
ಜೇವರ್ಗಿ: ತಾಲ್ಲೂಕಿನ ಕಟ್ಟಿಸಂಗಾವಿ ಹತ್ತಿರವಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಪ್ರಸಕ್ತ ವರ್ಷದಿಂದ ಪ್ರಾರಂಭವಾಗಿರುವ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಕಾಡುತ್ತಿದೆ.
ಪಟ್ಟಣದಿಂದ 5 ಕಿ.ಮೀ ದೂರದ ಕಲಬುರಗಿ ರಸ್ತೆಯಲ್ಲಿ ಬರುವ ನರ್ಸಿಂಗ್ ಕಾಲೇಜಿನಲ್ಲಿ ಒಟ್ಟು 60 ವಿದ್ಯಾರ್ಥಿಗಳಿದ್ದಾರೆ. 13 ಸಿಬ್ಬಂದಿ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಲೇಜಿನ ಹತ್ತಿರ ಧರ್ಮಸಿಂಗ್ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಪ್ರವಾಸಿ ಮಂದಿರ, ಕೃಷಿ ವಿಜ್ಞಾನ ಕೇಂದ್ರ, ಕಲ್ಯಾಣ ಮಂಟಪವಿದ್ದು, ನೂರಾರು ಜನ ನಿತ್ಯ ಬಂದು ಹೋಗುತ್ತಾರೆ. ಈ ಮಾರ್ಗದ ಮೂಲಕ ವಿಜಯಪುರದಿಂದ, ಶಹಾಪುರ ಹಾಗೂ ಕಲಬುರಗಿ ನಗರದಿಂದ ನಿತ್ಯ ನೂರಾರು ಬಸ್‌ಗಳು ಸಂಚರಿಸುತ್ತವೆ. ಇಲ್ಲಿ ಬಸ್ ನಿಲ್ಲಿಸದೇ ಇರುವುದರಿಂದ ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗೆ ಬಸ್ ಸಮಸ್ಯೆ ಕಾಡುತ್ತಿದೆ.
ಈ ಕಾಲೇಜಿಗೆ ತೆರಳಲು ಜೇವರ್ಗಿ ಬಸ್ ನಿಲ್ದಾಣಕ್ಕೆ ವಿದ್ಯಾರ್ಥಿಗಳು ಬಂದಾಗ ನಿರ್ವಾಹಕರು ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳದೇ ಕಿರಿಕಿರಿ ಮಾಡುತ್ತಿರುವುದು ಕಂಡುಬಂದಿದೆ. ಒಂದು ವೇಳೆ ಹತ್ತಿಸಿಕೊಂಡರೂ ಕಾಲೇಜು ಬಳಿ ಸ್ಟಾಪ್ ಇಲ್ಲ ಎಂದು ಹೇಳಿ ದೂರದ ಕಟ್ಟಿಸಂಗಾವಿ ಗ್ರಾಮದ ಬಳಿ ಬಸ್ ನಿಲ್ಲಿಸಲಾಗುತ್ತಿದೆ. ಅಲ್ಲಿಂದ ಒಂದು ಕಿ.ಮೀ ದೂರದ ಈ ಕಾಲೇಜಿಗೆ ನಡೆದುಕೊಂಡು ಬರಬೇಕಾದ ಅನಿವಾರ್ಯತೆ ವಿದ್ಯಾರ್ಥಿಗಳಿಗೆ ಎದುರಾಗಿದೆ.
ಬಸ್ ತಡೆ ವಿಚಾರವಾಗಿ ಕಾಲೇಜಿನ ಪ್ರಾಚಾರ್ಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ ನಂತರ ಕಳೆದ ಏ.23, ಸೆ.18 ಮತ್ತು 23ರಂದು ಮೂರು ಬಾರಿ ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ವಿಭಾಗ–2ರವರು ಕಟ್ಟಿಸಂಗಾವಿ ಹತ್ತಿರದ ನರ್ಸಿಂಗ್ ಕಾಲೇಜು ಬಳಿ ಹಾಗೂ ಚಿಕ್ಕಮುದಬಾಳ ಹತ್ತಿರದ ಎಸ್ಆರ್‌ಇ ಇಂಟರ್‌ನ್ಯಾಶನಲ್ ಶಾಲೆ ಬಳಿ ಬೆಳಿಗ್ಗೆ 8ರಿಂದ 11 ಗಂಟೆಯವರೆಗೆ ಹಾಗೂ ಮಧ್ಯಾಹ್ನ 3.30ರಿಂದ ಸಂಜೆ 5 ಗಂಟೆಯವರೆಗೆ ಕೋರಿಕೆ ನಿಲುಗಡೆಗೆ ನಿರ್ದೇಶನ ನೀಡಿ ಜೇವರ್ಗಿ ಘಟಕ ವ್ಯವಸ್ಥಾಪಕರಿಗೆ ಆದೇಶ ಮಾಡಿದ್ದಾರೆ. ಆದರೂ, ಚಾಲಕರು ಹಾಗೂ ನಿರ್ವಾಹಕರು ಅಧಿಕಾರಿಗಳ ಆದೇಶಕ್ಕೂ ಕ್ಯಾರೆ ಅನ್ನುತ್ತಿಲ್ಲ.
ತಾಲ್ಲೂಕಿನ ಚನ್ನೂರ ಬಳಿ ಇರುವ ಆದರ್ಶ ವಿದ್ಯಾಲಯ, ಶಹಾಪುರ ರಸ್ತೆಯಲ್ಲಿರುವ ಡಿಗ್ರಿ ಕಾಲೇಜು, ಸರ್ಕಾರಿ ಐಟಿಐ ಕಾಲೇಜು ಸೇರಿದಂತೆ ಬಹುತೇಕ ಕಡೆ ಶಾಲೆ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ನಿತ್ಯ ಪರದಾಡುವಂತಾಗಿದೆ. ಹತ್ತು ಹಲವು ಸಗರನಾಡು ಹಾಗೂ ವೇಗದೂತ ಬಸ್‌ಗಳು ಖಾಲಿ ಸಂಚರಿಸುತ್ತಿದ್ದರೂ ವಿದ್ಯಾರ್ಥಿಗಳಿಗೆ ಬಸ್ ಹತ್ತಲು ಅನುಮತಿ ನೀಡುವುದಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೂಕ್ತ ಬಸ್ ವ್ಯವಸ್ಥೆ ಇಲ್ಲದಿರುವುದುರಿಂದ ನಿತ್ಯ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಸಿಬ್ಬಂದಿಗೆ ತೊಂದರೆಯಾಗುತ್ತಿದೆ. ಇಲಾಖೆಯ ಮೇಲಧಿಕಾರಿಗಳು ಆದೇಶ ಮಾಡಿದರೂ ಬಸ್ ನಿಲ್ಲಿಸುತ್ತಿಲ್ಲ-ಸ್ವಾತಿ ಪೌಲ್, ಪ್ರಾಂಶುಪಾಲೆ ನರ್ಸಿಂಗ್ ಕಾಲೇಜು ಜೇವರ್ಗಿ
ಬಸ್ ನಿಲ್ದಾಣದ ಮೇಲ್ವಿಚಾರಕರಿಗೆ ಸೂಚನೆ ನೀಡುವ ಮೂಲಕ ಬಸ್ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು-ಜೆಟ್ಟೆಪ್ಪ ದೊಡ್ಡಮನಿ, ವ್ಯವಸ್ಥಾಪಕರು ಬಸ್ ಘಟಕ ಜೇವರ್ಗಿ