ಕಲಬುರಗಿಯಲ್ಲಿ ಶನಿವಾರ ನಡೆದ 12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದಲ್ಲಿ ಸಾಹಿತಿ ವಿನಯ ಒಕ್ಕುಂದ ಮಾತನಾಡಿದರು
ಕಲಬುರಗಿ: ‘ಜಾತಿ ನಿರಸನ ಪ್ರಶ್ನೆಯನ್ನು ಅದ್ಭುತವಾಗಿ ನಿರ್ವಚನ ಮಾಡಿಕೊಟ್ಟಂತಹ ಬಸವಣ್ಣನಿಗೂ ಪುರುಷ ಅಹಂಕಾರವನ್ನು ಇಳಿಸಿಕೊಳ್ಳುವುದು ಸಾಧ್ಯವಾಗಿರಲಿಲ್ಲ. ಅಷ್ಟು ಗಟ್ಟಿಯಾಗಿ ಗಂಡಸುತನದ ಗರ್ವವನ್ನು ಕಳೆದುಕೊಳ್ಳುವುದು ಸುಲಭವಾಗಿರಲಿಲ್ಲ’ ಎಂದು ಸಾಹಿತಿ ವಿನಯ ಒಕ್ಕುಂದ ಅಭಿಪ್ರಾಯಪಟ್ಟರು.
ಇಲ್ಲಿ ಶನಿವಾರ ನಡೆದ 12ನೇ ರಾಜ್ಯ ಮಟ್ಟದ ಕದಳಿ ಮಹಿಳಾ ಸಮಾವೇಶದ ಗೋಷ್ಠಿ–1ರ ‘ಒಳಗೆ ಸುಳಿವ ಆತ್ಮ’ ವಿಷಯ ಮಂಡನೆ ವೇಳೆ ಅವರು ಮಾತನಾಡಿದರು.
‘ಎನ್ನ ಸತಿ ನೀಲಲೋಚನೆ ಗಗ್ಗಳೆಯ ಚೆಲುವೆ...’ ಎಂದ ಬಸವಣ್ಣನೂ ಹೆಣ್ಣನ್ನು ದೇಹವಾಗಿ ನೋಡುವ ಶಾಪದಿಂದ ಮುಕ್ತನಾಗಿರಲಿಲ್ಲ. ಪರಂಪರಗತವಾದ ರೋಗಗ್ರಸ್ಥ ಚಿಂತನೆಯಿಂದ ಹೊರ ಬರುವುದು ಬಹಳ ಕಠಿಣವಾಗಿತ್ತು’ ಎಂದರು.
‘ಜೇಡರ ದಾಸಿಮಯ್ಯ ತನ್ನ ವಚನದಲ್ಲಿ ‘ದುಗ್ಗಳೆಯ ತಂದು ಬದುಕಿದೆನು ಕಣಾ...’ ಎನ್ನುತ್ತಾನೆ. ಕೊಡು– ತೆಗೆದುಕೊಳ್ಳಲು ಹೆಣ್ಣು ವಸ್ತುವಲ್ಲ. ಅವಳನ್ನು (ಹೆಣ್ಣು) ಆಗಲು– ಈಗಲು ವಸ್ತುವಂತೆ ನೋಡಲಾಗುತ್ತಿದೆ. ಹೊರಗಿನ ಆವರಣ ಬದಲಾದಂತೆ ಕಾಣುತ್ತಿದ್ದರೂ ಒಳಗಿನ ಅಂತರಂಗದಲ್ಲಿ ಹೆಣ್ಣಿನ ಬಗ್ಗೆ ದೊಡ್ಡ ಬದಲಾವಣೆ ಘಟಿಸಲ್ಲ. ಹೆಣ್ಣಿನ ವಿಷಯದಲ್ಲಿ ವಚನಕಾರರ ಬಗ್ಗೆ ನಾನು ಆರೋಪ ಮಾಡುತ್ತಿಲ್ಲ. ವಚನದ ಮೂಲಕ ನಮಗೆ ಸಾಕಷ್ಟು ಸ್ವಾತಂತ್ರ್ಯವನ್ನು ಕೊಟ್ಟಿದ್ದೇ ವಚನಕಾರರು. ಇದನ್ನೇ ನಾವು ಶಂಕರಾಚಾರ್ಯರಿಗೆ ಪ್ರಶ್ನೆ ಮಾಡಲು ಆಗುವುದಿಲ್ಲ’ ಎಂದು ಹೇಳಿದರು.
