ADVERTISEMENT

‘ದಂಡಗುಂಡ ದೇವಸ್ಥಾನ ಜಿಲ್ಲಾಡಳಿತದ ಸುಪರ್ದಿಗೆ ಪಡೆಯಿರಿ’

ಮಠಾಧೀಶ, ಮುಖಂಡರಿಂದ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 15:36 IST
Last Updated 31 ಜುಲೈ 2024, 15:36 IST

ಚಿತ್ತಾಪುರ: ‘ದಂಡಗುಂಡ ದೇವಸ್ಥಾನದ ವಿವಾದ ಇತ್ಯರ್ಥ ಆಗುವವರೆಗೂ ದೇವಸ್ಥಾನಕ್ಕೆ ಸಂಬಂದಪಟ್ಟ ಎಲ್ಲ ಖಾತೆಗಳನ್ನು ಜಿಲ್ಲಾಧಿಕಾರಿ ತಮ್ಮ ಸುಪರ್ದಿಗೆ ಪಡೆದುಕೊಳ್ಳಬೇಕು. ಎಲ್ಲ ಖಾತೆಗಳ ನಿರ್ವಹಣೆ ತಾವೇ ವಹಿಸಿಕೊಳ್ಳಬೇಕು’ ಎಂದು ತಾಲ್ಲೂಕಿನ ದಂಡಗುಂಡದ ಸಂಗಮೇಶ್ವರ ಮಹಾಸಂಸ್ಥಾನ ಮಠದ ಸಂಗನಬಸವ ಶಿವಾಚಾರ್ಯ, ಗ್ರಾಮದ ಮುಖಂಡರಾದ ಮರೆಪ್ಪ ಹಳಬೋ, ಶಿವಪ್ಪ, ಭೀಮಣ್ಣ ಹಳಬೋ, ವಿದ್ಯಾನಂದ ಹಿರೇಮಠ, ಬಸನಗೌಡ ಅವರು ಒತ್ತಾಯಿಸಿದ್ದಾರೆ.

ಜುಲೈ 29ರಂದು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿರುವ ಅವರು, ‘ದೇವಸ್ಥಾನಕ್ಕೆ ಬಿಡುವ ಗೂಳಿ, ತೆಂಗಿನ ಕಾಯಿ ಹರಾಜು ಕಾನೂನು ಬಾಹಿರವಾಗಿ ಮಾಡುತ್ತಿದ್ದು, ಈ ಬಾರಿ ಜಿಲ್ಲಾಧಿಕಾರಿಯೇ ಹರಾಜು ಮಾಡಬೇಕು. ಶ್ರಾವಣಮಾಸ ಮುಗಿಯುವವರೆಗೂ ಮಠದಲ್ಲಿ ಹಾಗೂ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಯಾವುದೇ ಧಾರ್ಮಿಕ ಆಚರಣೆಗಳಿಗೆ ಧಕ್ಕೆ ಬಾರದ ಹಾಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಮುಂಬರುವ ಜಾತ್ರಾ ಮಹೋತ್ಸವ ಜಿಲ್ಲಾಡಳಿತ ಅಥವಾ ತಾಲ್ಲೂಕು ಆಡಳಿತವೇ ನಡೆಸಿಕೊಂಡು ಹೋಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

‘ದಂಡಗುಂಡ ಬಸವೇಶ್ವರ ದೇವಸ್ಥಾನದ ಟ್ರಸ್ಟ್ ಕುರಿತು ನ್ಯಾಯಾಲಯ ನೀಡಿರುವ ಆದೇಶ ಉಲ್ಲಂಘಿಸಿ ಟ್ರಸ್ಟ್ ಸದಸ್ಯರಿಂದ ಸಭೆ, ಸಮಾರಂಭ, ಹಣಕಾಸಿನ ವ್ಯವಹಾರ, ಗೋವುಗಳ ಮಾರಾಟ ನಡೆಯುತ್ತಿದೆ. ಸ.ನಂ. 170ರಲ್ಲಿ 12 ಎಕರೆ 39 ಗುಂಟೆ ಜಮೀನು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದನ್ನು ತಡೆಹಿಡಿಯಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

‘ಸಂಗಮೇಶ್ವರ ಮಹಾಸಂಸ್ಥಾನ ಮಠದ ಕಟ್ಟಡಕ್ಕೆ ಹಾನಿಯಾಗುವುದನ್ನು ತಡೆಯಬೇಕು. ಸರ್ಕಾರದಿಂದ ಆಡಳಿತ ಅಧಿಕಾರಿ ನೇಮಕ ಆಗುವವರೆಗೂ ಮತ್ತು ಸೇವಾ ಸಮಿತಿ ರಚನೆ ಆಗುವವರೆಗೂ ದೇವಸ್ಥಾನಕ್ಕೆ ಬರುವ ದೇಣಿಗೆ ವಸ್ತುಗಳ ಮಾರಾಟ, ಹಣಕಾಸಿನ ವ್ಯವಹಾರ ಮಾಡುವುದನ್ನು ತಡೆಹಿಡಿಯಬೇಕು. ಟ್ರಸ್ಟ್‌ನವರು ನ್ಯಾಯಾಲಯದ ಆದೇಶ ಉಲ್ಲಂಘಿಸಿ ಯಾವುದೇ ಪ್ರಕ್ರಿಯೆ ನಡೆಸಿದರೆ ಅವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.