ADVERTISEMENT

ಬೆಲೆ ಏರಿಕೆ, ನಿರುದ್ಯೋಗ ಖಂಡಿಸಿ ಜು 4ರಂದು ಪ್ರತಿಭಟನೆ

ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್‌.ವಿ. ದಿವಾಕರ ಪತ್ರಿಕಾಗೋಷ್ಠಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2022, 13:10 IST
Last Updated 29 ಜೂನ್ 2022, 13:10 IST
ಎಚ್.ವಿ. ದಿವಾಕರ
ಎಚ್.ವಿ. ದಿವಾಕರ   

ಕಲಬುರಗಿ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದುರಾಡಳಿತದಿಂದಾಗಿ ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ದವಸ ಧಾನ್ಯಗಳು, ಔಷಧಿಗಳು, ಕಟ್ಟಡ ಸಾಮಾಗ್ರಿಗಳು, ಪೇಪರ್ ದರ, ವಿದ್ಯುತ್ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಬೆಲೆಗಳು ಏರಿಕೆಯಾಗಿದೆ. ಕೂಡಲೇ ಬೆಲೆಗಳನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿ ಜುಲೈ 4ರಂದು ಜಿಲ್ಲಾ ಮಟ್ಟದ ಪ್ರತಿಭಟನೆ ಆಯೋಜಿಸಲಾಗಿದೆ’ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್‌ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್‌.ವಿ. ದಿವಾಕರ ಒತ್ತಾಯಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉಕ್ರೇನ್–ರಷ್ಯಾ ಯುದ್ದದ ನೆಪವೊಡ್ಡಿ ಜನರನ್ನು ಲೂಟಿ ಹೊಡೆಯಲಾಗುತ್ತಿದೆ. ರಷ್ಯಾದಿಂದ ಬ್ಯಾರಲ್‌ಗೆ 40 ಡಾಲರ್ ಕಡಿಮೆ ದರದಲ್ಲಿ ಕಚ್ಚಾ ತೈಲ ಖರೀದಿ ಮಾಡಿದರೂ ಅದರ ಲಾಭ ಅಂಬಾನಿಯ ರಿಲಯನ್ಸ್‌ನಂತಹ ಖಾಸಗಿ ತೈಲ ಕಂಪನಿಗಳ ಪಾಲಾಗುತ್ತಿದೆ. ಜನರ ಕಣ್ಣೊರೆಸಲು ಪುಡಿಗಾಸಿನ ತೆರಿಗೆ ಕಡಿತ ಮಾಡಿ ತಾನು ಜನಪರ ಎಂದು ತೋರಿಸಿಕೊಳ್ಳಲು ಸರ್ಕಾರದ ಕುತಂತ್ರ ನೀತಿ ನಾಚಿಕೆಗೇಡು’ ಎಂದರು.

‘ಜಾಗತೀಕರಣ ನೀತಿಗಳು ಜಾರಿಯಾದಾಗಿನಿಂದ ಇಲ್ಲಿಯವರೆಗೂ ಆಳಿರುವ ಎಲ್ಲಾ ರಾಜಕೀಯ ಪಕ್ಷಗಳು ಜನವಿರೋಧಿ ನೀತಿಗಳನ್ನೇ ಜಾರಿಗೆ ತಂದಿವೆ. ಕಾಂಗ್ರೆಸ್ ಪಕ್ಷದ ದುರಾಡಳಿತ, ಮಿತಿಮಿರಿದ ಭ್ರಷ್ಟಾಚಾರ, ಬೆಲೆಏರಿಕೆ ಮುಂತಾದವುಗಳು ಜನರನ್ನು ಜರ್ಝರಿತಗೊಳಿಸಿದ್ದವು. ಇದಕ್ಕೆ ಪರ್ಯಾಯವೆಂಬಂತೆ ಬಿಜೆಪಿ ‘ಅಚ್ಚೇ ದಿನ’ಗಳನ್ನು ತರುತ್ತೇವೆಂದು ಸುಳ್ಳು ಸುಳ್ಳು ಭರವಸೆಗಳನ್ನು ಪುಂಖಾನುಪುಂಖವಾಗಿ ಊದುತ್ತಾ ಅಧಿಕಾರದ ಗದ್ದುಗೆ ಹಿಡಿಯಿತು. ಆದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರವು ಹಿಂದಿನ ಸರ್ಕಾರಗಳು ನಡೆಸಿದಕ್ಕಿಂತ ಹೆಚು ಪಟ್ಟು ದುರಾಡಳಿತವನ್ನು ನಡೆಸುತ್ತಿದೆ. ಅದರಿಂದಾಗಿ ತೀವ್ರ ಸ್ವರೂಪದ ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಾಗಿದೆ’ ಎಂದು ಹೇಳಿದರು.

