ADVERTISEMENT

ಕಬ್ಬಿನ ದರ ನಿಗದಿಗೆ ಮೂಡದ ಒಮ್ಮತ: ಮತ್ತೆ ಎರಡು ದಿನ ಗಡುವು

ಬಿ.ಆರ್.ಪಾಟೀಲ ನೇತೃತ್ವದಲ್ಲಿ ರೈತರು–ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರೊಂದಿಗೆ ಸಭೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 7:06 IST
Last Updated 4 ನವೆಂಬರ್ 2025, 7:06 IST
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕಬ್ಬಿಗೆ ಏಕರೂಪ ದರ‌ ನಿಗದಿಪಡಿಸುವ ಸಂಬಂಧ ರೈತರು–ಸಕ್ಕರೆ ಕಾರ್ಖಾನೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ರೈತ ಮುಖಂಡ ಧರ್ಮರಾಜ ಸಾಹು ಮಾತನಾಡಿದರು. ಬಿ.ಆರ್.ಪಾಟೀಲ, ಫೌಜಿಯಾ ತರನ್ನುಮ್‌, ಎಂ.ವೈ. ಪಾಟೀಲ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು
ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕಬ್ಬಿಗೆ ಏಕರೂಪ ದರ‌ ನಿಗದಿಪಡಿಸುವ ಸಂಬಂಧ ರೈತರು–ಸಕ್ಕರೆ ಕಾರ್ಖಾನೆ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ರೈತ ಮುಖಂಡ ಧರ್ಮರಾಜ ಸಾಹು ಮಾತನಾಡಿದರು. ಬಿ.ಆರ್.ಪಾಟೀಲ, ಫೌಜಿಯಾ ತರನ್ನುಮ್‌, ಎಂ.ವೈ. ಪಾಟೀಲ ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು   

ಕಲಬುರಗಿ: ಪ್ರಸಕ್ತ ಸಾಲಿನಲ್ಲಿ ಪ್ರತಿ ಟನ್ ಕಬ್ಬಿಗೆ ₹3 ಸಾವಿರ ನಿಗದಿ ಮಾಡಬೇಕು ಎಂಬ ಜಿಲ್ಲಾಡಳಿತದ ಪ್ರಸ್ತಾವವನ್ನು ಜಿಲ್ಲೆಯ ಆರು ಸಕ್ಕರೆ ಕಾರ್ಖಾನೆಗಳು ಒಪ್ಪಲು ಹಿಂದೇಟು ಹಾಕಿದ್ದರಿಂದ ಆಡಳಿತ ಮಂಡಳಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ತಿಳಿಸಲು ಮತ್ತೆ ಎರಡು ದಿನಗಳ ಕಾಲಾವಕಾಶ ನೀಡಿ ಸಭೆಯನ್ನು ಮುಂದಕ್ಕೆ ಹಾಕಲಾಯಿತು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ ಅಧ್ಯಕ್ಷತೆಯಲ್ಲಿ ಕಬ್ಬಿಗೆ ಪ್ರಸಕ್ತ ಸಾಲಿನಲ್ಲಿ ಏಕರೂಪದ ದರ ನಿಗದಿ ಮಾಡುವ ಕುರಿತಂತೆ ನಡೆದ ರೈತರು–ಕಾರ್ಖಾನೆಗಳ ಆಡಳಿತ ಮಂಡಳಿಯ ಸಭೆಯಲ್ಲಿ ಕಾರ್ಖಾನೆಗಳು ಎಷ್ಟು ದರ ನಿಗದಿ ಮಾಡಲಿವೆ ಎಂಬುದನ್ನು ಸ್ಪಷ್ಟಪಡಿಸಲಿಲ್ಲ. ಕಾರ್ಖಾನೆಗಳ ಈ ಧೋರಣೆಗೆ ಬಿ.ಆರ್.ಪಾಟೀಲ, ಅಫಜಲಪುರ ಶಾಸಕ ಎಂ.ವೈ. ಪಾಟೀಲ ಬೇಸರ ವ್ಯಕ್ತಪಡಿಸಿದರು.

