ಕುಲಕರ್ಣಿ, ಜಿಮ್ಮಿಬಾಯಿ, ಶಿವಕುಮಾರ ಹಿರೇಮಠ, ರಾಘವೇಂದ್ರರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.