ADVERTISEMENT

ಯಡ್ರಾಮಿ ತಾಲ್ಲೂಕು ಕಚೇರಿಗೆ ಸಿಬ್ಬಂದಿ ಕೊರತೆ; ಜನರ ಅಲೆದಾಟ

ಮಂಜುನಾಥ ದೊಡಮನಿ
Published 21 ಸೆಪ್ಟೆಂಬರ್ 2021, 5:29 IST
Last Updated 21 ಸೆಪ್ಟೆಂಬರ್ 2021, 5:29 IST
ಯಂಡ್ರಾಮಿ ತಾಲ್ಲೂಕಿನ ತಹಶೀಲ್ದಾರ್ ಕಚೇರಿ
ಯಂಡ್ರಾಮಿ ತಾಲ್ಲೂಕಿನ ತಹಶೀಲ್ದಾರ್ ಕಚೇರಿ   

ಯಡ್ರಾಮಿ: ತಾಲ್ಲೂಕು ಕೇಂದ್ರ ಯಡ್ರಾಮಿಯ ತಾಲ್ಲೂಕು ಕಚೇರಿಯು ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು, ಇದರಿಂದ ನಾಗರಿಕರು ಪರದಾಡುವಂತಾಗಿದೆ.

ಜಮೀನು ಪಹಣಿ ತಿದ್ದುಪಡಿ, ಆಧಾರ್ ಕಾರ್ಡ್ ಸೇರಿದಂತೆ ಇತರೆ ಸಣ್ಣಪುಟ್ಟ ಕೆಲಸಗಳಿಗಾಗಿ ತಿಂಗಳುಗಟ್ಟಲೆ ಕಚೇರಿಗೆ ಅಲೆಯಬೇಕಿದೆ. ಇದರಿಂದ ರೈತರು ಹಾಗೂ ಜನರು ಹೈರಾಣಾಗಿದ್ದಾರೆ. ಪ್ರತಿ ಕೆಲಸಕ್ಕೂ ಲಂಚ ಕೊಡಬೇಕಾದ ಅನಿವಾರ್ಯತೆ ಇದೆ. ಸರ್ವ ಸರಿಯಿಲ್ಲ, ನಾಳೆ ಬನ್ನಿ ಎಂಬ ನೆಪ ಹೇಳಿ ಸಿಬ್ಬಂದಿ ವಾಪಸ್‌ ಕಳುಹಿಸುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಆಧಾರ್ ಕಾರ್ಡ್‌ ತಿದ್ದು ಪಡಿಗೆ ಮಕ್ಕಳೊಂದಿಗೆ ಬಂದ ತಾಯಂದಿರು ನೆಟ್‌ವರ್ಕ್‌ ಸಮಸ್ಯೆಯಿಂದಾಗಿ ಗಂಟೆಗಟ್ಟಲೆ ಕಚೇರಿ ಮುಂದೆ ಕಾಯುವುದು ಸಾಮಾನ್ಯವಾಗಿದೆ. ನಿರ್ವಹಣಾ ಸಿಬ್ಬಂದಿಕಲಬುರ್ಗಿಯಿಂದ ಬರುತ್ತಿದ್ದು ಕಚೇರಿ ತಲುಪುವ ವೇಳೆಗೆ ಮಧ್ಯಾಹ್ನ ಆಗುತ್ತದೆ. ಅವರನ್ನು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿ ದರೂ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.

ADVERTISEMENT

ತಹಶೀಲ್ದಾರ್ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ–ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಇರುವ ಸಿಬ್ಬಂದಿಯಲ್ಲಿ ಬೇಜವಾಬ್ದಾರಿ ಹೆಚ್ಚಾಗಿದೆ. ಸಿಬ್ಬಂದಿಯ ಇಂತಹ ನಡೆ ತಿಳಿದಿದ್ದರೂ ತಹಶೀಲ್ದಾರ್ ಶಾಂತಗೌಡ ಬಿರಾದಾರ ಅವರು ಮೌನವಾಗಿ ಇದ್ದಾರೆ. ಕೂಡಲೇ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕಿದೆ ಎಂದು ನಿಜಲಿಂಗ ಬಿಳವಾರ ಒತ್ತಾಯಿಸಿದರು.

*ಕಚೇರಿಯ ಸಿಬ್ಬಂದಿ ಲಂಚ ಪಡೆಯುತ್ತಿರುವುದು ಗಮನಕ್ಕೂ ಬಂದಿದೆ. ಈ ಬಗ್ಗೆ ಅವರಿಗೆ ಎಚ್ಚರಿಕೆ ನೀಡಿದ್ದೇನೆ. ಸಿಬ್ಬಂದಿ ಕೊರತೆಯಿಂದ ಕೆಲಸಗಳಿಗೆ ಹಿನ್ನಡೆ ಆಗುತ್ತಿದೆ
ಶಾಂತಗೌಡ ಬಿರಾದಾರ, ತಹಶೀಲ್ದಾರ್

*ತಾಲ್ಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತುಂಬಿದ್ದು, ಲಂಚಕೊಡದೆ ಯಾವುದೇ ಕೆಲಸವಾಗುತ್ತಿಲ್ಲ. ಈ ಬಗ್ಗೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು

ನಿಜಲಿಂಗ ಬಿಳವಾರ, ನಿವಾಸಿ

*ಐವರು ನಿರ್ವಹಿಸುವಂತಹ ಕೆಲಸಗಳನ್ನು ಇಬ್ಬರೇ ಮಾಡುತ್ತಿದ್ದೇವೆ. ಸಿಬ್ಬಂದಿ ಅಭಾವ ಸಾಕಷ್ಟು ಕಾಡುತ್ತಿದ್ದು, ಕಡತಗಳ ವಿಲೇವಾರಿ ಬಗ್ಗೆ ತಹಶೀಲ್ದಾರ್ ಗಮನಕ್ಕೆ ತರುತ್ತೇವೆ

ಸತೀಶ, ಕಚೇರಿಯ ನಿರ್ವಾಹಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.