ADVERTISEMENT

ಕಲಬುರ್ಗಿ | ತಿಪ್ಪೆಯಲ್ಲಿ ಕುತ್ತಿಗೆ ತನಕ ಮಕ್ಕಳನ್ನು ಹೂತಿಟ್ಟರು!

ಕಲಬುರ್ಗಿ ಜಿಲ್ಲೆಯ ತಾಜಸುಲ್ತಾನಪುರ, ಐನೊಳ್ಳಿ, ಗಡಿಲಿಂಗದಳ್ಳಿಯಲ್ಲಿ ಗ್ರಹಣದ ಸಂದರ್ಭದಲ್ಲಿ ಮೌಢ್ಯ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2019, 10:26 IST
Last Updated 27 ಡಿಸೆಂಬರ್ 2019, 10:26 IST
ಕಲಬುರ್ಗಿ ತಾಲ್ಲೂಕಿನ ತಾಜಸುಲ್ತಾನಪುರದ ರಸ್ತೆ ಪಕ್ಕದ ತಿಪ್ಪಿಗುಂಡಿಯಲ್ಲಿ ಬಾಲಕಿಯನ್ನು ಗ್ರಹಣದ ಸಂದರ್ಭದಲ್ಲಿ ಹೂತಿದ್ದ ಸಂದರ್ಭದಲ್ಲಿ ಬಾಲಕಿ ಗಾಬರಿಯಿಂದ ಅಳುತ್ತಿರುವುದು
ಕಲಬುರ್ಗಿ ತಾಲ್ಲೂಕಿನ ತಾಜಸುಲ್ತಾನಪುರದ ರಸ್ತೆ ಪಕ್ಕದ ತಿಪ್ಪಿಗುಂಡಿಯಲ್ಲಿ ಬಾಲಕಿಯನ್ನು ಗ್ರಹಣದ ಸಂದರ್ಭದಲ್ಲಿ ಹೂತಿದ್ದ ಸಂದರ್ಭದಲ್ಲಿ ಬಾಲಕಿ ಗಾಬರಿಯಿಂದ ಅಳುತ್ತಿರುವುದು   

ಕಲಬುರ್ಗಿ: ತಾಲ್ಲೂಕಿನ ತಾಜಸುಲ್ತಾನಪುರ, ಚಿಂಚೋಳಿ ತಾಲ್ಲೂಕಿನ ಐನೊಳ್ಳಿ ಮತ್ತು ಗಡಿಲಿಂಗದಳ್ಳಿ ಗ್ರಾಮದಲ್ಲಿ ಗುರುವಾರ ಸೂರ್ಯ ಗ್ರಹಣದ ಸಂದರ್ಭದಲ್ಲಿಆರು ಜನ ಅಂಗವಿಕಲ ಮಕ್ಕಳನ್ನು ಪೋಷಕರೇ ಕುತ್ತಿಗೆಯವರೆಗೆ ತಿಪ್ಪೆಯಲ್ಲಿ ಹೂತು ಹಾಕಿದ್ದರು.

ತಾಜಸುಲ್ತಾನಪುರದಲ್ಲಿ ಮಕ್ಕಳನ್ನು ಹೂತಿರುವ ಮಾಹಿತಿಯನ್ನು ಮಾಧ್ಯಮಗಳ ಮೂಲಕ ತಿಳಿದ ತಹಶೀಲ್ದಾರ್‌, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ತಿಪ್ಪೆಗುಂಡಿಯಿಂದ ಮೂವರು ಮಕ್ಕಳನ್ನು ಹೊರಕ್ಕೆ ತೆಗೆಸಿದರು. ನಂತರ ಹೀಗೆ ಮಾಡಿದಂತೆ ಪೋಷಕರಿಗೆ ಬುದ್ಧಿ ಹೇಳಿದರು.

