ADVERTISEMENT

ಸದ್ಗುಣಗಳೊಟ್ಟಿಗೆ ಬದುಕು ನಡೆಸಿದರೆ ಸಾರ್ಥಕತೆ:ಸಚ್ಚಿದಾನಂದ ಜ್ಞಾನೇಶ್ವರ ಸ್ವಾಮೀಜಿ

‘ದೈವಜ್ಞ ದರ್ಶನ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 6:36 IST
Last Updated 17 ಜನವರಿ 2026, 6:36 IST
ಕಲಬುರಗಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದೈವಜ್ಞ ದರ್ಶನ ಕಾರ್ಯಕ್ರಮಕ್ಕೂ ಮುನ್ನ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಹಾಗೂ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಅವರನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು.ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದೈವಜ್ಞ ದರ್ಶನ ಕಾರ್ಯಕ್ರಮಕ್ಕೂ ಮುನ್ನ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಹಾಗೂ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಅವರನ್ನು ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು.ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಭಗವಂತ ನಮ್ಮಲ್ಲಿ ಪ್ರೀತಿ, ವಿಶ್ವಾಸ, ಸಹಬಾಳ್ವೆ, ಆತ್ಮೀಯತೆ, ಸೌಜನ್ಯ, ದಯಾಶೀಲತೆ ಈ ಎಲ್ಲಾ ಸದ್ಗುಣಗಳನ್ನು ಕೊಟ್ಟು ಕಳಿಸಿದ್ದಾನೆ. ಅವುಗಳೊಟ್ಟಿಗೆ ಬದುಕು ನಡೆಸುತ್ತಾ ಹೋದಂತೆ ಸಾರ್ಥಕತೆ ಪಡೆಯಲು ಸಾಧ್ಯವಾಗುತ್ತದೆ’ ಎಂದು ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಕರ್ಕಿಯ ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಜ್ಞಾನೇಶ್ವರಿ ಪೀಠದ ದೈವಜ್ಞ ಬ್ರಾಹ್ಮಣ ಮಠಾಧೀಶ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ನಗರದ ಯಲ್ಲಮ್ಮ ದೇವಸ್ಥಾನದ ಭಾವಸಾರ ಭವನದಲ್ಲಿ ಶುಕ್ರವಾರ ದೈವಜ್ಞ ಬ್ರಾಹ್ಮಣ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ‘ದೈವಜ್ಞ ದರ್ಶನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೈವಿ ಗುಣಗಳನ್ನು ಬಿಟ್ಟು ದ್ವೇಷ, ಅಸೂಯೆ, ಮಾತ್ಸರ್ಯ, ದುಷ್ಟತನ ಇವುಗಳ ಹಿಂದೆ ಹೋದರೆ ಜೀವನದಲ್ಲಿ ಅಸ್ವಸ್ಥರಾಗುತ್ತಾ ಹೋಗುತ್ತೇವೆ. ದುಃಖದಲ್ಲಿ ಬೀಳುತ್ತಾ ಹೋಗುತ್ತೇವೆ. ರಾಕ್ಷಸಿ ಗುಣಗಳಿಂದ ರಾಕ್ಷಸಿತನ, ದೈವಿ ಗುಣಗಳಿಂದ ದೈವಿಕತೆ ಬೆಳೆಯುತ್ತದೆ’ ಎಂದು ತಿಳಿಸಿದರು.