ಒಂದು ಹಂತದಲ್ಲಿ ಸಿಟ್ಟಾದ ಬಿ.ಆರ್.ಪಾಟೀಲ, ‘ದರ ನಿಗದಿಗೊಳಿಸದೇ, ನಿಮ್ಮ ಅಭಿಪ್ರಾಯವನ್ನೂ ಸ್ಪಷ್ಟಪಡಿಸದೇ ಸುಮ್ಮನೆ ಇರುವುದು ಸರಿಯಾದ ಕ್ರಮವಲ್ಲ. ಜಿಲ್ಲೆಯಲ್ಲಿ ರೈತರ ಹಿತಾಸಕ್ತಿ ಬಲಿಕೊಡಲು ನಾವು ಸಿದ್ಧವಿಲ್ಲ. ಕಾನೂನು ಮೀರಿ ಹೋಗುವ ತಾಕತ್ತು ನಿಮಗೆ ಇದೆಯಾ’ ಎಂದು ಖಾರವಾಗಿ ಪ್ರಶ್ನಿಸಿದರು.

ADVERTISEMENT

ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ಸಹ ಆಡಳಿತ ಮಂಡಳಿಗಳ ಅಸಹಕಾರಕ್ಕೆ ಬೇಸರ ವ್ಯಕ್ತಪಡಿಸಿದರು. ‘ನಾಲ್ಕು ಬಾರಿ ಸಭೆ ನಡೆಸಿದರೂ ನಿಮ್ಮ ನಿಲುವನ್ನು ವ್ಯಕ್ತಪಡಿಸುತ್ತಿಲ್ಲ. ಬೆಲೆ ಕುರಿತಂತೆ ರೈತರೊಂದಿಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳುವಂತೆ ಹೇಳಿದರೂ ನೀವು ಮಾಡಿಕೊಂಡಿಲ್ಲ. ರೈತರು ನಿಮ್ಮ ಕಾರ್ಖಾನೆಗೆ ಬಂದಾಗ ಅವರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನಾದರೂ ಮಾಡಬೇಕು. ಇಲ್ಲದಿದ್ದರೆ ರೈತರಿಗೆ ಕಾರ್ಖಾನೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಬರುವುದು ಹೇಗೆ ಸಾಧ್ಯ? ರೈತರು ಕಬ್ಬು ಕಟಾವು ಮಾಡಿ ಕಾರ್ಖಾನೆಗೆ ತಂದ ಬಳಿಕ ಎಷ್ಟು ತೂಕ ಇದೆ ಎಂಬ ಬಗ್ಗೆ ಅವರ ಮೊಬೈಲ್‌ಗಳಿಗೆ ಎಸ್‌ಎಂಎಸ್ ಕಳಿಸುವ ವ್ಯವಸ್ಥೆ ರೂಪಿಸಬೇಕು. ಜಿಲ್ಲೆಯಲ್ಲಿ ಇನ್ನೂ ನಾಲ್ಕು ಸಕ್ಕರೆ ಕಾರ್ಖಾನೆಗಳು ಬರಲಿವೆ. ಹೀಗಾಗಿ, ಸಹಜವಾಗಿಯೇ ಸ್ಪರ್ಧೆ ಹೆಚ್ಚಿ ರೈತರಿಗೆ ಉತ್ತಮ ಬೆಲೆ ಸಿಗಲಿದೆ. ರೈತರೊಂದಿಗೆ ಸೌಜನ್ಯದೊಂದಿಗೆ ವರ್ತಿಸಿ ಉತ್ತಮ ಬೆಲೆ ನೀಡಿದರೆ ಅವರು ನಿಮ್ಮ ಕಾರ್ಖಾನೆ ಬಿಟ್ಟು ಬೇರೆಡೆ ಹೋಗುವುದಿಲ್ಲ’ ಎಂದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ‘ಕೂಡಲೇ ದರ ನಿಗದಿ ಮಾಡಿ ಕಬ್ಬು ಅರೆಯುವಿಕೆ ಪ್ರಾರಂಭಿಸಲು ಕಾರ್ಖಾನೆಗಳು ಹಿಂದೇಟು ಹಾಕುತ್ತಿವೆ. ಇದೇ ಹಟಮಾರಿತನ ಪ್ರದರ್ಶಿಸಿದರೆ ಕಾರ್ಖಾನೆಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ರೈತ ಮುಖಂಡ ಧರ್ಮರಾಜ ಸಾಹು ಮಾತನಾಡಿ, ‘ಸಕ್ಕರೆ ಕಾರ್ಖಾನೆಗಳು ದರ ನಿಗದಿ ಮಾಡಿಕೊಂಡು, ಆ ಕುರಿತು ರೈತರೊಂದಿಗೆ ಒಪ್ಪಂದ ಪತ್ರಕ್ಕೆ ಸಹಿ ಹಾಕಬೇಕು ಎಂಬ ತೀರ್ಮಾನ ಮಾಡಿದ್ದರೂ ಇನ್ನೂವರೆಗೆ ಆ ಪ್ರಯತ್ನಗಳು ನಡೆದಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ‘ಕಾರ್ಖಾನೆಗಳು ರೈತರೊಂದಿಗೆ ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳುವಂತೆ ಸೆಪ್ಟೆಂಬರ್‌ನಲ್ಲಿಯೇ ಸಭೆ ನಡೆಸಿ ಲಿಖಿತವಾಗಿ ತಿಳಿಸಲಾಗಿದೆ. ಇನ್ನೂವರೆಗೂ ಅದು ಕಾರ್ಯರೂಪಕ್ಕೆ ಬಂದಿಲ್ಲ’ ಎಂದರು.

