ಕಲಬುರ್ಗಿ: ‘ಪುಸ್ತಕದಿಂದ ದೊರೆತ ಜ್ಞಾನ ನಮಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಕೊಡಿಸಬಹುದು. ಆದರೆ, ನಾವು ಅಳವಡಿಸಿಕೊಳ್ಳುವ ಜೀವನ ಕೌಶಲ ನಮಗೆ ಯಶಸ್ಸು ತಂದು ಕೊಡುತ್ತದೆ’ ಎಂದು ಬೆಂಗಳೂರಿನಹೆಡ್ ಹೆಲ್ಡ್ ಹೈ ಫೌಂಡೇಷನ್ ಪ್ರತಿನಿಧಿ ರಮೇಶ ಬಲ್ಲಿದ್ ಹೇಳಿದರು.
ರಾಮಕೃಷ್ಣ ವಿವೇಕಾನಂದ ಆಶ್ರಮದಿಂದ ತಾಲ್ಲೂಕಿನ ತಾಡತೆಗನೂರ ಗ್ರಾಮದ ವಿವೇಕಾನಂದ ವಿದ್ಯಾಪೀಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ವಿವೇಕಾನಂದರ ಷಿಕಾಗೊ ಭಾಷಣದ 125ನೇ ವರ್ಷಾಚರಣೆ’ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
‘ಸೌಲಭ್ಯಗಳಿಲ್ಲ ಎಂದು ಕೊರಗುತ್ತಲೇ ಕೂಡುವವರು ಎಂದಿಗೂ ಬದುಕಿನಲ್ಲಿ ಅದ್ಭುತಗಳನ್ನು ಸೃಷ್ಟಿಸಲಾರರು. ಸಮಸ್ಯೆಗಳೇ ನಮ್ಮನ್ನು ಪಕ್ವಗೊಳಿಸುತ್ತವೆ. ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಮುನ್ನಡೆದರೆ ಸಮಾಜ ನಮ್ಮನ್ನು ಗುರುತಿಸುತ್ತದೆ’ ಎಂದು ಹೇಳಿದರು.
‘ನಾನು 16 ವರ್ಷಗಳ ಕಾಲ ಶಾಲೆಯ ಮುಖವನ್ನೇ ನೋಡಿರಲಿಲ್ಲ. ನಂತರ ಕೇವಲ ಆರು ತಿಂಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಪರಿಣತಿ ಪಡೆದೆ. ಆ ಸಮಯದಲ್ಲಿ ನಾನು ಸಮಸ್ಯೆಗಳ ಮಧ್ಯೆ ಹೇಗೆ ಸಾಧನೆ ಮಾಡಬಹುದು ಎಂಬುದನ್ನು ಕಲಿತೆ’ ಎಂದು ತಮ್ಮ ಸಾಧನೆಯನ್ನೇ ಉದಾಹರಿಸಿದರು.
ಪಶ್ಚಿಮ ಬಂಗಾಲದ ಮುರ್ಷಿದಾಬಾದ್ ಜಿಲ್ಲೆಯ ‘ಆನಂದ ಶಿಕ್ಷಣ ನಿಕೇತನ’ ಸಂಸ್ಥಾಪಕ ಹಾಗೂ ಅತಿ ಚಿಕ್ಕ ವಯಸ್ಸಿನ ಹೆಡ್‌ಮಾಸ್ಟರ್ ಬಾಬರ್ ಅಲಿ ಮಾತನಾಡಿ, ‘ಶ್ರದ್ಧೆ, ಧೈರ್ಯ ಮತ್ತು ದಯಾಪರ ಮನೋಭಾವ ಇಲ್ಲದೆ ಯಶಸ್ಸು ನಮ್ಮತ್ತ ಸುಳಿಯುವುದಿಲ್ಲ. ಸಾಧನೆಯ ಹಾದಿಯಲ್ಲಿ ಧೈರ್ಯದಿಂದ ಹೊರಟಾಗ ನಮಗೇ ಗೊತ್ತಿಲ್ಲದೆ ನಮ್ಮ ಹೆಜ್ಜೆ ಗುರುತುಗಳು ಮೂಡುತ್ತವೆ’ ಎಂದರು.
‘ನಾನು ನನ್ನ 16ನೇ ವಯಸ್ಸಿಗೆ ತೆರೆದ ಶಾಲೆಯಲ್ಲಿ ಈಗ 500 ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಈ ಶಾಲೆಗೆ ಕರ್ನಾಟಕದ ದಾನಿಗಳೇ ಹೆಚ್ಚು ಸಹಾಯ ನೀಡುತ್ತಿದ್ದಾರೆ. ಆ ಮೂಲಕ ದೇಶದ ಅತ್ಯಂತ ಹಿಂದುಳಿದ ಜಿಲ್ಲೆ ಎಂಬ ಅಪಕೀರ್ತಿ ಹೊಂದಿದ್ದ ಮುರ್ಷಿದಾಬಾದ್‌ನಲ್ಲಿ ಶೈಕ್ಷಣಿಕ ಕ್ರಾಂತಿ ಸಾಧ್ಯವಾಗಿದೆ. ಅಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವ ಉದ್ದೇಶವಿದೆ’ಎಂದು ಹೇಳಿದರು.
ಆಶ್ರಮದ ಸ್ವಾಮಿ ಮಹೇಶ್ವರಾನಂದ ಮಹಾರಾಜ್ ಅಧ್ಯಕ್ಷತೆ ವಹಿಸಿದ್ದರು. ಚಂದ್ರಶೇಖರ ಮಡಿವಾಳ ವೇದಿಕೆಯಲ್ಲಿದ್ದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರೊ.ಶಿವರಾಮೇಗೌಡ, ವಿಜಯಕುಮಾರ ಬಿಲಗುಂದಿ, ಮಲ್ಲಿಕಾರ್ಜುನ ಹೆಳವರ, ಶಿವಕುಮಾರ, ಮಹಾಂತೇಶ ಹಾಗೂ ಪಟ್ಟಣ, ಭಾರತಿ ವಿದ್ಯಾಮಂದಿರ, ಸಿರನೂರ, ಹಾಗರಗುಂಡಗಿ, ತಾಡ ತೆಗನೂರು, ಹೊನ್ನಕಿರಣಗಿ ಸೇರಿದಂತೆ ವಿವಿಧ ಗ್ರಾಮಗಳ ಶಾಲಾ ವಿದ್ಯಾರ್ಥಿಗಳು, ಶಿಕ್ಷಕ-ಶಿಕ್ಷಕಿಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.