ADVERTISEMENT

ಬೆಳಕಿನ ಹಬ್ಬಕ್ಕೆ ಭರ್ಜರಿ ಭೋಜನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 14:12 IST
Last Updated 12 ನವೆಂಬರ್ 2020, 14:12 IST
ಶೈಲಜಾ ಬಣ್ಣಯ್ಯ ಹಿರೇಮಠ
ಶೈಲಜಾ ಬಣ್ಣಯ್ಯ ಹಿರೇಮಠ   

ಕಲಬುರ್ಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ದೀಪಾವಳಿ ಎಂದರೆ ಮೊದಲು ನೆನಪಾಗುವುದೇ ಸಿಹಿಖಾದ್ಯಗಳ ಪಟ್ಟಿ. ಹೋಳಿಗೆ, ಶಾವಿಗೆ ಪಾಯಸ, ಬೇಸನ್‌ ಲಡ್ಡುವಿನಿಂದ ಹಿಡಿದು ಹತ್ತಾರು ಬಗೆಯ ಸಿಹಿ– ಖಾರದ ತಿಂಡಿಗಳು ಹಬ್ಬದ ವಿಶೇಷ. ಒಂದೊಂದು ಸಿಹಿಯನ್ನು ಒಂದೊಂದು ದಿನ ಪ್ರತ್ಯೇಕವಾಗಿ ಮಾಡುವುದೇ ಈ ಭಾಗದ ವೈಶಿಷ್ಟ್ಯ.

ಅಂದಹಾಗೆ, ಬಹುಪಾಲು ಗೃಹಿಣಿಯರು ವಾರದ ಹಿಂದಿನಿಂದಲೇ ಹಬ್ಬದ ಭೋಜನಕ್ಕೆ ಏನೇನು ಸಿದ್ಧಪಡಿಸಬೇಕು ಎಂಬ ತಯಾರಿ ಮಾಡಿಕೊಂಡಿದ್ದಾರೆ. ಉಂಡೆ, ಚೂಡಾ, ಶಂಕರಪೋಳಿಯಂಥ ಪದಾರ್ಥಗಳನ್ನು ಈಗಾಗಲೇ ಸಿದ್ಧಪಡಿಸಿಕೊಂಡಿದ್ದಾರೆ. ಕುಟುಂಬದಲ್ಲಿ ಮಕ್ಕಳು, ಪುರುಷರು, ಹಿರಿಯರಿಗೆ ಇಷ್ಟವಾಗುವಂಥ ತಹರೇವಾರು ಖಾದ್ಯಗಳು ಈಗಾಗಲೇ ಘಮಘಮಿಸುತ್ತಿವೆ.

ಯಾವ ದಿನ ಯಾವ ತಿಂಡಿ?: ದೀಪಾವಳಿಯ ಎಲ್ಲ ಸಡಗರಗಳಲ್ಲೂ ಬಲಿಪಾಡ್ಯಮಿಗೆ ಪ್ರಧಾನ ಸ್ಥಾನವಿದೆ. ಆದರೆ, ಇದಕ್ಕೆ ಮುನ್ನುಡಿ ಬರೆಯುವುದು ‘ನೀರು ತುಂಬುವ ಹಬ್ಬ’. ಈ ಬಾರಿ ಶುಕ್ರವಾರ (ನ. 13) ನೀರು ತುಂಬುವ ಹಬ್ಬ. ಇದನ್ನು ವೇದಕಾಲದಲ್ಲಿ ‘ಮಾಸ ಶಿವರಾತ್ರಿ’ ಎಂದೂ ಕರೆದಿದ್ದಾರೆ. ಮನೆಯ ಪಾತ್ರೆಗಳನ್ನೆಲ್ಲ ಖಾಲಿ ಮಾಡಿ ಹೊಸಾಗಿ ನೀರು ತುಂಬುವುದು ಅಂದಿನ ವಿಶೇಷ. ಹೊಸ ಕೊಡ, ಚೊಂಬುಗಳಲ್ಲಿ ‘ಗಂಗೆ’ಯನ್ನು ತುಂಬಿ ಪೂಜೆ ಮಾಡುತ್ತಾರೆ. ಈ ದಿನದ ವಿಶೇಷ ತಿಂಡಿಗಳಲ್ಲಿ ಕರಿದ ಹಾಗೂ ಖಾರದ ಪದಾರ್ಥಗಳೇ ಹೆಚ್ಚು. ವಡೆ, ಚಕ್ಕುಲಿ, ಶಂಕರಪೋಳಿ, ಚೂಡಾ ಸವಿಯುವುದು ಅಂದಿನ ವಿಶೇಷ.‌

