
ಕಾಳಗಿ: ಪಟ್ಟಣದ ಹಳೆ ಬಸ್ ನಿಲ್ದಾಣ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಿಡಾಡಿ ದನಗಳ ಕಾಟ ಹೆಚ್ಚಿದ್ದು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಇನ್ನೊಂದಡೆ ಪಟ್ಟಣದಲ್ಲಿ ಹಂದಿ, ನಾಯಿಗಳ ಹಾವಳಿ ಮಿತಿಮೀರಿದೆ.
‘ಶಹಾಪುರ-ಶಿವರಾಂಪುರ ರಾಜ್ಯಹೆದ್ದಾರಿ-149 ಹಾದುಹೋಗುವ ಇಲ್ಲಿ ನಿತ್ಯ ಒಂದಿಲ್ಲ ಒಂದು ಕಡೆಯಲ್ಲಿ ದನಗಳು ಓಡಾಡಿಕೊಂಡಿರುತ್ತವೆ. ಅದರಲ್ಲೂ ಹಳೆ ಬಸ್ ನಿಲ್ದಾಣದಲ್ಲಿ ಅವುಗಳ ಕಾಟ ವಿಪರೀತವಾಗಿದೆ’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಪಟ್ಟಣ ಪಂಚಾಯಿತಿ ಸಿಬ್ಬಂದಿ ಧ್ವನಿವರ್ಧಕದ ಮೂಲಕ ರಸ್ತೆಗೆ ದನಗಳು ಬಿಡದಂತೆ ಕಾವಲು ಮಾಡಲು ಅನೇಕ ಸಲ ಜನರಿಗೆ ತಿಳಿಹೇಳಿದ್ದಾರೆ. ಆದರೆ ವಾರಸುದಾರರು ಅವುಗಳನ್ನು ಮನೆಗೆ ಕೊಂಡೊಯ್ಯುವಲ್ಲಿ ಆಸಕ್ತಿ ತೋರುತ್ತಿಲ್ಲ. ಹೀಗಾಗಿ ಬಜಾರ್, ಬಸ್ ನಿಲ್ದಾಣ, ಅಂಬೇಡ್ಕರ್ ವೃತ್ತವಲ್ಲದೇ ಹೆದ್ದಾರಿಯ ಎಲ್ಲೆಂದರಲ್ಲಿ ಹಗಲು-ರಾತ್ರಿ ಎನ್ನದೆ ಬಿಡಾಡಿ ದನಗಳು ಕಂಡುಬರುತ್ತಿವೆ.
‘ಬಿಡಾಡಿ ದನಗಳಿಂದ ಸಣ್ಣ ವಾಹನಗಳ ನಿಲುಗಡೆ ಮತ್ತು ಸಂಚಾರಕ್ಕೆ ಮಾರಕವಾಗಿ ಕಾಡುತ್ತಿವೆ. ಅವುಗಳಿಂದ ಎಷ್ಟೊ ಜನರು ಅಪಾಯ ಎದುರಿಸಿದ್ದಾರೆ’ ಎಂದು ಆಟೋ ಮಾಲಿಕ ಶ್ರೀಕಾಂತ ಗುಂಡಮಿ, ಶರಣು ಬಿರಾದಾರ ತಿಳಿಸಿದ್ದಾರೆ.
ಇನ್ನು ಹಂದಿ– ನಾಯಿಗಳ ಹಾವಳಿಯಿಂದ ಚಿಕ್ಕಮಕ್ಕಳು, ಮಹಿಳೆಯರು, ವೃದ್ಧರು, ವಿಕಲಚೇತನರು ಸುಲಭವಾಗಿ ತಿರುಗಾಡಲು ಬಾರದ ಸ್ಥಿತಿ ನಿರ್ಮಾಣವಾಗಿದೆ. ದ್ವಿಚಕ್ರ ವಾಹನಗಳಿಗೆ ತೀವ್ರ ಕಂಟಕವಾಗಿ ಸವಾರರು ನೋವು ಅನುಭವಿಸಿದ್ದಾರೆ. ಆದರೂ ಇವುಗಳ ನಿಯಂತ್ರಣ ಮಾತ್ರ ಶೂನ್ಯವಾಗಿದೆ.
ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶರಣಪ್ಪ ವನಮಾಲಿ, ಶಿವಲೀಲಾ ಅಷ್ಟಗಿ ಅನೇಕರು ಆಗ್ರಹಿಸಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಿಂದಾಗಿ ಸಿಬ್ಬಂದಿಗೆ ಬಿಡುವು ಸಿಗುತ್ತಿಲ್ಲ ನವೆಂಬರ್ ಎರಡನೇ ವಾರದವರೆಗೆ ಬಿಡಾಡಿ ದನ ಹಂದಿ ನಾಯಿಗಳ ನಿಯಂತ್ರಣ ಮಾಡಲಾಗುವುದುಪಂಕಜಾ ಎ. ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಕಾಳಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.