
ಕಲಬುರಗಿ: ‘ಧೂಮಪಾನ, ಮದ್ಯಪಾನ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ತೊಂದರೆ ಸೇರಿ ಮುಂತಾದ ಕಾರಣಗಳಿಂದ ಪಾರ್ಶ್ವವಾಯು ಉಂಟಾಗುತ್ತದೆ. ಅದನ್ನು ತಡೆಯಲು ಮೂಢನಂಬಿಕೆಗಳನ್ನು ಬಿಟ್ಟು ಜಾಗೃತಿ ವಹಿಸಿ ಆಸ್ಪತ್ರೆಗಳಿಗೆ ದಾಖಲಿಸಬೇಕು’ ಎಂದು ಜಿಮ್ಸ್‌ನ ಮನೋರೋಗ ವಿಭಾಗದ ಮುಖ್ಯಸ್ಥ ಡಾ.ಪ್ರಭುಕಿರಣ ಗೋಗಿ ಹೇಳಿದರು.
ಇಲ್ಲಿನ ಜಿಮ್ಸ್ ವೈದ್ಯಕೀಯ ಕಾಲೇಜಿನ ಎರಡನೇ ಮಹಡಿಯಲ್ಲಿನ ಮೈಕ್ರೋ ಬಯೋಲೋಜಿ ಸಭಾಂಗಣದಲ್ಲಿ ಬುಧವಾರ ರಾಷ್ಟ್ರೀಯ ಮಾನಸಿಕ ಹಾಗೂ ನರವಿಜ್ಞಾನ ಸಂಸ್ಥೆ ಬೆಂಗಳೂರು, ಜಿಲ್ಲಾ ಪಂಚಾಯಿತಿ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಮೆದಳು ಆರೋಗ್ಯ ಉಪಕ್ರಮ, ಸರ್ಕಾರಿ ಜಿಲ್ಲಾ ಆಸ್ಪತ್ರೆ ಜಿಮ್ಸ್ ವತಿಯಿಂದ ವಿಶ್ವ ಪಾರ್ಶ್ವವಾಯು ದಿನಾಚರಣೆ ಪಯುಕ್ತ ‘ಪ್ರತಿನಿಮಿಷವೂ ಅಮೂಲ್ಯ’ ಎಂಬ ಘೋಷ ವಾಕ್ಯದ ಅಡಿಯಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಣ್ಣಿನಲ್ಲಿ ದೃಷ್ಟಿ ಬದಲಾವಣೆ, ಮುಖವು ಜೋತುಬಿದ್ದಂತೆ ಕಾಣುವುದು, ಕೈ–ಕಾಲುಗಳ ಚಲನೆಯಲ್ಲಿ ತೊಂದರೆ, ಮಾತಿನಲ್ಲಿ ತೊದಲುವಿಕೆ, ದೃಷ್ಟಿಯಲ್ಲಿ ತೊಂದರೆ, ಚಲಿಸುವಾಗ ಶ್ರಮವಾಗುವುದು, ವಿಪರಿತ ತಲೆನೋವು ಪಾರ್ಶ್ವವಾಯುವಿನ ಪ್ರಮುಖ ಲಕ್ಷಣಗಳಾಗಿವೆ. ಈ ಲಕ್ಷಣಗಳು ಕಂಡು ಬಂದರೆ ರೋಗಿಗಳಿಗೆ ತಕ್ಷಣ ತಜ್ಞ ವೈದ್ಯರ ಭೇಟಿ ಮಾಡಲು ತಿಳಿಸಬೇಕು’ ಎಂದು ಹೇಳಿದರು.
ಜಿಮ್ಸ್ ಆಸ್ಪತ್ರೆಯ ಫಿಜಿಸಿಯೆನ್ ಡಾ.ಸಂತೋಷ ಅಲ್ಲೂರೆ ಮಾತನಾಡಿ, ಪಿಟ್ಸ್ ಹಾಗೂ ಮೆದುಳಿನ ಸಂಬಂಧಿಸಿದ ಸಮಸ್ಯೆಗಳು ಉಂಟಾದಾಗ ಮಾಡಬೇಕಾದ ಉಪಕ್ರಮಗಳ ಬಗ್ಗೆ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿದರು.