ಆದರೆ, ಚಿಂಚೋಳಿಯ ಐನೊಳ್ಳಿ ಮತ್ತು ಗಡಿಲಿಂಗದಳ್ಳಿಯಲ್ಲಿ ಗ್ರಹಣ ಮುಕ್ತಾಯವಾದ ಬಳಿಕವೇ ಮಕ್ಕಳನ್ನು ತಿಪ್ಪೆಯಿಂದ ಹೊರಗೆ ತೆರೆಯಲಾಯಿತು. ಮೇಕೆಯ ಹಿಕ್ಕೆಗಳನ್ನು ಸಂಗ್ರಹಿಸಿರುವ ತಿಪ್ಪೆಯ ಗೊಬ್ಬರವು ಬಿಸಿಲಿಗೆ ಕಾಯ್ದು ಸಾಕಷ್ಟು ಬಿಸಿಯಾಗಿರುತ್ತದೆ. ಅಲ್ಲಿಯೇ ಗುಂಡಿ ತೋಡಿ ಮಕ್ಕಳನ್ನು ಇಳಿಸಿದ್ದರಿಂದ ಸಾಕಷ್ಟು ಬಿಸಿಯಾಗಿ ಮಕ್ಕಳು ಅಳಲು ಆರಂಭಿಸಿದ್ದವು. ಆದರೂ, ಪಟ್ಟು ಬಿಡದ ಪೋಷಕರು ಮಕ್ಕಳನ್ನು ಮೇಲೆತ್ತದಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಯಿತು.

ADVERTISEMENT

ತಾಜಸುಲ್ತಾನಪುರದಲ್ಲಿ ಸಂಜನಾ ವಿಠ್ಠಲ ಜಮಾದಾರ, ಪೂಜಾ ಕ್ಯಾಮಲಿಂಗ ಬೇಡರ ಹಾಗೂ ಕಾವೇರಿ ಮಲ್ಲಪ್ಪ ಎಂಬ ಬಾಲಕಿಯರನ್ನು ಕುತ್ತಿಗೆಯವರೆಗೆ ಹೂತು ಹಾಕಲಾಗಿತ್ತು. ಐನೊಳ್ಳಿಯಲ್ಲಿ ಬಾಲಕ ಮೊಹಮ್ಮದ್‌ ಇಮ್ರಾನ್‌ ಬಾಷಾ ಹಾಗೂ ಗಡಿ ಲಿಂಗದಳ್ಳಿಯಲ್ಲಿ ಅಕ್ಷತಾ ನಾಗಪ್ಪ ಎಂಬ ಬಾಲಕಿಯನ್ನು ಮೂರು ಗಂಟೆಗಳವರೆಗೆ ತಿಪ್ಪೆಗುಂಡಿಯಲ್ಲಿ ಇರಿಸಲಾಗಿತ್ತು. ಅಷ್ಟೂ ಜನ ಮಕ್ಕಳಿಗೆ ಅಂಗವಿಕಲತೆ ಇದೆ. ಗ್ರಹಣದ ಸಂದರ್ಭದಲ್ಲಿ ಹೀಗೆ ಮಾಡಿದರೆ ಅಂಗವೈಕಲ್ಯ ಸರಿಯಾಗುತ್ತದೆ ಎಂಬ ನಂಬಿಕೆ ಇದ್ದುದರಿಂದ ತಿಪ್ಪೆಯಲ್ಲಿ ಹೂತಿದ್ದೆವು ಎಂದು ಪೋಷಕರು ಅಧಿಕಾರಿಗಳಿಗೆ ಹೇಳಿಕೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಜಿ.ಎಸ್‌.ಗುಣಾರೆ, ‘ಮೌಢ್ಯಕ್ಕೆ ಬಲಿಯಾಗಿ ಮಕ್ಕಳಿಗೆ ಹಿಂಸೆ ನೀಡಿದ ಪೋಷಕರ ವಿರುದ್ಧವೇ ಪ್ರಕರಣ ದಾಖಲಿಸಬೇಕಾಗುತ್ತದೆ. ಈ ಬಗ್ಗೆ ಪೊಲೀಸ್‌ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.