ಕಲಬುರಗಿ: ‘ಪ್ರತಿಯೊಬ್ಬರಿಗೆ ಉತ್ತಮ ಮತ್ತು ಸುಧಾರಿತ ಆರೋಗ್ಯ ಸೇವೆಗಳನ್ನು ಕಲ್ಪಿಸುವ ಉದ್ದೇಶದಿಂದ ಪ್ರತಿಯೊಂದು ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.
ನಗರದ ಎಂಆರ್‌ಎಂಸಿ ಕಾಲೇಜಿನ ಸ್ಯಾಕ್ ಸಭಾಂಗಣದಲ್ಲಿ ಶನಿವಾರ ಎಂಆರ್‌ಎಂಸಿ ಮೆಡಿಸಿನ್ ವಿಭಾಗ, ಕಲ್ಯಾಣ ಕರ್ನಾಟಕ ಎಂಡೊಕ್ರೈನ್ ಸೊಸೈಟಿ ಹಾಗೂ ಭಾರತೀಯ ಫಿಜಿಷಿಯನ್‌ಗಳ ಸಂಸ್ಥೆಯ ಕಲಬುರಗಿ ಶಾಖೆಯ ಸಹಯೋಗದಲ್ಲಿ ನಡೆದ ಕರ್ನಾಟಕ ಎಂಡೊಕ್ರೈನ್ ಸೊಸೈಟಿಯ 7ನೇ ರಾಜ್ಯ ಸಮ್ಮೇಳನದ ‘ಹಾರ್ಮೋನ್ ರಿದಂ–2025’ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಕಲಬುರಗಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಮೈಸೂರು, ಬೆಳಗಾವಿ, ಹುಬ್ಬಳ್ಳಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರಾಗಿದೆ. ಕೆಲವೆಡೆ ಕೆಲಸವೂ ಶುರುವಾಗಿದೆ. ಮೈಸೂರು ಆಸ್ಪತ್ರೆಗೆ ₹100 ಕೋಟಿ ಒದಗಿಸಲಾಗಿದ್ದು, ಪ್ರತಿ ಜಿಲ್ಲೆಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವಿಸ್ತರಣೆ ಮಾಡುವ ಚಿಂತನೆ ಇದೆ’ ಎಂದರು.
‘ರಾಜ್ಯದ ಹಿರಿಯ ನಾಯಕರು ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭದ್ರವಾದ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ. ಇದರಿಂದಾಗಿ ಭಾರತದಲ್ಲಿಯೇ ವೃತ್ತಿಪರ ಕೋರ್ಸ್‌ಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ದೇಶದ ನಾನಾ ಭಾಗದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಕರ್ನಾಟಕದತ್ತ ಬರುತ್ತಿದ್ದಾರೆ. ಇದನ್ನು ಹೀಗೆ ಉಳಿಸಿಕೊಂಡು ಮುನ್ನಡೆಯುತ್ತೇವೆ’ ಎಂದು ಹೇಳಿದರು.
‘ಬೆಂಗಳೂರು ನಗರ ಒಂದರಲ್ಲಿಯೇ 200ಕ್ಕೂ ಹೆಚ್ಚು ಎಂಜಿನಿಯರಿಂಗ್ ಕಾಲೇಜುಗಳಿದ್ದು, ಭಾರತದ ಸಿಲಿಕಾನ್ ಸಿಟಿ ಎಂಬ ಖ್ಯಾತಿ ಸಹ ಪಡೆದಿದೆ. ವೈದ್ಯಕೀಯ ಶಿಕ್ಷಣದಲ್ಲಿಯೂ ಕರ್ನಾಟಕ ಮುಂದಿದೆ. ಸಾಕಷ್ಟು ಖಾಸಗಿ ಸಂಸ್ಥೆಗಳು ವೈದ್ಯಕೀಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡುತ್ತಿವೆ’ ಎಂದರು.
ಎಂಡೊಕ್ರೈನ್ ಸೊಸೈಟಿ ಅಧ್ಯಕ್ಷ ಡಾ.ಮಂಜುನಾಥ ಜಿ.ಅಣಕಲ್ ಮಾತನಾಡಿ, ‘ಜಗತ್ತಿನಲ್ಲಿ ಶೇ 10.50ರಷ್ಟು ಜನರಲ್ಲಿ ಮಧುಮೇಹ ಕಾಣಿಸಿಕೊಂಡಿದೆ. ಭಾರತದಲ್ಲಿ ಇದರ ಪ್ರಮಾಣವು ವೇಗವಾಗಿ ಬೆಳೆಯುತ್ತಿದ್ದು, ಮೂರು ದಶಕದಲ್ಲಿ ಶೇ 30ರಷ್ಟು ದಾಟುವ ಸಾಧ್ಯತೆ ಇದೆ’ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಡಾ.ಚಂದ್ರಶೇಖರ ಪಾಟೀಲ, ಶೆಟ್ಕರ್ ಇನ್‌ಫ್ರಾಸ್ಟ್ರಕ್ಷರ್ ವ್ಯವಸ್ಥಾಪಕ ನಿರ್ದೇಶಕ ಕಿರಣಕುಮಾರ್ ಶೆಟ್ಕರ್, ಎಚ್‌ಕೆಇ ಸಂಸ್ಥೆಯ ಕಾರ್ಯದರ್ಶಿ ಉದಯಕುಮಾರ ಎಸ್.ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ.ಕೈಲಾಶ ಬಿ. ಪಾಟೀಲ, ಸದಸ್ಯರಾದ ಡಾ.ಶರಣಬಸಪ್ಪ ಆರ್. ಹರವಾಳ, ಡಾ.ಕಿರಣ ದೇಶಮುಖ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಮ್ಮೇಳನದ ಸಂಟನಾ ಅಧ್ಯಕ್ಷ ಡಾ.ಅರ್ಪಣ್ದೇವ್ ಭಟ್ಟಾಚಾರ್ಯ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದೇಶದ ನಾನಾ ಭಾಗದಿಂದ ಬಂದ ತಜ್ಞ ವೈದ್ಯರು ಎಂಡೋಕ್ರಿನಾಲಜಿ ಕುರಿತು ತಮ್ಮ ವಿಷಯಗಳನ್ನು ಮಂಡಿಸಿದರು.
ಜಿಲ್ಲೆಯಲ್ಲಿ ಎಂಡೋಕ್ರಿನಾಲಜಿಸ್ಟ್ ತಜ್ಞರ ಕೊರತೆ ದೂರಾಗಿದ್ದು ತಜ್ಞ ವೈದ್ಯರು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಡಯಾಬಿಟಾಲಜಿ ಘಟಕದ ಜೊತೆಗೆ ಎಂಡೋಕ್ರಿನಾಲಜಿ ಸೇರಿಸಿ ಮೇಲ್ದರ್ಜೆಗೇರಿಸುವ ಚಿಂತನೆ ಇದೆಡಾ.ಶರಣಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.