ಜಿಮ್ಸ್ ಜಿಲ್ಲಾ ಆಸ್ಪತ್ರೆಯ (ಕಭಿ) ಜಿಲ್ಲಾ ಸಂಯೋಜಕಿ ಶಾಂತಾ ಜಕಾತಿ ಪ್ರಾಸ್ತಾವಿಕವಾಗಿ ಮಾತನಾಡಿ, ನರರೋಗಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ಮೊದಲು ನರರೋಗ ವಿಭಾಗದ ಆಸ್ಪತ್ರೆಗಳಿಗೆ ಭೇಟಿ ನೀಡಬೇಕಿತ್ತು. ಈಗ ಜಿಲ್ಲಾ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಸಿಗುತ್ತಿದೆ. ರೋಗದ ಲಕ್ಷಣಗಳನ್ನು ಕಂಡು ಬಂದರೆ ಆಸ್ಪತ್ರೆಗೆ ಭೇಟಿ ನೀಡಲು ಸಲಹೆ ನೀಡಬೇಕು ಎಂದು ಆಶಾ ಕಾರ್ಯಕರ್ತೆಯರಿಗೆ ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಕ್ರಮ ಸಂಯೋಜಕ (ಗುಣಮಟ್ಟ ಪ್ರಸವಪೂರ್ವ ಆರೈಕೆ) ಗ್ಯಾನಪ್ಪ, ಮಕ್ಕಳ ಕುಷ್ಠರೋಗ ನಿಯಂತ್ರಣದ ಅಧಿಕಾರಿ ಮಹಾಂತೇಶ, ಕಾರ್ಯಕ್ರಮ ಅಧಿಕಾರಿ (ಜೆಪಾಯ್ಗೋ) ಸಬೀರ್ ನದಾಫ್, ಇತರ ಅಧಿಕಾರಿಗಳು ಹಾಗೂ 200ಕ್ಕೂ ಹೆಚ್ಚು ಜನ ಆಶಾ ಕಾರ್ಯಕರ್ತೆಯರು ತರಬೇತಿಯಲ್ಲಿ ಭಾಗವಹಿಸಿದ್ದರು.
ಜಾಗೃತಿ ಮೂಡಿಸಿದ ಜಾಥಾ
ಕಲಬುರಗಿ ಜಿಮ್ಸ್ ಆಸ್ಪತ್ರೆಯ ಆವರಣದಲ್ಲಿ ವಿಶ್ವಪಾರ್ಶ್ವವಾಯು ದಿನಾಚರಣೆ ಪ್ರಯುಕ್ತ ‘ಪ್ರತಿನಿಮಿಷವೂ ಅಮೂಲ್ಯ’ ಎಂಬ ಘೋಷವಾಕ್ಯದಲ್ಲಿ ನಡೆದ ಜಾಗೃತಿ ಜಾಥಾಕ್ಕೆ ಆರೋಗ್ಯ ಇಲಾಖೆಯ ಕಲಬುರಗಿ ವಿಭಾಗೀಯ ಸಹ ನಿರ್ದೇಶಕರ ಕಚೇರಿಯ ಉಪನಿರ್ದೇಶಕರಾದ ಡಾ.ಅಂಬಾರಾಯ ರುದ್ರವಾಡಿ ಡಾ.ಶರಣಪ್ಪ ಗಣಜಲಖೇಡ ಚಾಲನೆ ನೀಡಿದರು. ಜಿಮ್ಸ್ ಆವರಣದ ಮುಂಭಾಗದಿಂದ ಪ್ರಾರಂಭಗೊಂಡ ಜಾಥಾವು ಎಸ್.ಟಿ.ಬಿ.ಟಿ. ಮಾರ್ಗವಾಗಿ ಜಗತ್ ವೃತ್ತ ಅನ್ನಪೂರ್ಣ ಕ್ರಾಸ್ ಮಾರ್ಗವಾಗಿ ಜಿಮ್ಸ್ ಆಸ್ಪತ್ರೆಗೆ ಬಂದು ಕೊನೆಗೊಂಡಿತು. ಈ ವೇಳೆ ಜಿಮ್ಸ್ ಆಸ್ಪತ್ರೆಯ ಅಧೀಕ್ಷಕ ಡಾ.ಓಂಪ್ರಕಾಶ ಅಂಬೂರೆ ಫಿಜಿಸಿಯೆನ್ ಡಾ.ಸಂತೋಷ ಅಲ್ಲೂರೆ ಜಿಲ್ಲಾ ಕುಷ್ಟರೋಗ ಅಧಿಕಾರಿ ಡಾ.ವಿವೇಕಾನಂದ ರೆಡ್ಡಿ ಜಿಲ್ಲಾ ಆಸ್ಪತ್ರೆ ಜಿಮ್ಸ್‌ನ ಜನರಲ್ ಮೆಡಿಸಿನ್ ಡಾ.ದೊಡ್ಡಮನಿ ‘ಕಭಿ’ ಜಿಮ್ಸ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಸಂಯೋಜಕಿ ಶಾಂತಾ ಜಕಾತಿ ಹಾಗೂ ಜಿಮ್ಸ್ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.