ಕಲಬುರಗಿಯಲ್ಲಿ ಭಾನುವಾರ ನಡೆದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿದರು
ಪ್ರಜಾವಾಣಿ ಚಿತ್ರ
ಕಲಬುರಗಿ: ‘ಜೀವನದಲ್ಲಿ ಕಠಿಣ ಶ್ರಮ ಮತ್ತು ಸರಿಯಾದ ಯೋಜನೆ ಇದ್ದಲ್ಲಿ ಯಶಸ್ಸು ಗಳಿಸಲು ಸಾಧ್ಯ’ ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ. ಹೇಳಿದರು.
ನಗರದ ಪತ್ರಿಕಾ ಭವನದ ಸಾಂಸ್ಕೃತಿಕ ಸಭಾಂಗಣದಲ್ಲಿ ಭಾನುವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಆಯೋಜಿಸಿದ್ದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಾನು 10ನೇ ತರಗತಿಯಲ್ಲಿ ನಿಮ್ಮಂತೆ 80, 90 ಪರ್ಸೆಂಟೇಜ್ ಅಂಕ ತೆಗೆಯಲಿಲ್ಲ. ಕೇವಲ 72 ಪರ್ಸೆಂಟೇಜ್ ತೆಗೆದಿದ್ದೆ. ಪದವಿ ಹಂತದ ಬಳಿಕ 85 ಪರ್ಸೆಂಟೇಜ್‌ಗಿಂತ ಕಡಿಮೆ ಅಂಕಪಡೆಯಲಿಲ್ಲ. 2006ರಲ್ಲಿ ಯುಪಿಎಸ್‌ಸಿ ಕನಸು ಕಂಡು 2009ರಲ್ಲಿ ಅದನ್ನು ನನಸು ಮಾಡಿಕೊಂಡಿದ್ದೇನೆ. ನಮ್ಮ ಬದುಕಿನ ದಿಕ್ಕನ್ನು ಯಾವ ಹಂತದಲ್ಲಿಯಾದರೂ ನಿರ್ಧಾರ ಮಾಡಿದರೆ ಅದರ ದಾರಿ ಬದಲಾಯಿಸಿ ಯಶಸ್ಸು ಗಳಿಸಬಹುದು. ಆ ದಾರಿಯಲ್ಲಿ ಕಠಿಣ ಶ್ರಮ ಹಾಗೂ ಸರಿಯಾದ ಯೋಜನೆ ಇರಬೇಕು’ ಎಂದು ಸಲಹೆ ನೀಡಿದರು.
‘ಸಮಾಜದಲ್ಲಿ ಸೇವೆ, ಸತ್ಯ ಮತ್ತು ನಿಷ್ಠೆಯಿಂದ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಪೊಲೀಸರು ಮತ್ತು ಪತ್ರಕರ್ತರು ಜತೆಯಾಗಿ ಕೆಲಸ ಮಾಡುತ್ತಿದ್ದಾರೆ. ನಮ್ಮ ವೃತ್ತಿ ಒಂದೇ ತರಹವಾಗಿದ್ದು, 24x7 ಯಾವುದೇ ಸಮಯದಲ್ಲಿ ಕರ್ತವ್ಯಕ್ಕೆ ಸಿದ್ಧರಾಗಿ ಇರುತ್ತೇವೆ’ ಎಂದರು.
‘ಪ್ರತಿಭೆ ಎಂದರೆ ಕೇವಲ ಅಂಕ ಗಳಿಸುವುದಲ್ಲ; ಕ್ರೀಡೆ, ವ್ಯಕ್ತಿತ್ವ ನಿರ್ಮಾಣ, ಚಾರಿತ್ರ್ಯ, ಧೈರ್ಯದಂತಹ ಸಮಗ್ರ ಗುಣಗಳೂ ಇರಬೇಕು. ಮಕ್ಕಳಿಗೆ ಜಗತ್ತು, ಸಮಾಜ, ಅದರಲ್ಲಿ ಮುಖ್ಯವಾಗಿ ಸೋಲು ಮತ್ತು ಎದುರಾಗುವ ಅಡೆತಡೆಗಳನ್ನು ಎದುರಿಸುವುದನ್ನು ಕಲಿಸಬೇಕು. ಒಳ್ಳೆಯ ಶಿಕ್ಷಣ ಕೊಡಿಸಿ, ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡಬೇಕು. ಪೋಷಕರು ದಿನದಲ್ಲಿ ಒಂದೆರಡು ಗಂಟೆಯಾದರೂ ಮಕ್ಕಳೊಂದಿಗೆ ಕಳೆಯಬೇಕು’ ಎಂದು ಹೇಳಿದರು.
