ADVERTISEMENT

ಒಂದೇ ಶಾಲೆ ಶಿಕ್ಷಕರೇ ಇಲ್ಲಿ ಎದುರಾಳಿಗಳು!

ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ಚುನಾವಣೆ ಇಂದು

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 2:35 IST
Last Updated 3 ಜುಲೈ 2022, 2:35 IST
ಬಾಬರ ಪಟೇಲ
ಬಾಬರ ಪಟೇಲ   

ಕಾಳಗಿ: ಕಾಳಗಿ ಪಟ್ಟಣವು ನೂತನ ತಾಲ್ಲೂಕು ಕೇಂದ್ರವಾದ ನಂತರ ಮೊದಲ ಬಾರಿಗೆ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕಕ್ಕೆ ಭಾನುವಾರ (ಜು.3) ಚುನಾವಣೆ ನಡೆಯುತ್ತಿದ್ದು, ಈ ಚುನಾವಣೆಯಲ್ಲಿ ನಿರ್ದೇಶಕ ಸ್ಥಾನಕ್ಕೆ ಕಾಳಗಿ ಸರ್ಕಾರಿ ಪ್ರೌಢಶಾಲೆ ಶಿಕ್ಷಕರಾದ ಬಾಬರ ಪಟೇಲ ಹಾಗೂ ಶಿವಕುಮಾರ ಶಾಸ್ತ್ರಿ ಪರಸ್ಪರಎದುರಾಳಿಗಳಾಗಿರುವುದು ನೋಡುಗರಿಗೆ ಹುಬ್ಬೇರಿಸುವಂತೆ ಮಾಡಿದೆ.

ಕಾಳಗಿ ಪ್ರೌಢ ಶಾಲೆ ಶಿಕ್ಷಕರಾಗಿರುವ ಬಾಬರ ಪಟೇಲ ಅವರು ಚಿತ್ತಾಪುರ ತಾಲ್ಲೂಕು ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರ ಸಂಘದ ಹಾಲಿ ಅಧ್ಯಕ್ಷರು. ಅಲ್ಲಿ ಅವರ ಅವಧಿ ಮುಗಿಯು ಹಂತಕ್ಕೆ ಬಂದಿರುವುದರಿಂದ ಕಾಳಗಿಯಲ್ಲಿ ಕಣಕ್ಕಿಳಿದಿದ್ದಾರೆ.ಇವರ ವಿರುದ್ಧ ಕಾಳಗಿ ಶಾಲೆಯಲ್ಲೇ ಶಿಕ್ಷಕರಾಗಿರುವ ಶಿವಕುಮಾರ ಶಾಸ್ತ್ರಿ ಸಹ ಸ್ಪರ್ಧಿಸಿದ್ದಾರೆ.

ಬಾಬರ ಪಟೇಲ ಅವರು ಮೂವರು ಅಭ್ಯರ್ಥಿಗಳ ಗುಂಪು ರಚಿಸಿ ಅದರ ನೇತೃತ್ವ ವಹಿಸಿಕೊಂಡಿದ್ದರೆ, ಶಿವಕುಮಾರ ಶಾಸ್ತ್ರಿ ಅವರು ಏಳು ಅಭ್ಯರ್ಥಿಗಳ ಗುಂಪು ರಚಿಸಿಕೊಂಡು ಪ್ರಚಾರಕ್ಕೆ ಇಳಿದಿದ್ದಾರೆ.

ADVERTISEMENT

ಪೇಠಶಿರೂರ ಶಾಲೆಯ ಶ್ರೀರಂಗ ಜಾಧವ ಅವರನ್ನು ಬಾಬರ ಪಟೇಲ ತಮ್ಮ ಗುಂಪಿಗೆ ಸೇರಿಸಿಕೊಂಡಿದ್ದರೆ, ಅದೇ ಶಾಲೆಯ ಇನ್ನೊಬ್ಬ ಶಿಕ್ಷಕ ಇಜಾಜ್ ಅಲಿ ಅವರನ್ನು ತಮ್ಮ ಗುಂಪಿಗೆ ಸೆಳೆದುಕೊಂಡಿರುವ ಶಿವಕುಮಾರ ಶಾಸ್ತ್ರಿ, ಬಾಬರ ಪಟೇಲ ಅವರಿಗೆ ಪೈಪೋಟಿ ನೀಡುತ್ತಿದ್ದಾರೆ.

ನಿರ್ದೇಶಕರ 7 ಸ್ಥಾನಗಳಿಗೆ ನಡೆಯುತ್ತಿರುವ ಈ ಚುನಾವಣಾ ಕಣದಲ್ಲಿ ಪೇಠಶಿರೂರ ಪ್ರೌಢ ಶಾಲೆ ಶಿಕ್ಷಕರಾದ ಇಜಾಜ ಅಲಿ, ಶ್ರೀರಂಗ ಜಾಧವ, ನಿಪ್ಪಾಣಿ ಶಾಲೆಯ ಚಂದ್ರಕಾಂತ ತಳವಾರ, ಬೆಡಸೂರ ಶಾಲೆಯ ಜಗನ್ನಾಥ ಕೆ.ಸಿ, ಮಳಗ (ಕೆ) ಶಾಲೆಯ ಮಹಾಂತೇಶ, ತೆಂಗಳಿ ಶಾಲೆಯ ಸೇವಂತಾ ಚವಾಣ, ಕೋಡ್ಲಿ ಶಾಲೆಯ ಶಂಕರ ಬಿರಾದಾರ, ಸೂಗೂರ (ಕೆ) ಶಾಲೆಯ ಶ್ರೀಧರ ಬಳಿಗೇರ ಮತ್ತು ಚಿಂಚೋಳಿ (ಎಚ್) ಶಾಲೆಯ ವೃಷಬೇಂದ್ರ ಎಸ್.ಹಿರೇಮಠ ಸೇರಿ ಒಟ್ಟು 11 ಮಂದಿ ಸ್ಪರ್ಧಿಸಿದ್ದಾರೆ.

ಕರ್ನಾಟಕ ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಕಾರ್ಯಕಾರಿ ಸಮಿತಿ ಚುನಾವಣೆ ಇಂದು (ಜು.3)ನಡೆಯಲಿದೆ.

ಚುನಾವಣೆಯಲ್ಲಿ ನಿರ್ದೇಶಕರ 7 ಸ್ಥಾನಗಳಿಗೆ ಒಟ್ಟು 9 ಸರ್ಕಾರಿ ಪ್ರೌಢ ಶಾಲೆಗಳ 11 ಜನ ಶಿಕ್ಷಕರು ಸ್ಪರ್ಧೆ ಮಾಡಿದ್ದಾರೆ. ಸ್ಥಳೀಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮತಗಟ್ಟೆ ಸ್ಥಾಪಿಸಲಾಗಿದ್ದು, ಭಾನುವಾರ ಬೆಳಿಗ್ಗೆ 9ಗಂಟೆಯಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ.

ಒಟ್ಟು 173 ಮತದಾರರು ಇದ್ದು, ಮತದಾನ ಮುಗಿಯುತ್ತಿದ್ದಂತೆ ಎಣಿಕೆ ಕಾರ್ಯ ಆರಂಭವಾಗಲಿದೆ. ಜುಲೈ 9ರಂದು ಪದಾಧಿಕಾರಿಗಳ ಆಯ್ಕೆ ನಡೆಯಲಿದೆ. ಈ ಎಲ್ಲಾ ಚುನಾವಣೆ ಪ್ರಕ್ರಿಯೆಗೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಅಣಿವೀರಪ್ಪ ನಾಗೂರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.