ADVERTISEMENT

ಯುವಜನ ಆಯೋಗ ಸ್ಥಾಪನೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 11:58 IST
Last Updated 29 ಜನವರಿ 2019, 11:58 IST
ಯುವಜನ ಆಯೋಗ ಸ್ಥಾಪಿಸುವಂತೆ ಒತ್ತಾಯಿಸಿ ಕಾಲೇಜು ವಿದ್ಯಾರ್ಥಿನಿಯರು ಫಲಕಗಳನ್ನು ಪ್ರದರ್ಶಿಸಿದರು
ಯುವಜನ ಆಯೋಗ ಸ್ಥಾಪಿಸುವಂತೆ ಒತ್ತಾಯಿಸಿ ಕಾಲೇಜು ವಿದ್ಯಾರ್ಥಿನಿಯರು ಫಲಕಗಳನ್ನು ಪ್ರದರ್ಶಿಸಿದರು   

ಕಲಬುರ್ಗಿ: ‘ಕರ್ನಾಟಕ ರಾಜ್ಯ ಯುವಜನ ಆಯೋಗವನ್ನು ಸ್ಥಾಪನೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕು’ ಎಂದು ಸಂವಾದ ಯುವ ಸಂಪನ್ಮೂಲ ಸಂಸ್ಥೆ ಸಂಚಾಲಕಿ ರುಕ್ಮಿಣಿ ನಾಗಣ್ಣವರ ಹೇಳಿದರು.

ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಜಾಗೃತಿ ಅಭಿಯಾನದಲ್ಲಿ ಅವರು ಮಾತನಾಡಿದರು.

‘ಮಕ್ಕಳು, ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ವಿಶೇಷ ಹಕ್ಕುಗಳಿವೆ. ಆದರೆ, ರಾಜ್ಯದಲ್ಲಿರುವ 36 ಕೋಟಿ ಯುವಜನರಿಗೆ ಹಕ್ಕುಗಳಿಲ್ಲ. ಹಾಗಾಗಿ ಸರ್ಕಾರ ಯುವಜನರ ಹಕ್ಕುಗಳನ್ನು ಘೋಷಣೆ ಮಾಡಬೇಕು. ಯುವಜನರ ಹಕ್ಕುಗಳ ರಕ್ಷಣೆ, ಶಿಕ್ಷಣ ಮತ್ತು ಸಬಲೀಕರಣಕ್ಕೆ ಆದ್ಯತೆ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಸಂಚಾಲಕ ಶ್ರೀಮಂತ ಯನಗುಂಟಿ ಮಾತನಾಡಿ, ‘ಇಂದಿನ ಯುವಜನರು ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಲವಾರು ಒತ್ತಡಗಳನ್ನು ಎದುರಿಸುತ್ತಿದ್ದಾರೆ. ಶಿಕ್ಷಣಕ್ಕೆ ತಕ್ಕ ಕೆಲಸ, ಕೆಲಸಕ್ಕೆ ತಕ್ಕ ಸಂಬಳ ಸಿಗುತ್ತಿಲ್ಲ. ಕೆಲಸದ ಜಾಗದಲ್ಲಿ ಜಾತಿ, ಧರ್ಮ, ವರ್ಗದ ಕಾರಣಕ್ಕೆ ಅನ್ಯಾಯಕ್ಕೆ ಒಳಗಾಗುತ್ತಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರ ಸ್ಥಿತಿ ಇನ್ನೂ ಶೋಚನೀಯವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಾದದ ಒಡನಾಡಿ ಮಹೇಶಕುಮಾರ ಕುಮ್ಶಿ ಮಾತನಾಡಿ, ‘ಫೆಬ್ರುವರಿ 9ರಂದು ಬೆಳಿಗ್ಗೆ 11 ರಿಂದ12 ಗಂಟೆಯವರೆಗೆ ರಾಜ್ಯದಾದ್ಯಂತ ‘ಯುವ ಸಮಯ’ವನ್ನು ಆಚರಿಸಲಾಗುತ್ತಿದೆ. ಇದರಲ್ಲಿ ಯುವಜನರ ಹಕ್ಕುಗಳ ಪರವಾಗಿರುವ ಮತ್ತು ಯುವಜನ ಆಯೋಗ ಸ್ಥಾಪನೆಗೆ ಸಂಬಂಧಿಸಿದ ಹಾಡು, ಕುಣಿತ, ಚಿತ್ರಕಲೆ ಪ್ರದರ್ಶನ ಮತ್ತು ಇತರ ಸೃಜನಶೀಲ ಚಟುವಟಿಕೆಗಳು ನಡೆಯಲಿವೆ. ಫೆಬ್ರುವರಿ 18ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಯುವಜನರ ಹಕ್ಕಿನ ಮೇಳ’ದಲ್ಲಿ ಎಲ್ಲಾ ಯುವಕರು ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ಕಾಲೇಜಿನ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯದರ್ಶಿ ಮೀನಾಕ್ಷಿ, ಸಂವಾದ ಒಡನಾಡಿಗಳಾದ ಸಿದ್ಧಾರ್ಥ, ಸುನಿಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.