ADVERTISEMENT

‘ಅಂದಿನ ಕಾಲದಲ್ಲಿ ಸುಖದ ಸಾಮಗ್ರಿಗಳು ಇರದಿದ್ದರೂ ನಮ್ಮ ಹಿರಿಯರು ಸಂತೋಷವಾಗಿದ್ದರು. ಆನಂದವಾಗಿದ್ದರು. ರೋಗರಹಿತವಾಗಿದ್ದರು. ಅಷ್ಟೇ ಅಲ್ಲ, ಪ್ರೀತಿ–ವಿಶ್ವಾಸದಿಂದ ಎಲ್ಲರೊಟ್ಟಿಗೆ ಬಾಳುತ್ತಿದ್ದರು. ಆದರೆ ಇಂದು ಸುಖಸಾಮಗ್ರಿಗಳು ನಮ್ಮಲ್ಲಿ ತುಂಬಿತುಳುಕುತ್ತಿವೆ. ಊಟಕ್ಕೆ, ಉಡಲಿಕ್ಕೆ, ಸಂಚಾರಕ್ಕೆ, ವಾಸಕ್ಕೆ ಸೇರಿದಂತೆ ಸ್ವರ್ಗಕ್ಕೆ ಕಿಚ್ಚು ಇಡುವಷ್ಟು ವ್ಯವಸ್ಥೆಗಳನ್ನು ವಿಜ್ಞಾನ ನಮಗೆ ಮಾಡಿಕೊಟ್ಟಿದೆ. ಆದರೂ ಶಾಂತಿ, ಸಮಾಧಾನ, ಆನಂದ ಇದೆಯೇ? ಎಂದು ಪ್ರಶ್ನಿಸಿಕೊಂಡಾಗ ಇನ್ನೂ ಸಿಗಲಿಲ್ಲ ಎಂಬ ಉತ್ತರ ಬರುತ್ತದೆ. ಮುಂದೆ ಸಿಗಬಹುದು ಎಂಬ ಕಲ್ಪನೆಯಲ್ಲಿಯೇ ಬಾಳುತ್ತಿದ್ದೇವೆ’ ಎಂದರು.

‘ಶಾಂತಿ, ಸಮಾಧಾನ ವಸ್ತುವಿನಲ್ಲಿ ಸಿಗುವುದಿಲ್ಲ. ನಮ್ಮಲ್ಲಿ ಪ್ರೀತಿ, ಉದಾರತೆ, ಸೌಜನ್ಯಗಳನ್ನು ಬೆಳೆಸಿಕೊಳ್ಳುತ್ತಾ ಹೋದಂತೆ ಶಾಂತಿ, ಸಮಾಧಾನ ಪಡೆಯಲು ಸಾಧ್ಯವಾಗುತ್ತದೆ ಎಂಬ ಸತ್ಯವನ್ನು ನಾವು ಅರಿತುಕೊಳ್ಳಬೇಕಿದೆ. ಭಗವಂತನ ಆರಾಧನೆ, ಉಪಾಸನೆ, ಸಾನ್ನಿಧ್ಯವನ್ನು ಪಡೆಯಲು ಪ್ರಯತ್ನಿಸಿದಾಗ ಜೀವನದಲ್ಲಿ ಉನ್ನತಿಯನ್ನು ಪಡೆಯಲು ಸಾಧ್ಯವಾಗುತ್ತದೆ’ ಎಂದರು.

ಜ್ಞಾನೇಶ್ವರಿ ಪೀಠದ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಮಾತನಾಡಿ, ‘ಈ ಜಗತ್ತಿನಲ್ಲಿ ದೇವರನ್ನು ಬಿಟ್ಟು ಬೇರಿಲ್ಲ. ಜೀವನದಲ್ಲಿ ದೇವರಿಗೆ ಶರಣಾದರೆ ಮಾತ್ರ ಸುಖ, ಶಾಂತಿ, ನೆಮ್ಮದಿ ಪ್ರಾಪ್ತಿಯಾಗುತ್ತದೆ’ ಎಂದು ಹೇಳಿದರು.