ಸಭೆಯಲ್ಲಿ ಮಾತನಾಡಿದ ಜೇವರ್ಗಿ ತಾಲ್ಲೂಕಿನ ರೈತ ಮುಖಂಡ ಶರಣು ಬಿಲ್ಲಾಡ, ‘ಸಕ್ಕರೆ ಕಾರ್ಖಾನೆಯವರು ಉದ್ದೇಶಪೂರ್ವಕವಾಗಿ ರೈತರ ಮಧ್ಯೆಯೇ ಜಗಳ ಹಚ್ಚುತ್ತಿದ್ದಾರೆ. ಜಿಲ್ಲೆಯ ರೈತರ ಕಬ್ಬು ನುರಿಸುವ ಬದಲು ಯಾದಗಿರಿ ಜಿಲ್ಲೆಯಿಂದ ಕಬ್ಬು ತರಿಸುತ್ತಿದ್ದಾರೆ. ಪರಿಸ್ಥಿತಿ ಹೀಗೇ ಮುಂದುವರಿದರೆ ಕಬ್ಬಿನ ಲಾರಿಗಳನ್ನು ಸುಟ್ಟು ಹಾಕುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಭೀಮರಾಯ, ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್, ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ ಹಾಗೂ ಕೆಪಿಆರ್ ಶುಗರ್ಸ್ ಅಂಡ್‌ ಅಪೇರೆಲ್ಸ್, ಎನ್‌ಎಸ್ಎಲ್ ಶುಗರ್ಸ್, ರೇಣುಕಾ ಶುಗರ್ಸ್, ಉಗಾರ್ ಶುಗರ್ ವರ್ಕ್ಸ್, ಸಿದ್ದಸಿರಿ ಸೌಹಾರ್ದ ಸಹಕಾರಿ ಹಾಗೂ ಯಾದಗಿರಿ ಜಿಲ್ಲೆಯ ಕೋರ್ ಗ್ರೀನ್ ಶುಗರ್ ಪ್ಯುಯೆಲ್ಸಸ್ ಕಾರ್ಖಾನೆಯ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಕ್ಕರೆ ಸಚಿವರಿಗೆ ಕರೆ

ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆಯಲ್ಲಿ ಒಮ್ಮತಕ್ಕೆ ಬಾರದ್ದರಿಂದ ಬಿ.ಆರ್.ಪಾಟೀಲ ಅವರು ಸಭೆಯ ನಡೆಸುತ್ತಿದ್ದಾಗಲೇ ಸಕ್ಕರೆ ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರಿಗೆ ಕರೆ ಮಾಡಿದರು. ‘ಸಕ್ಕರೆ ಕಾರ್ಖಾನೆಗಳವರು ದರ ನಿಗದಿಯ ಪ್ರಸ್ತಾವವನ್ನು ಒಪ್ಪುತ್ತಿಲ್ಲ. ಆದ್ದರಿಂದ ನೀವೇ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಕೆಳಹಂತದ ಅಧಿಕಾರಿಗಳು ಭಾಗಿ

ಕಾರ್ಖಾನೆಯ ಪರವಾಗಿ ಸ್ಪಷ್ಟ ನಿಲುವು ತಿಳಿಸುವ ನಿಟ್ಟಿನಲ್ಲಿ ಜವಾಬ್ದಾರಿಯುತ ಆಡಳಿತ ಮಂಡಳಿ ಸದಸ್ಯರು ಸಭೆಯಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಡಳಿತ ಸ್ಪಷ್ಟ ಆದೇಶ ನೀಡಿತ್ತಾದರೂ ಜಿಲ್ಲೆಯ ಆರು ಕಾರ್ಖಾನೆಗಳವರು ಕೆಳ ಹಂತದ ಅಧಿಕಾರಿಗಳನ್ನು ಕಳುಹಿಸಿದ್ದರು.

