ADVERTISEMENT

ಕೋರ್ಟ್ ಆವರಣದಲ್ಲಿಯೇ ಆತ್ಮಹತ್ಯೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 6:58 IST
Last Updated 1 ಆಗಸ್ಟ್ 2025, 6:58 IST
ಕೋರ್ಟ್ (ಸಾಂದರ್ಭಿಕ ಚಿತ್ರ)
ಕೋರ್ಟ್ (ಸಾಂದರ್ಭಿಕ ಚಿತ್ರ)   

ಚಿಂಚೋಳಿ: ಇಲ್ಲಿನ‌ ನ್ಯಾಯಾಲಯದ ಆವರಣದಲ್ಲಿಯೇ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದು, ಸಮಯ ಪ್ರಜ್ಞೆ ಮೆರೆದ ಪೊಲೀಸರು ಆತನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುರುವಾರ ಬೆಳಿಗ್ಗೆ 11ರಿಂದ 11.30ರ ಮಧ್ಯೆ ಘಟನೆ ನಡೆದಿದೆ. ತಾಲ್ಲೂಕಿನ ಗರಕಪಳ್ಳಿ ಗ್ರಾಮದ ರವೀಂದ್ರ ಪೂಜಾರಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಚಿಂಚೋಳಿ ಠಾಣೆಯ ಕಾನ್‌ಸ್ಟೆಬಲ್ ಸವಿಕುಮಾರ ದೇವನೂರ ಹಾಗೂ ಮಿರಿಯಾಣ ಠಾಣೆಯ ಕಾನ್‌ಸ್ಟೆಬಲ್ ಸಾಯಬಣ್ಣ ಅವರು ರಕ್ಷಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪತ್ನಿ ರೇಷ್ಮಾ, ಪುತ್ರಿ ನಾಗೇಶ್ವರಿ, ಪುತ್ರ ಸುಭಾಷ ಜತೆಗೆ ಕೋರ್ಟಿಗೆ ಬಂದಿದ್ದ ಅವನು ಮರ ಏರಿ ಜತೆಗೆ ತಂದಿದ್ದ ವೈರ್ ಹಗ್ಗದಿಂದ ನೇಣುಬಿಗಿದಿದ್ದ. ಇನ್ನೇನು ಮರದಿಂದ ಕೆಳಗೆ ಹಾರುವ ವೇಳೆಗೆ ದೌಡಾಯಿಸಿದ ಪೊಲೀಸರು ಮರ ಏರಿದವನನ್ನು ಹಿಡಿದು ರಕ್ಷಿಸಿದ್ದಾರೆ. ನಂತರ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಗೆ ವಕೀಲರು ಬುದ್ದಿವಾದ ಹೇಳಿ ಕಳುಹಿಸಿದರು. ಪೊಲೀಸರು ಒಂದು ಕ್ಷಣ ಮೈ ಮರೆತಿದ್ದರೆ ಅನುಹುತವೇ ನಡೆಯುವ ಅಪಾಯವಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ADVERTISEMENT

ರವೀಂದ್ರಕುಮಾರ ಬುಧವಾರ ವಿಷದ ಬಾಟಲಿಯೊಂದಿಗೆ ನ್ಯಾಯಾಲಯಕ್ಕೆ ಬಂದಿದ್ದ. ಕೋರ್ಟ್ ಹಾಲ್ ಪ್ರವೇಶಿಸಲು ಯತ್ನಿಸಿದ್ದನು. ಆಗಲೂ ವಕೀಲರು ತಿಳಿ ಹೇಳಿ ಕಳುಹಿಸಿದ್ದರು. ತನಗೆ ತನ್ನ ತಾಯಿ ಆಸ್ತಿ‌ ನೀಡುತ್ತಿಲ್ಲ. ಕೇಳಿದರೆ ಹೊಡೆಬಡೆ ಮಾಡುತ್ತಿದ್ದಾರೆ. ಠಾಣೆಗೆ ಸುಳ್ಳು ದೂರು ಕೊಟ್ಟು ತೊಂದರೆ ನೀಡುತ್ತಿದ್ದಾರೆ. ಇರಲು‌ ಮನೆಯನ್ನೂ ನೀಡಿಲ್ಲ ಎಂಬುದು ರವೀಂದ್ರಕುಮಾರ ಆರೋಪವಾಗಿದೆ.

ಈ ಬಗ್ಗೆ ಕಲಬುರಗಿ ಎಸ್ಪಿ ಎದುರು ತನ್ನ ಅಳಲು ತೋಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.