ಸಮಾಜದ ಖಜಾಂಚಿ ವಿಶ್ವನಾಥ ಅಣವೇಕರ್‌, ಕಾರ್ಯದರ್ಶಿ ನಿತೀನ ರಾಯ್ಕರ್‌, ಸಹ ಕಾರ್ಯದರ್ಶಿ ಸಂತೋಷ ಪಿ.ಅಣವೇಕರ್‌, ಸಂಜಯಕುಮಾರ ರೇವಣಕರ್‌, ಗಜಾನನ ವೆರಣೇಕರ್‌, ಗಜಾನನ ರೇವಣಕರ್‌, ಶಾಂತಾರಾಮ ರಾಯ್ಕರ್‌, ಶಶಿಕಾಂತ ಅಣವೇಕರ್‌, ಸಂಜೀವ ರಾಯ್ಕರ್‌, ನಾಗರಾಜ ರೇವಣಕರ್‌, ವಾದಿರಾಜ, ಭಾವಸಾರ ಕ್ಷತ್ರೀಯ ಸಮಾಜದ ರಾಜೀವ್‌ ಜವಳಕರ್‌, ಅನೀಲ ಜವಳಕರ್‌, ಸರಾಫ್‌ ಸಂಘದ ಅಧ್ಯಕ್ಷ ರಾಘವೇಂದ್ರ ಮೈಲಾಪುರ ಇದ್ದರು.

ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಶಾಮ ಪಾವಸ್ಕರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರೋಹಿತ ಯೋಗೇಶ ಭಟ್‌ ನಿರೂಪಿಸಿದರು. ಉಪಾಧ್ಯಕ್ಷ ದೀಪಕ ಎ.ರಾಯ್ಕರ್‌ ಸ್ವಾಗತಿಸಿದರು.

ಅದ್ದೂರಿ ಮೆರವಣಿಗೆ: ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಮತ್ತು ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಅವರನ್ನು ನಗರದ ತಹಶೀಲ್ದಾರ್‌ ಕಚೇರಿಯಿಂದ ಜಗತ್‌ ವೃತ್ತದ ಮಾರ್ಗವಾಗಿ ಯಲ್ಲಮ್ಮ ದೇವಸ್ಥಾನದವರೆಗೆ ಸಾರೋಟಿನಲ್ಲಿ ಮೆರವಣಿಗೆ ಮಾಡಲಾಯಿತು. ಮಹಿಳೆಯರು ಕುಂಭಕಳಸದೊಂದಿಗೆ ಪಾಲ್ಗೊಂಡಿದ್ದರು.

‘ರಾಜ್ಯದಾದ್ಯಂತ 70 ಕಾರ್ಯಕ್ರಮ’

‘ದೈವಜ್ಞರು ಎಲ್ಲೆಲ್ಲಿ ಇರುತ್ತಾರೊ ಅಲ್ಲಿ ಹೋಗಿ ದರ್ಶನ ಕೊಡುವುದೇ ಈ ದೈವಜ್ಞ ಕಾರ್ಯಕ್ರಮವಾಗಿದೆ. ಎಲ್ಲಾ ದೈವಜ್ಞರನ್ನು ಒಮ್ಮೆಲೆ ನಾವು ಮಠಕ್ಕೆ ಕರೆಸಿಕೊಳ್ಳಲು ಆಗುವುದಿಲ್ಲ. ಹಾಗಾಗಿ ನಾವೇ ಇಲ್ಲಿ ಬಂದರೆ ನಮ್ಮ ದರ್ಶನವನ್ನು ನೀವು ನಿಮ್ಮ ದರ್ಶನವನ್ನು ನಾವು ಪಡೆಯಬಹುದು’ ಎಂದು ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

‘ಪೀಠದ ಸುಜ್ಞಾನೇಶ್ವರ ಭಾರತೀ ಸ್ವಾಮೀಜಿ ಅವರು ಸನ್ಯಾಶ್ರಮವನ್ನು ಸ್ವೀಕರಿಸಿ 2 ವರ್ಷವಾಗುತ್ತಿದೆ. ಅವರ ಪರಿಚಯವನ್ನೂ ಸಮಾಜ ಜನ ಮಾಡಿಕೊಳ್ಳಲಿ ಎನ್ನುವ ದೃಷ್ಟಿಯಿಂದ ಕಲಬುರಗಿಗೆ ಬಂದಿದ್ದೇವೆ. ರಾಜ್ಯದಾದ್ಯಂತ ಇಂತಹ 70 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.