ಈ ಕ್ರಮಕ್ಕೆ ಬಿ.ಆರ್.ಪಾಟೀಲ ಎಂ.ವೈ.ಪಾಟೀಲ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು. ‘ನಮ್ಮ ಕೇಂದ್ರ ಕಚೇರಿ ಸಿಂಗಪುರದಲ್ಲಿದ್ದು ಕಾರ್ಖಾನೆಯ ಅಭಿಪ್ರಾಯ ತಿಳಿಸಲು ನಾಲ್ಕು ದಿನ ಸಮಯ ಬೇಕು’ ಎಂದು ರೇಣುಕಾ ಶುಗರ್ಸ್‌ನ ಪ್ರತಿನಿಧಿ ತಿಳಿಸಿದರು.

ಇದರಿಂದ ಸಿಟ್ಟಿಗೆದ್ದ ಡಿಸಿ ಫೌಜಿಯಾ ಅವರು ‘ಸಿಂಗಪುರಕ್ಕೆ ವಿಮಾನದಲ್ಲಿ ಹೋಗಲು ಒಂದೂವರೆ ಗಂಟೆ ಸಾಕು. ಆದರೂ ನಾಲ್ಕು ದಿನ ಏಕೆ? ಅಷ್ಟು ಸಮಯ ಕೊಡಲಾಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಉಳಿದ ಕಾರ್ಖಾನೆಯವರು ಎಷ್ಟು ಕೊಡುತ್ತಾರೆ ನಮ್ಮ ಕಾರ್ಖಾನೆಯಿಂದಲೂ ಅಷ್ಟು ನಿಗದಿ ಮಾಡುವಂತೆ ಸಿದ್ಧಸಿರಿ ಎಥೆನಾಲ್ ಮತ್ತು ಪವರ್ ಕಾರ್ಖಾನೆಯ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದ್ದಾರೆ’ ಎಂದು ಸಿದ್ಧಸಿರಿ ಕಾರ್ಖಾನೆಯ ಪ್ರತಿನಿಧಿ ತಿಳಿಸಿದರು.

ಪಕ್ಕದ ವಿಜಯಪುರ ಬೆಳಗಾವಿ ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರತಿ ಟನ್ ಕಬ್ಬಿಗೆ ₹3400 ದರ ನಿಗದಿ ಮಾಡಿದ್ದಾರೆ. ಇಲ್ಲಿ ಅಷ್ಟು ಕೊಡಲು ಏನು ತೊಂದರೆ? ನೀವು ಹೇಳುವ ನೆಪಗಳನ್ನೆಲ್ಲ ನಾವು ಕೇಳಲು ತಯಾರಿಲ್ಲ.
-ಬಿ.ಆರ್.ಪಾಟೀಲ, ಯೋಜನಾ ಆಯೋಗದ ರಾಜ್ಯ ಉಪಾಧ್ಯಕ್ಷ
ನನ್ನ ಮಾತುಗಳು ಕಠಿಣವೆನಿಸಬೇಕು. ಕೆಲ ಕಾರ್ಖಾನೆಯವರು ಸಕ್ಕರೆ ಸಚಿವರು ಶಾಸಕರಿಗೆ ನನ್ನ ವಿರುದ್ಧ ದೂರು ನೀಡಿದ್ದೀರಿ. ಆದರೆ ರೈತರಿಗೆ ಎಷ್ಟು ದರ ನೀಡುತ್ತೀರಿ ಎಂಬುದನ್ನು ಸ್ಪಷ್ಟಪಡಿಸಬೇಕು.
-ಫೌಜಿಯಾ ತರನ್ನುಮ್, ಜಿಲ್ಲಾಧಿಕಾರಿ
ಕಬ್ಬು ನುರಿಸುವ ಹಂಗಾಮು ಶುರುವಾಗುತ್ತಿದ್ದಂತೆಯೇ ದರ ನಿಗದಿಗೊಳಿಸಿ ಕಬ್ಬು ಖರೀದಿಸಬೇಕು. ಇಷ್ಟು ವಿಳಂಬ ಮಾಡಿದರೆ ರೈತರು ಏನು ಮಾಡಬೇಕು?.
-ಎಂ.ವೈ. ಪಾಟೀಲ, ಅಫಜಲಪುರ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.