ADVERTISEMENT

ಬಾಲಕಿಯರ ಸುರಕ್ಷತೆಗೆ ವಿಶೇಷ ಬಸ್‌

ತಾಲ್ಲೂಕಿನ ಮುನ್ನೋಳ್ಳಿ ಗ್ರಾಮ ಪಂಚಾಯಿತಿ ಕ್ರಮ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:45 IST
Last Updated 8 ಡಿಸೆಂಬರ್ 2019, 20:45 IST
ಮುನ್ನೋಳಿ ಗ್ರಾಮಪಂಚಾಯಿತಿ ವತಿಯಿಂದ ವಿಶೇಷ ಬಸ್
ಮುನ್ನೋಳಿ ಗ್ರಾಮಪಂಚಾಯಿತಿ ವತಿಯಿಂದ ವಿಶೇಷ ಬಸ್   

ಆಳಂದ (ಕಲಬುರ್ಗಿ ಜಿಲ್ಲೆ): ತಾಲ್ಲೂಕಿನ ಮುನ್ನೋಳ್ಳಿ ಗ್ರಾಮ ಪಂಚಾಯಿತಿಯು ಗ್ರಾಮದ ಹೆಣ್ಣುಮಕ್ಕಳ ಸುರಕ್ಷತೆ ದೃಷ್ಟಿಯಿಂದ ಭಾನುವಾರ ವಿಶೇಷ ಬಸ್‌ ಸೇವೆ ಆರಂಭಿಸಿತು. ಶಾಲಾ ಕಾಲೇಜುಗಳಿಗೆ ಹೋಗಿಬರಲು ಹೆಣ್ಣುಮಕ್ಕಳು ಈ ಸೌಲಭ್ಯ ಪಡೆಯಬಹುದು.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುನ್ನೋಳ್ಳಿ ಮತ್ತು ಬಸವಣ್ಣ ಸಂಗೋಳಗಿ ಗ್ರಾಮಗಳ ವ್ಯಾಪ್ತಿಯಲ್ಲಿ 6 ಪ್ರಾಥಮಿಕ–ಪ್ರೌಢ ಶಾಲೆಗಳಿವೆ. ಐದಾರು ವರ್ಷಗಳಿಂದ ಇಲ್ಲಿನಹೆಣ್ಣಮಕ್ಕಳ ಶಿಕ್ಷಣವು ಪ್ರೌಢ ಶಾಲೆವರೆಗೆ ಸೀಮಿತವಾಗಿತ್ತು. ಬಸ್‌ಗಳಲ್ಲಿ ಕಿಡಿಗೇಡಿ ಯುವಕರ ಕೀಟಲೆ ಮತ್ತಿತರ ಘಟನೆಗಳಿಂದ ಪೋಷಕರು ಹೆಣ್ಣುಮಕ್ಕಳನ್ನು ಶಾಲಾ ಕಾಲೇಜಿಗೆ ಕಳುಹಿಸಲು ಹಿಂಜರಿಯುತ್ತಿದ್ದರು. ಅವರು ಓದು ಅರ್ಧಕ್ಕೆ ನಿಲ್ಲಿಸಿದ ಪ್ರಕರಣಗಳೇ ಹೆಚ್ಚಿದ್ದವು.

ಇದನ್ನು ಮನಗಂಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿದ್ದಾರೂಡ ಬುಜರ್ಕೆ, ಉಪಾಧ್ಯಕ್ಷೆ ಲಕ್ಷ್ಮಿಬಾಯಿ ಕೊಡ್ಲೆ ಮತ್ತು ಸದಸ್ಯರು ಸಭೆ ನಡೆಸಿ ಸರ್ವಾನುಮತದಿಂದ ಬಸ್‌ ಖರೀದಿಗೆ ನಿರ್ಧರಿಸಿದರು.

ADVERTISEMENT

‘ಮುನ್ನೋಳ್ಳಿ, ಸಂಗೋಳಗಿ ಗ್ರಾಮದ ಹೆಣ್ಣುಮಕ್ಕಳು ಬಸ್‌ನಲ್ಲಿ ನಿರಾತಂಕವಾಗಿ ಸಂಚರಿಸಬಹುದು. 40 ಆಸನಗಳಿರುವ ಈ ಬಸ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಿಯಾಜ್‌ ಖುರೇಷಿ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.