
ಕಲಬುರಗಿ: ರಾಜ್ಯ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆ ಹೆಚ್ಚಳ ಮಾಡಿದ್ದನ್ನು ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಕಾರ್ಯಕರ್ತರು ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಮಂಗಳವಾರ ಪ್ರತಿಭಟಿಸಿದರು.
ಚುನಾವಣೆ ಸಂದರ್ಭದಲ್ಲಿ ಹಿಂದಿನ ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ವಿರೋಧಿಸಿದ್ದ ಕಾಂಗ್ರೆಸ್ ಪಕ್ಷ ಇದೀಗ ಬಿಜೆಪಿಯ ಹಳೇ ಚಾಳಿಯನ್ನೇ ಮುಂದುವರಿಸಿದೆ. ಆ ಮೂಲಕ ಜನರ ಮೇಲೆ ಬೆಲೆ ಏರಿಕೆ ಹೊರೆಯನ್ನು ಹೊರೆಸಿದೆ ಎಂದು ಪ್ರತಿಭಟನಕಾರರು ಟೀಕಿಸಿದರು.
‘ಬೆಲೆ ಹೆಚ್ಚಳದಿಂದಾಗಿ ರಾಜ್ಯ ಸರ್ಕಾರದ ಖಜಾನೆಗೆ ₹ 3 ಸಾವಿರ ಕೋಟಿ ಹೆಚ್ಚುವರಿ ತೆರಿಗೆ ಸಂಗ್ರಹವಾಗಲಿದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದಿಂದಾಗಿ ಸರಕು ಸಾಗಣೆ ವೆಚ್ಚ ಹೆಚ್ಚಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗಲಿದೆ. ತರಕಾರಿ, ದವಸ–ಧಾನ್ಯಗಳ ಬೆಲೆ ಹೆಚ್ಚಳದಿಂದ ಕಂಗಾಲಾಗಿರುವ ಜನರಿಗೆ ತೈಲ ಬೆಲೆಗಳ ಹೆಚ್ಚಳದಿಂದ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ’ ಎಂದು ಪಕ್ಷದ ರಾಜ್ಯ ನಾಯಕ ಎಂ. ಶಶಿಧರ್ ಆರೋಪಿಸಿದರು.
ಈಗಾಗಲೇ ಪ್ರತಿ ಲೀಟರ್ ಬೆಲೆಯಲ್ಲಿ ಅರ್ಧದಷ್ಟು ರಾಜ್ಯ ಹಾಗೂ ಕೇಂದ್ರಗಳು ವಿಧಿಸಿರುವ ತೆರಿಗೆಯೇ ಇದೆ. ಲೋಕಸಭಾ ಚುನಾವಣೆಗೆ ಮುಂಚೆ ಮತದಾರರನ್ನು ಓಲೈಸಲು ಕೇಂದ್ರ ಸರ್ಕಾರ ತೈಲ ಬೆಲೆಯನ್ನು ₹ 2 ಕಡಿತ ಮಾಡಿತ್ತು. ಅಲ್ಲದೇ, ರಷ್ಯಾ–ಉಕ್ರೇನ್ ಯುದ್ಧದ ಲಾಭ ಪಡೆದು ಭಾರತವು ಜಾಗತಿಕ ದರಕ್ಕಿಂತ ಶೇ 35ರಷ್ಟು ಕಡಿಮೆ ಬೆಲೆಗೆ ಕಚ್ಚಾ ತೈಲವನ್ನು ಖರೀದಿ ಮಾಡಿದರೂ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲಿಲ್ಲ. ಬದಲಾಗಿ ಲಕ್ಷಾಂತರ ಕೋಟಿ ರೂಪಾಯಿಗಳನ್ನು ತೈಲ ಕಂಪನಿಗಳು ಕೊಳ್ಳೆ ಹೊಡೆದಿವೆ. ಈ ಸಾರ್ವಜನಿಕ ತೆರಿಗೆಯನ್ನು ಮೋದಿ ಸರ್ಕಾರವು ಕಾರ್ಪೊರೇಟ್ ಬಂಡವಾಳಶಾಹಿಗಳ ಅನುಕೂಲಕ್ಕೆ ಬಳಸಿಕೊಂಡಿದೆ. ಮತ್ತೊಂದೆಡೆ ಒಂದು ದೇಶ, ಒಂದು ತೆರಿಗೆ ಘೋಷಣೆಯೊಂದಿಗೆ ಜಾರಿಗೆ ತಂದ ಜಿಎಸ್ಟಿಯ ಅಡಿಯಲ್ಲಿ ಪೆಟ್ರೋಲ್, ಡೀಸೆಲ್ ಉತ್ಪನ್ನಗಳನ್ನು ಸೇರಿಸಿಲ್ಲ. ಇದರಿಂದಾಗಿ ರಾಜ್ಯ, ಕೇಂದ್ರ ಸರ್ಕಾರಗಳು ತಮಗಿಷ್ಟ ಬಂದಂತೆ ಬೆಲೆ ಹೆಚ್ಚಳ ಮಾಡುತ್ತಿವೆ’ ಎಂದು ಟೀಕಿಸಿದರು.
ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಮುಖಂಡರಾದ ಎಸ್.ಎಂ. ಶರ್ಮಾ, ಮಹೇಶ ನಾಡಗೌಡ, ಗಣಪತರಾವ್ ಮಾನೆ, ಸಂದೀಪ, ಮಹೇಶ ಎಸ್.ಬಿ, ಡಾ.ಸೀಮಾ ದೇಶಪಾಂಡೆ, ಜಗನ್ನಾಥ ಎಚ್.ಎಸ್, ಸಂತೋಷ ಹಿರವೆ, ಶಿವರಾಜ, ಹಣಮಂತ ಎಸ್.ಎಚ್, ವಿಶಾಲಾಕ್ಷಿ, ಪ್ರೀತಿ ದೊಡ್ಡಮನಿ, ವೆಂಕಟೇಶ, ಗೋವಿಂದ ಭಾಗವಹಿಸಿದ್ದರು.
ಬೆಲೆ ಏರಿಕೆ ಬಗ್ಗೆ ಮಾತನಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವನ್ನು ನಂಬಿ ಮತ ಹಾಕಿದ ಜನರಿಗೆ ತೈಲ ಬೆಲೆ ಹೆಚ್ಚಿಸುವ ಮೂಲಕ ವಂಚನೆ ಮಾಡುತ್ತಿದೆ
-ವಿ. ನಾಗಮ್ಮಾಳ್ ಎಸ್‌ಯುಸಿಐ (ಸಿ) ಪಕ್ಷದ ಜಿಲ್ಲಾ ನಾಯಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.