ಐಎಫ್‌ಡಬ್ಲ್ಯುಜೆ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ‘ಎ.ಪಿ.ಜೆ ಅಬ್ದುಲ್ ಕಲಾಂ ಅವರು ತಮ್ಮ ಜೀವನದ ಉದ್ದಕ್ಕೂ ಕಾಯಕ ನಿಷ್ಠೆ ಮತ್ತು ವೃತ್ತಿ ಧರ್ಮ ಪಾಲಿಸಿಕೊಂಡು ಬಂದಿದ್ದರಿಂದಾಗಿಯೇ ರಾಷ್ಟ್ರಪತಿ ಅಂತಹ ಅತ್ಯುನ್ನತವಾದ ಹುದ್ದೆಯನ್ನು ಅಲಂಕರಿಸಿದ್ದರು. ಮಕ್ಕಳು ಸಹ ಅವರಂತೆ ಕಾಯಕ ನಿಷ್ಠೆ ಮತ್ತು ವೃತ್ತಿ ಧರ್ಮ ಪಾಲಿಸಬೇಕು’ ಎಂದರು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ನಗದು, ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು. ವಿವಿಧ ಪ್ರಶಸ್ತಿಗಳಿಗೆ ಪುರಸ್ಕೃತರಾದ ಶರಣಬಸಪ್ಪ ಜಿಡಗಾ, ಸತೀಶ ಜೇವರ್ಗಿ, ಗುರುರಾಜ ಕುಲಕರ್ಣಿ, ಡಿ. ಶಿವಲಿಂಗಪ್ಪ, ಸುಭಾಷ ಬಣಗಾರ, ಸೂರ್ಯಕಾಂತ ಜಮಾದಾರ, ಅರುಣ ಕದಮ್, ಪ್ರಭುಲಿಂಗ ನೀಲೂರೆ, ಪ್ರಭು ಅಡವಿಹಾಳ, ಶಕೀಲ್ ಚೌಧರಿ ಹಾಗೂ ಅತ್ಯುತ್ತಮ ತಾಲ್ಲೂಕು ಸಂಘ ಪ್ರಶಸ್ತಿ ಪಡೆದ ಸೇಡಂ ತಾಲ್ಲೂಕು ಪದಾಧಿಕಾರಿಗಳನ್ನು ಸಹ ಸನ್ಮಾನ ಮಾಡಲಾಯಿತು.
ಸಂಘದ ರಾಜ್ಯ ಅಧ್ಯಕ್ಷ ಶಿವಾನಂದ ತಗಡೂರು, ಉಪಾಧ್ಯಕ್ಷ ಭವಾನಿ ಸಿಂಗ್ ಠಾಕೂರ, ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ, ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ಶಿವರಂಜನ ಸತ್ಯಂಪೇಟ, ಮಾಧ್ಯಮ ಅಕಾಡೆಮಿಯ ಮಾಜಿ ಸದಸ್ಯ ದೇವಿಂದ್ರಪ್ಪ ಕಪನೂರ, ಪ್ರೊ. ಸುಜಾತಾ ಪಿ.ಲಗಳಿ ಸೇರಿ ಹಲವರು ಪಾಲ್ಗೊಂಡಿದ್ದರು.
ಬಾಬುರಾವ್ ಕೋಬಾಳ ಪ್ರಾರ್ಥನೆ ಗೀತೆ ಹಾಡಿದರು. ಸಂಗಮನಾಥ ರೇವತಗಾಂವ ಸ್ವಾಗತಿಸಿದರು. ಸುರೇಶ ಬಡಿಗೇರ ನಿರೂಪಿಸಿದರು.
‘ಜುಲೈ ತಿಂಗಳ ಅಂತ್ಯದಲ್ಲಿ ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ಆಗಸ್ಟ್ 14, 15ರಲ್ಲಿ ಪತ್ರಕರ್ತರ ಸಮ್ಮೇಳನ ಮಾಡಲಾಗುವುದು’ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಬಾಬುರಾವ ಯಡ್ರಾಮಿ ಹೇಳಿದರು.
‘ಗ್ರಾಮೀಣ ಭಾಗದ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಲಾಗಿದೆ. ಮಾಧ್ಯಮ ಸಂಜೀವಿನಿ ಯೋಜನೆ ಮೂಲಕ ₹ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಕೊಡಿಸುವಲ್ಲಿಯೂ ಸಂಘ ಸಫಲವಾಗಿದೆ. ಕಳೆದ ಮೂರು ವರ್ಷದಲ್ಲಿ 5 ತಾಲ್ಲೂಕು ಕೇಂದ್ರಗಳಲ್ಲಿ ಪತ್ರಕರ್ತರ ಭವನ ನಿರ್ಮಾಣ ಮಾಡಲಾಗಿದೆ’ ಎಂದರು.
ನಮ್ಮಲ್ಲಿ ಏನೇ ಭಿನ್ನಾಭಿಪ್ರಾಯಗಳು ಇದ್ದರು ಅವುಗಳನ್ನು ಬಿಟ್ಟು ಒಂದಾಗಿ ಕೆಲಸ ಮಾಡಬೇಕು. ಅಧಿಕಾರಕ್ಕಾಗಿ ಬೆನ್ನು ಹತ್ತದೆ, ಅಧಿಕಾರವೇ ನಮ್ಮನ್ನು ಹುಡುಕಿಕೊಂಡು ಬರುವಂತೆ ಕಾಯಕದಲ್ಲಿ ತೊಡಗಬೇಕುಬಿ.ವಿ. ಮಲ್ಲಿಕಾರ್ಜುನಯ್ಯಐಎಫ್‌ಡಬ್ಲ್ಯುಜೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.