ADVERTISEMENT

ಕಲಬುರಗಿ: ಹೆದ್ದಾರಿ ತಡೆದು ವಿದ್ಯಾರ್ಥಿಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2025, 4:04 IST
Last Updated 27 ಜುಲೈ 2025, 4:04 IST
ಜೇವರ್ಗಿ : ತಾಲ್ಲೂಕಿನ ಮಂದೇವಾಲ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಜೇವರ್ಗಿ : ತಾಲ್ಲೂಕಿನ ಮಂದೇವಾಲ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹತ್ತಿರದ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.   

ಜೇವರ್ಗಿ: ಶಾಲಾ ಕೋಣೆಗಳ ದುರಸ್ತಿ ಮಾಡುವಂತೆ ಒತ್ತಾಯಿಸಿ ಶನಿವಾರ ತಾಲ್ಲೂಕಿನ ಮಂದೇವಾಲ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮಕ್ಕಳು ತರಗತಿ ಬಹಿಷ್ಕರಿಸಿ ಜೇವರ್ಗಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ-50 ತಡೆದು ಪ್ರತಿಭಟನೆ ನಡೆಸಿದರು.

ಕಳೆದ ಅನೇಕ ದಿನಗಳಿಂದ ಶಾಲಾ ಕಟ್ಟಡ ಶಿಥಿಲಗೊಂಡು ಮೇಲ್ಛಾವಣಿಯ ಪದರು ಉದುರಿ ಬೀಳುತ್ತಿದೆ. ಜೀವ ಭಯದಲ್ಲಿ ಮಕ್ಕಳು ಹಾಗೂ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪೋಷಕರು ಆತಂಕದಲ್ಲಿಯೇ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಸಂಬಂಧಪಟ್ಟವರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಶಾಲಾ ಕೋಣೆಗಳ ದುರಸ್ತಿ ಜತೆಗೆ 15 ಹೊಸ ಕೋಣೆಗಳ ಮಂಜೂರು ಮಾಡಬೇಕು. ಶಾಲೆಯ ಕಟ್ಟಡದ 200×300 ಅಳತೆಯ ನಿವೇಶನ ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡಬೇಕು. ಶಾಲೆಯ ಸುತ್ತ ಕಂಪೌಂಡ್‌ ಗೋಡೆ ನಿರ್ಮಾಣ ಮಾಡಬೇಕು. ಶಾಲೆಯ ಪಕ್ಕದಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದ ನಿವೇಶನ ಕೂಡ ರಾಜ್ಯಪಾಲರ ಹೆಸರಿಗೆ ನೋಂದಣಿ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಮಲ್ಲಣ್ಣ ಯಲಗೋಡ, ಕ್ಷೇತ್ರ ಶಿಕ್ಷಣಾಧಿಕಾರಿ ವೀರಣ್ಣ ಬೊಮ್ಮನಹಳ್ಳಿ, ನೆಲೋಗಿ ಪಿಎಸ್‌ಐ ಚಿದಾನಂದ ಸವದಿ, ಬೇಡಿಕೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ವಾರದೊಳಗೆ ಬೇಡಿಕೆ ಈಡೇರಿಸುವ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ADVERTISEMENT

ಪ್ರತಿಭಟನೆಯಲ್ಲಿ ಗ್ರಾ.ಪಂ ಅಧ್ಯಕ್ಷ ವಿನೋದ ಪವಾರ, ಗ್ರಾಮದ ಪ್ರಮುಖರಾದ ಭೀಮರಾಯ ಸಾಹು ಕನ್ನೊಳ್ಳಿ, ಭೀಮರಾಯ ಹುಡೇದಮನಿ, ನಿಂಗಣ್ಣ ಸಾಹು ಚಿಟಗಿ, ಹುಲ್ಲೆಪ್ಪ ಲಂಗೋಟಿ, ಗುರುಪಾದ ಬಳ್ಳುಂಡಗಿ, ಶ್ರೀಶೈಲ ಬುಟ್ನಾಳ, ಸುರೇಶ ರಾಠೋಡ, ಹಣಮಂತ ಗೌಂಡಿ, ಸೋಮಲಿಂಗ ಗುಜಗೊಂಡ, ಸಿದ್ದರಾಯ ಗಬಸಾವಳಗಿ, ಸಿದ್ದು ಕಣ್ಣಿ, ಶಾಂತಪ್ಪ ಮದರಿ, ದಲಿತ ಸೇನೆ ಅಧ್ಯಕ್ಷ ಶಿವಶರಣ, ಶರಣು ಲಂಗೋಟಿ, ರಮೇಶ್ ಮಂಜುಳಕರ್, ಮಲ್ಕಪ್ಪ ಕುನ್ನೂರ, ಚೇತನ ಬುಟ್ನಾಳ, ಜೈಭೀಮ ನೇರಡಗಿ ಸೇರಿದಂತೆ ಗ್ರಾಮಸ್ಥರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.