ಕಲಬುರಗಿ: ಅವರೆಲ್ಲ ಶ್ರದ್ಧೆಯಿಂದ ಓದಿದ ವಿದ್ಯಾರ್ಥಿಗಳು. ಪರೀಕ್ಷೆಗಳಲ್ಲಿ ಕಾಲೇಜಿಗೆ ಅಗ್ರಸ್ಥಾನ ಪಡೆದ ಖುಷಿ ಅವರದು. ಅವರ ಶ್ರಮದ ಬೆವರಿಗೆ ಸನ್ಮಾನದ ಪುಳಕ. ನೂರಾರು ಮಕ್ಕಳ ನಡುವೆ ಅವರನ್ನು ಬ್ಯಾಂಡ್‌ಬಾಜಾದೊಂದಿಗೆ ಎನ್‌ಸಿಸಿ ಕೆಡೆಟ್‌ಗಳು ಗೌರವದಿಂದ ಸ್ವಾಗತಿಸಿದರು. ನೆರೆದಿದ್ದವರೆಲ್ಲ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವಿಸಿದರು. ಸಾಧಕರು ಹೆಮ್ಮೆಯಿಂದ ಪ್ರೋತ್ಸಾಹದ ಪುಳಕದಲ್ಲಿ ಮಿಂದಿದ್ದೆದ್ದರು...
ಇವು ನಗರದ ಅಪ್ಪಾ ಪಬ್ಲಿಕ್ ಶಾಲೆಯ ‘ಬಸವರಾಜಪ್ಪ ಅಪ್ಪ ಸೆಂಟೆನರಿ ಸಭಾಂಗಣ’ದಲ್ಲಿ ಭಾನುವಾರ ನಡೆದ ‘ಎಸ್‌ಬಿಆರ್ ಮಿನಿ ಘಟಿಕೋತ್ಸವ’ದಲ್ಲಿ ಕಂಡು ಬಂದ ಅಪೂರ್ವ ಕ್ಷಣಗಳು.
2025ನೇ ಶೈಕ್ಷಣಿಕ ಸಾಲಿನ ನೀಟ್, ಜೆಇಇ, ಕೆ–ಸಿಇಟಿ ಹಾಗೂ ದ್ವಿತೀಯ ಪಿಯುಸಿ ಲಿಖಿತ ಪರೀಕ್ಷೆಯಲ್ಲಿ ಉತ್ಕೃಷ್ಟ ರ‍್ಯಾಂಕ್ ಪಡೆದ ಪ್ರತಿಭಾನ್ವಿತರಿಗೆ ನಗದು ಬಹುಮಾನ ಕೊಟ್ಟು ಗೌರವಿಸಲಾಯಿತು. ಒಟ್ಟು 14 ಸಾಧಕ ವಿದ್ಯಾರ್ಥಿಗಳಿಗೆ ₹3.5 ಲಕ್ಷ ಬಹುಮಾನ ವಿತರಿಸಲಾಯಿತು. 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.
ನೀಟ್ ಸಾಧಕರು: ನೀಟ್ ಪರೀಕ್ಷೆಯಲ್ಲಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಕ್ಕಾಗಿ ಕೋರಿಯನ್ ಫಾತಿಮಾ ಅವರಿಗೆ ₹1 ಲಕ್ಷ ನಗದು ಬಹುಮಾನ, ದ್ವಿತೀಯ ಸ್ಥಾನ ಪಡೆದ ಶ್ರೀನಿಥಿ ನೀಲಿ ಅವರಿಗೆ ₹50 ಸಾವಿರ ಬಹುಮಾನ, ಮೂರನೇ ಸ್ಥಾನ ಪಡೆದ ವೇಮಾ ರೆಡ್ಡಿ ಅವರಿಗೆ ₹25 ಸಾವಿರ ನಗದು ಬಹುಮಾನ ಹಾಗೂ ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಜೆಇಇ ಸಾಧಕರು: ಜೆಇಇ ಪರೀಕ್ಷೆಯಲ್ಲಿ ಸಾಧಕರಾದ ಶಶಿಧರ ಬೀರಪ್ಪ ಪರವಾಗಿ ತಾಯಿ ಅಂಬಿಕಾ ಅವರಿಗೆ ₹50 ಸಾವಿರ ನಗದು, ವಿನಾಯಕ ದೊರೆ ಅವರಿಗೆ ₹25 ಸಾವಿರ ನಗದು, ಸದಾನಂದ ಲಕ್ಷ್ಮಣ ಪರವಾಗಿ ತಾಯಿ ನಜುಬಾಯಿ ಅವರಿಗೆ ₹10 ಸಾವಿರ ನಗದು ಪುರಸ್ಕಾರ ಪ್ರದಾನ ಮಾಡಲಾಯಿತು. ಮುಂಬೈ ಐಐಟಿಗೆ ಪ್ರವೇಶಾತಿ ಗಿಟ್ಟಿಸಿರುವ ಸೋಹಂ ಬುಕ್ಕಾ ಪರವಾಗಿ ಅವರ ತಾಯಿ ಕನ್ಯಾಕುಮಾರಿ ಅವರಿಗೆ ಪ್ರೊ. ಎಸ್.ಬಿ.ಪತಂಗೆ ಸ್ಮರಣಾರ್ಥ ₹50 ಸಾವಿರ ನಗದು ನೀಡಿ ಗೌರವಿಸಲಾಯಿತು. ಸೂರತ್ಕಲ್ ಎನ್‌ಐಟಿಗೆ ಪ್ರವೇಶಾತಿ ಪಡೆದ ಅನಿಕೇತ ಮೂಲಗೆ ಅವರಿಗೆ ಎಸ್.ಬಿ.ಬಿರಾದಾರ ಸ್ಮರಣಾರ್ಥ ₹5 ಸಾವಿರ ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.
