ADVERTISEMENT

ಕಲಬುರ್ಗಿ: ‘ಅಚ್ಛೇ ದಿನ್‌ ಕನಸಿನಲ್ಲಿ ಸಂವಿಧಾನಕ್ಕೆ ಧಕ್ಕೆ’

ಸಂವಿಧಾನ ವಿಜಯೋತ್ಸವದಲ್ಲಿ ತಿಪ್ಪಣ್ಣಪ್ಪ ಕಮಕನೂರ ಬೇಸರ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 16:28 IST
Last Updated 26 ಜನವರಿ 2021, 16:28 IST
ಕಲಬುರ್ಗಿಯಲ್ಲಿ ಮಂಗಳವಾರ ಸಂವಿಧಾನ ವಿಯೋತ್ಸವ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸ್ತಬ್ದಚಿತ್ರ ಮೆರವಣಿಗೆ ನಡೆಯಿತು
ಕಲಬುರ್ಗಿಯಲ್ಲಿ ಮಂಗಳವಾರ ಸಂವಿಧಾನ ವಿಯೋತ್ಸವ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಸ್ತಬ್ದಚಿತ್ರ ಮೆರವಣಿಗೆ ನಡೆಯಿತು   

ಕಲಬುರ್ಗಿ: ‘ದೇಶದ ಸಂವಿಧಾನವನ್ನು ರಕ್ಷಿಸಲು ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರಂಥ ಸಮರ್ಥ ಧ್ವನಿಗಳು ಸಂಸತ್ತಿನಲ್ಲಿ ಇರಬೇಕು. ಆದರೆ, ಅವರನ್ನೇ ಸೋಲಿಸಿದ ನಾವು ಸಂವಿಧಾನಕ್ಕೇ ಕುತ್ತು ತರುವಂಥ ಕೆಲಸ ಮಾಡಿಬಿಟ್ಟಿದ್ದೇವೆ’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಬೇಸರ ವ್ಯಕ್ತಪಡಿಸಿದರು.

ಗಣರಾಜ್ಯೋತ್ಸವ ಅಂಗವಾಗಿ ನಗರದಲ್ಲಿ ಮಂಗಳವಾರಕರ್ನಾಟಕ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ಸಂವಿಧಾನ ವಿಜಯೋತ್ಸವದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ನಾವು ಎಲ್ಲಿಗೇ ಹೋದರೂ ಜನರು ಮೊದಲು ಕೇಳುವ ಪ್ರಶ್ನೆ; ಖರ್ಗೆ ಅವರಂಥವರನ್ನು ಜನ ಏಕೆ ಸೋಲಿಸಿದರು ಎಂಬುದು. ಈ ಪ್ರಶ್ನೆ ಎದುರಾದಾಗೆಲ್ಲ ನಾವು ಖರ್ಗೆ ಅವರಿಗೆ ಅಲ್ಲ; ಜನರಿಗೆ ದ್ರೋಹ ಮಾಡಿದ್ದೇವೆ ಎಂಬ ಭಾವನೆ ಮೂಡುತ್ತದೆ’ ಎಂದರು.

‘ಬೇರೆ ಯಾರೋ ಬಂದು ಅಚ್ಛೆ ದಿನ್‌ ಕನಸುಗಳನ್ನು ತುಂಬಿ ಈಗ ನಮ್ಮ ಕಾಲ ಮೇಲೆ ಕಲ್ಲು ಹಾಕುತ್ತಿದ್ದಾರೆ. ಈ ಭಾಗದಲ್ಲಿ ಖರ್ಗೆ ಅವರು ಸಾಕಷ್ಟು ಅಭಿವೃದ್ಧಿ ಮಾಡಿದ್ದರೂ ನಮ್ಮ ಜನ ಮರೆತರು. ಇದರಿಂದಸಂಸತ್ತಿನಲ್ಲಿ ಚೌಕಿದಾರನನ್ನು ಪ್ರಶ್ನೆ ಮಾಡಲು ಒಬ್ಬ ಗಟ್ಟಿ ಸಂಸದ ಇಲ್ಲದಂತಾಯಿತು. ಈಗ ಕಾಲ ಮಿಂಚಿಹೋಗಿದೆ. ಸಾಂವಿಧಾನಿಕ ಆಶಯಗಳಂತೆ ನಾವು ನಡೆದುಕೊಳ್ಳುತ್ತಿಲ್ಲ’ ಎಂದರು.

ADVERTISEMENT

ಪ್ರಬುದ್ಧ ಭಾರತ ಸಂಘರ್ಷ ಸಮಿತಿ ಮುಖಂಡ ಪೂಜಾ ಸಿಂಘೆ ಮಾತನಾಡಿ, ‘ಡಾ.ಬಿ.ಆರ್‌. ಅಂಬೇಡ್ಕರ್‌ ಅವರು ಕಂಡ ಕನಸಿನ ಭಾರತ ಇನ್ನೂ ಸಾಧ್ಯವಾಗಿಲ್ಲ. ಇದು ಸಾಧ್ಯವಾಗಲು ಸಂವಿಧಾನದ ಆಶಯಗಳು ಪೂರ್ಣವಾಗಿ ಈಡೇರಬೇಕು. ಅಂಬೇಡ್ಕರ್‌ ಅವರು ಕನಸು ಕಂಡಿದ್ದ ಭಾರತ ಇದೆಯೇ? ಎಂದು ಪ್ರಶ್ನೆ ಮಾಡುವಷ್ಟು ನಮ್ಮಲ್ಲಿ ಯಾರಿಗೂ ಸಮಯವಿಲ್ಲ. ಈ ಬಗ್ಗೆ ಯುವ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕಿದೆ’ ಎಂದರು.

ಕಾಂಗ್ರೆಸ್ ಮುಖಂಡ ಜೆ.ಎಂ.ಕೊರಬು,ಪ್ರೊ.ಆರ್.ಕೆ.ಹುಡಗಿ, ಸಾಹಿತಿಡಾ.ಹಣಮಂತರಾಯ ದೊಡ್ಡಮನಿ ಮಾತನಾಡಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮುಖಂಡರು ವೇದಿಕೆ ಮೇಲಿದ್ದರು.

ಇದಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಸಂವಿಧಾನ ಪುಸ್ತಕದ ಮಾದರಿ ಸ್ಬಬ್ದಚಿತ್ರ ಪ್ರದರ್ಶನ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.