ADVERTISEMENT

‘ದಿನನಿತ್ಯ ಒಂದಲ್ಲ ಒಂದು ಕೋಮುಭಾವನೆ ಕೆರಳಿಸುವ ವಿವಾದಗಳನ್ನು ಮುನ್ನೆಲೆಗೆ ತರಲಾಗುತ್ತಿದೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವೇ ಗೋಹತ್ಯೆ, ಹಿಜಾಬ್ ವಿಷಯ ಹಾಗೂ ಪಠ್ಯಪುಸ್ತಕಗಳ ತಿರುಚುವಿಕೆ ಹಾಗೂ ವಿರೂಪಗೊಳಿಸುವಂತಹ ಕೋಮು ವಿಷಯಗಳನ್ನು ಮುನ್ನೆಲೆಗೆ ತರುತ್ತಿದೆ. ಇಂತಹ ಕೋಮುಶಕ್ತಿಗಳಿಗೆ ಆಳುವ ಬಿಜೆಪಿ ಮತ್ತು ಅದರ ಸಂಘ ಪರಿವಾರ ಕುಮ್ಮಕ್ಕು ನೀಡುತ್ತಿವೆ. ಈ ರೀತಿಯ ವಿಭಜಕ ಪ್ರಯತ್ನಗಳನ್ನು ಸೋಲಿಸಿ, ನೈಜ ಧರ್ಮನೀರಪೇಕ್ಷ, ಪ್ರಜಾತಾಂತ್ರಿಕ ಮೌಲ್ಯಗಳನ್ನು ಪುನಃ ಸ್ಥಾಪಿಸುವ ಕೆಲಸವನ್ನು ನಾಡಿನ ಜನತೆ ಮಾಡಬೇಕಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಸಮಿತಿ ಸದಸ್ಯರಾದ ಎಸ್.ಎಂ. ಶರ್ಮಾ, ಮಹೇಶ ಎಸ್.ಬಿ. ಹಾಜರಿದ್ದರು.

ಬೆಲೆ ಏರಿಕೆಯನ್ನು ನಿಯಂತ್ರಿಸದಿದ್ದರೆ ಜನರು ನಿತ್ಯ ಜೀವನ ನಡೆಸುವುದೇ ಅಸಹನೀಯವಾಗಲಿದೆ. ಮುಖ್ಯವಾಗಿ ಪೆಟ್ರೋಲ್, ಡೀಸೆಲ್ ಬೆಲೆಗಳನ್ನು ನಿಯಂತ್ರಿಸಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಕೆಯ ಲಾಭವನ್ನು ಜನರಿಗೆ ತಲುಪಿಸಬೇಕು.

ವಿ. ನಾಗಮ್ಮಾಳ್

ರಾಜ್ಯ ಉಪಾಧ್ಯಕ್ಷೆ, ಎಐಕೆಕೆಎಂಎಸ್

ರಾಜ್ಯದಲ್ಲಿ 4 ನಾಲ್ಕು ಹುದ್ದೆಗಳು ಖಾಲಿ ಇವೆ. ಕೇಂದ್ರ ಸರ್ಕಾರ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿತ್ತು. ಉದ್ಯೋಗ ಸೃಷ್ಟಿ ಒತ್ತಟ್ಟಿಗಿರಲಿ 1.5 ಕೋಟಿ ಕಾಯಂ ಹುದ್ದೆಗಳನ್ನು ರದ್ದುಗೊಳಿಸಲಾಗಿದೆ.

ವಿ.ಜಿ. ದೇಸಾಯಿ

ಜಿಲ್ಲಾ ಅಧ್ಯಕ್ಷ, ಎಐಯುಟಿಯುಸಿ ಕಾರ್ಮಿಕ ಸಂಘಟನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.