ಕೆ–ಸಿಇಟಿ ಸಾಧಕರು: ಕೆ–ಸಿಇಟಿಯಲ್ಲಿ ಉತ್ತಮ ಸಾಧನೆ ತೋರಿದ ಕೋರಿಯನ್ ಫಾತಿಮಾ ಅವರಿಗೆ ₹25 ಸಾವಿರ ನಗದು ಪುರಸ್ಕಾರ ನೀಡಲಾಯಿತು. ವಿನಾಯಕ ದೊರೆ ಅವರಿಗೆ ₹10 ಸಾವಿರ ನಗದು ಹಾಗೂ ಪ್ರಥಮೇಶ ಮಹಾಜನ್ ಅವರಿಗೆ ₹5 ಸಾವಿರ ನಗದು ನೀಡಿ ಸನ್ಮಾನಿಸಲಾಯಿತು.
ದ್ವಿತೀಯ ಪಿಯು ವಿಜ್ಞಾನ ಸಾಧಕರು: ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಶಿವಾನಿ ಜಗನ್ನಾಥ ಅವರಿಗೆ ₹10 ಸಾವಿರ, ದ್ವಿತೀಯ ಸ್ಥಾನ ಪಡೆದ ನವಮಿ ಪಲ್ಲೇದ ಅವರಿಗೆ ₹10 ಸಾವಿರ, ಕೋರಿಯನ್ ಫಾತಿಮಾ ಅವರಿಗೆ ₹5 ಸಾವಿರ, ಸೌಮಶ್ರೀ ನಾಗಲೋಟ ಅವರಿಗೆ ₹3 ಸಾವಿರ ನಗದು ಬಹುಮಾನ ನೀಡಿ ಗೌರವಿಸಲಾಯಿತು.
ಹಿಂದಿ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶ್ರೀಶೈಲ ಹೊಗಾಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಣಮಂತ ಪಿ.ಜಿ. ವಂದಿಸಿದರು. ರಾಮಕೃಷ್ಣ ರೆಡ್ಡಿ ಇದ್ದರು.
ಸನ್ಮಾನಿತ ವಿದ್ಯಾರ್ಥಿಗಳಾದ ಅನುಷ್ಕಾ ಆನಂದಕುಮಾರ್, ಸೋಹಂ ಬುಕ್ಕ, ಸದಾನಂದ ಜಾಧವ್, ಮೊಹಮ್ಮದ್ ಆತಿಫ್ ಅಹ್ಮದ್, ಶಶಿಧರ್ ಬೀರಪ್ಪ, ಕೋರಿಯನ್ ಫಾತಿಮಾ ಹಾಗೂ ಪಾಲಕರು ತಮ್ಮ ಅನುಭವಗಳನ್ನು ಹಂಚಿಕೊಂಡರು.
‘ಶೈಕ್ಷಣಿಕ ಕ್ರಾಂತಿಗೈದ ಶರಣಬಸವಪ್ಪ ಅಪ್ಪ’
‘ಕಲ್ಯಾಣ ಕರ್ನಾಟಕದ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಕೀರ್ತಿ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ ಅವರಿಗೆ ಸಲ್ಲುತ್ತದೆ. ಅವರು 50–60 ವರ್ಷಗಳ ಹಿಂದೆ ಆರಂಭಿಸಿದ ಶಿಕ್ಷಣ ಸಂಸ್ಥೆಗಳು ಇಂದು ಹೆಮ್ಮರವಾಗಿ ಬೆಳೆದು ಫಲ ನೀಡುತ್ತಿವೆ’ ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪುರಸ್ಕಾರ ಪ್ರದಾನ ಮಾಡಿ ಮಾತನಾಡಿದ ಅವರು ‘ದೀಪ ತನ್ನನ್ನು ತಾನು ಸುಟ್ಟುಕೊಂಡು ಬೆಳಕು ನೀಡುವಂತೆ ಅಪ್ಪ ಅವರು ಕಷ್ಟಪಟ್ಟು ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದಾರೆ. ಅವರು ಶಿಕ್ಷಣ ಪ್ರೇಮಿಗಳಿಗೆ ಮಾದರಿ’ ಎಂದರು. ‘ಇದು ಸ್ಪರ್ಧಾತ್ಮಕ ಯುಗ. ಸ್ಪರ್ಧೆ ಇದ್ದಾಗಲೇ ನಮ್ಮಲ್ಲಿನ ಪ್ರತಿಭೆ ಹೊರಬರಲು ಸಾಧ್ಯ. ಹೀಗಾಗಿ ಸಾಧಕ ವಿದ್ಯಾರ್ಥಿಗಳು ನಿಗದಿತ ಗುರಿ ಇಟ್ಟುಕೊಂಡು ಉನ್ನತ ಸ್ಥಾನಕ್ಕೇರಿ ಸಮಾಜಕ್ಕೆ ಕೊಡುಗೆ ನೀಡಬೇಕು’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.