‘ವಚನ ಚಳವಳಿಯಲ್ಲಿ ಹೆಣ್ಣಿನ ಕುರಿತ ಆದರ್ಶ ಹಾಗೂ ಮಾನವೀಯತೆ ಮಾತುಗಳು ಬದುಕಿನಲ್ಲಿ ಅನುಸಂಧಾನ ಮಾಡಲು ಸಾಧ್ಯವಾಗಲಿಲ್ಲ. ಬಹುತೇಕವು ಮಾತುಗಳಾಗಿ ಉಳಿದಿದ್ದು, ಬಸವಣ್ಣನೂ ಸೇರಿ ವಚನಕಾರರಿಗೆ ಅವುಗಳನ್ನು ಅನುಸಂಧಾನ ಮಾಡುವುದು ಕಷ್ಟವಾಗಿತ್ತು’ ಎಂದರು.
‘ಹೆಣ್ಣಿಗೆ ಘನತೆ ಕೊಟ್ಟು, ಪ್ರಶ್ನಿಸುವ ಅವಕಾಶ ನೀಡಿದ ಕೀರ್ತಿ ಶರಣ ಧರ್ಮ, ಲಿಂಗಾಯತ ಧರ್ಮ ಹಾಗೂ ವಚನಕಾರರಿಗೆ ಸಲ್ಲುತ್ತದೆ. ‘ಒಳಗೆ ಸುಳಿಯುವ ಆತ್ಮ ಹೆಣ್ಣು ಅಲ್ಲ ಗಂಡು ಅಲ್ಲ’ ಎಂಬುದರ ಒಂದು ಎಳೆಯನ್ನು ಹಿಡಿದ ವಚನಕಾರ್ತಿಯರು ಅದ್ಭುತವಾದ ಬದುಕನ್ನು ಸೃಷ್ಟಿಸಿಕೊಂಡರು’ ಎಂದು ವಿಶ್ಲೇಷಿಸಿದರು.
‘ಇಡೀ ಸಮಾಜ ಕೊಳೆತು ನಾರುತ್ತಿದೆ. ಅಸಮಾನತೆಯು ಉತ್ತುಂಗದ ಶಿಖರವೇರಿದೆ. ನಮ್ಮ ಮಕ್ಕಳಿಗೆ ಮುಂದಿನ ಭವಿಷ್ಯ ಇಲ್ಲದಂತೆ ಪರಿಸ್ಥಿತಿಯನ್ನು ತಂದುಕೊಡು ರಾಜಕೀಯ ನಿರಕ್ಷರಸ್ಥರಾಗಿದ್ದೇವೆ. ನಮ್ಮ ಧರ್ಮ, ಜಾತಿ, ಕುಲಸ್ಥರು ಎಷ್ಟೇ ಹೀನಾಯ ಕೆಲಸಗಳು ಮಾಡಿದ್ದರೂ ಅವರ ಬೆನ್ನಿಗೆ ನಿಲ್ಲುವಷ್ಟು ಕುಲಸ್ಥಾಯಿಗಳು ಆಗಿದ್ದಾಗ ನಮಗೆ ವಚನಗಳು, ವಚನ ಚಳವಳಿ, ಶರಣ ಧರ್ಮ ಏಕೆ ಬೇಕು’ ಎಂದು ಅವರು ಪ್ರಶ್ನಿಸಿದರು.
ಚಿಂತಕ ಬಸವರಾಜ ಸಾದರ ‘ಮಡದಿ ಎಂಬ ಶಬ್ದ ನಿಶ್ಯಬ್ದವಾದೊಡೆ’ ಕುರಿತು ವಿಷಯ ಮಂಡನೆ ಮಾಡಿದರು. ಶರಣ ಸಾಹಿತ್ಯ ಪ್ರಚಾರಕರಾದ ಮಾತೆ ಬಸವೇಶ್ವರಿ ಅಧ್ಯಕ್ಷತೆ ವಹಿಸಿದ್ದರು.
ಸನಾತನ ಧರ್ಮ ಹೆಣ್ಣನ್ನು ತುಛ್ಯವಾಗಿ ನೋಡಿ ಚಂಚಲೆ ಎಂದು ಕರೆದಿದೆ. ಜಗತ್ತಿನ ಎಲ್ಲ ಬಗೆಯ ತಪ್ಪುಗಳನ್ನು ಹೆಣ್ಣಿನ ತಲೆಯ ಮೇಲೆಯೇ ಹೊರಿಸಿತ್ತುವಿನಯ ಒಕ್ಕುಂದ ಸಾಹಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.