ADVERTISEMENT

ಎರಡನೇ ದಿನ ಶನಿವಾರ (ನ. 14) ನರಕ ಚತುರ್ದಶಿ. ಧನಲಕ್ಷ್ಮಿ ಪೂಜೆ ಇಂದಿನ ಹಬ್ಬ. ಮನೆಯ ಸದಸ್ಯರೆಲ್ಲ ಎಣ್ಣೆಮಜ್ಜನ ಮಾಡಿ, ಮಕ್ಕಳು, ಹಿರಿಯರಿಗೆ ಕಂಕಣ ಕಟ್ಟಿ ಆರತಿ ಬೆಳಗುವುದು ವಾಡಿಕೆ. ಮಧ್ಯಾಹ್ನದ ಹೊತ್ತಿಗೆ ಶ್ಯಾವಿಗೆ ಪಾಯಸ– ಹಾಲಿನ ಸವಿರುಚಿ ಭೋಜನ. ವಿಶೇಷವೆಂದರೆ ಈ ಬಾರಿ ಶನಿವಾರ ರಾತ್ರಿ ಹಾಗೂ ಭಾನುವಾರ ನಸುಕಿನ ಮಧ್ಯದಲ್ಲಿ ದೀಪಾವಳಿ ಅಮಾವಾಸ್ಯೆ ಬಂದಿದೆ. ‘ಬಲೀಂದ್ರ ಪೂಜೆ’ ನ. 15ರ ಅಮಾವಾಸ್ಯೆಯ ವಿಶೇಷ. ಈ ದಿನದಿಂದಲೇ ವಿಕ್ರಮ ಸಂವತ್ಸರ ಆರಂಭವಾಗುತ್ತದೆ. ವರ್ತಕರು, ಉದ್ಯಮಿಗಳಿಗೆ ಈ ದಿನ ಅತ್ಯಂತ ಶ್ರೇಷ್ಠವಾದುದು. ಹಾಗಾಗಿ, ವ್ಯಾಪಾರದ ಪ್ರತಿಯೊಂದು ವಸ್ತುವನ್ನೂ ಪೂಜೆ ಮಾಡುವುದು ಸಂಪ್ರದಾಯ. ಹಳ್ಳಿಗಳಲ್ಲಿ ‘ಕರಿ ಹರಿಯುವ ದಿನ’ ಆಚರಿಸಿದ ಬಳಿಕ ಬಿಸಿಬಿಸಿ ಹೋಳಿಗೆ– ಬೆಲ್ಲದ ಪಾಣಕ ಸವಿಯುವ ಸಂಭ್ರಮ.

ನಾಲ್ಕನೇ ದಿನ ಸೋಮವಾರ (ನ. 16) ದೀಪಾವಳಿಯ ಮುಖ್ಯ ಹಬ್ಬ ‘ಬಲಿಪಾಡ್ಯಮಿ’. ಈ ದಿನವನ್ನು ಕಾರ್ತಿಕ ಸೋಮವಾರ ಎಂದೇ ವೇದಗಳಲ್ಲಿ ಕರೆಯಲಾಗಿದೆ. ಮನೆ– ಮನಗಳಲ್ಲಿನ ಅಂಧಕಾರ ದೂರಾಗಿ ಬೆಳಗು ಹರಿಯಲಿ ಎಂಬ ಕಾರಣಕ್ಕೆ ದೀಪಾವಳಿ ಆಚರಿಸಲಾಗುತ್ತದೆ. ಹಬ್ಬದ ದಿನ ಬಹುಪಾಲು ಎಲ್ಲ ಸಿಹಿತಿಂಡಿಗಳನ್ನೂ ಚಪ್ಪರಿಸುವುದೇ ಸಂಭ್ರಮ. ವೈವಿಧ್ಯಮಯ ಲಡ್ಡು, ಕೋಡುಬಳೆ, ಚೆಕ್ಕುಲಿ, ಶೇಂಗಾ ಹೋಳಿಗೆ, ಜಾಮೂನು, ಕೊಬ್ಬರಿ ಉಂಡೆ, ಕರ್ಚಿಕಾಯಿ, ಕಡಬು, ಗಿಲಗಂಚಿ, ಗಾಟೆ, ಹಪ್ಪಳ...

ಅಬ್ಬಾ! ಒಂದೇ ಎರಡೇ? ಗರಿಗರಿ ಬಟ್ಟೆಯ ಹಾಕಿಕೊಂಡು ಇಡೀ ದಿನ ಕುರುಕಲು ತಿನ್ನುವುದೇ ಸಡಗರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.